IPL 2024: ರಣರೋಚಕ ಹೋರಾಟದಲ್ಲಿ ಸನ್‌ರೈಸರ್ಸ್ ಹೈದರಾಬಾದ್ಗೆ ರೋಚಕ ಜಯ
IPL 2024: ಈ ಹಂತದಲ್ಲಿ ಕಣಕ್ಕಿಳಿದ ನಿತೀಶ್ ರೆಡ್ಡಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 37 ಎಸೆತಗಳನ್ನು ಎದುರಿಸಿದ ನಿತೀಶ್ 5 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 64 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು.
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 23ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ಜಯ ಸಾಧಿಸಿದೆ. ಚಂಡೀಗಢದ ಮಹಾರಾಜ ಯದವೀಂದ್ರ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕರಾದ ಟ್ರಾವಿಸ್ ಹೆಡ್ (21) ಹಾಗೂ ಅಭಿಷೇಕ್ ಶರ್ಮಾ (16) ಬೇಗನೆ ಔಟಾದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಐಡೆನ್ ಮಾರ್ಕ್ರಾಮ್ (0) ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಕಣಕ್ಕಿಳಿದ ನಿತೀಶ್ ರೆಡ್ಡಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 37 ಎಸೆತಗಳನ್ನು ಎದುರಿಸಿದ ನಿತೀಶ್ 5 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 64 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು.
183 ರನ್ಗಳ ಸ್ಪರ್ಧಾತ್ಮಕ ಗುರಿ ಪಡೆದ ಪಂಜಾಬ್ ಕಿಂಗ್ಸ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕ ಆಟಗಾರ ಜಾನಿ ಬೈರ್‌ಸ್ಟೋವ್ (0) ಶೂನ್ಯಕ್ಕೆ ಔಟಾದರೆ, ಆ ಬಳಿಕ ಪ್ರಭ್ಸಿಮ್ರಾನ್ ಸಿಂಗ್ (4) ಕೂಡ ಬೇಗನೆ ನಿರ್ಗಮಿಸಿದರು. ಇನ್ನು ನಾಯಕ ಶಿಖರ್ ಧವನ್ 14 ರನ್ ಬಾರಿಸಿ ಪೆವಿಲಿಯನ್ಗೆ ಹಿಂತಿರುಗಿದರು.
ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಯಾಮ್ ಕರನ್ (29), ಸಿಕಂದರ್ ರಾಝ (28) ಉತ್ತಮ ಕೊಡುಗೆ ನೀಡಿದರು. ಇನ್ನು ಅಂತಿಮ ಹಂತದಲ್ಲಿ ಅಬ್ಬರಿಸಿದ ಶಶಾಂಕ್ ಸಿಂಗ್ ಹಾಗೂ ಅಶುತೋಷ್ ಶರ್ಮಾ ಪಂದ್ಯವನ್ನು ರಣರೋಚಕಘಟ್ಟದತ್ತ ಕೊಂಡೊಯ್ದರು.
ಕೊನೆಯ ಓವರ್ನಲ್ಲಿ ಪಂಜಾಬ್ ಕಿಂಗ್ಸ್ ತಂಡ 29 ರನ್ಗಳ ಗುರಿ ಪಡೆದಿತ್ತು. ಜಯದೇವ್ ಉನಾದ್ಕಟ್ ಎಸೆದ ಅಂತಿಮ ಓವರ್ನ ಮೊದಲ ಎಸೆತದಲ್ಲೇ ಅಶುತೋಷ್ ಸಿಕ್ಸ್ ಬಾರಿಸಿದರು. ಇದಾದ ಬಳಿಕ 2 ವೈಡ್ ಮೂಡಿಬಂತು. ಇನ್ನು 2ನೇ ಎಸೆತದಲ್ಲಿ ಮತ್ತೊಂದು ಸಿಕ್ಸ್ ಸಿಡಿಸಿದರು.
3ನೇ ಮತ್ತು 4ನೇ ಎಸೆತಗಳಲ್ಲಿ ಎರಡೆರಡು ರನ್ ಓಡಿದರು. ಮತ್ತೊಂದು ವೈಡ್. 5ನೇ ಎಸೆತದಲ್ಲಿ 1 ರನ್. ಕೊನೆಯ ಎಸೆತದಲ್ಲಿ 9 ರನ್ ಬೇಕಿದ್ದಾಗ ಶಶಾಂಕ್ ಸಿಂಗ್ ಸಿಕ್ಸ್ ಸಿಡಿಸಿದರು. ಈ ಸಿಕ್ಸ್ನ ಹೊರತಾಗಿಯೂ ಸನ್‌ರೈಸರ್ಸ್ ಹೈದರಾಬಾದ್ ತಂಡವು 2 ರನ್ಗಳ ರೋಚಕ ಜಯ ಸಾಧಿಸಿತು.
ಈ ರೋಚಕ ಪೈಪೋಟಿಯಲ್ಲಿ ವಿರೋಚಿತ ಹೋರಾಟ ಪ್ರದರ್ಶಿಸಿದ ಶಶಾಂಕ್ ಸಿಂಗ್ 25 ಎಸೆತಗಳಲ್ಲಿ 1 ಸಿಕ್ಸ್, 6 ಫೋರ್ಗಳೊಂದಿಗೆ ಅಜೇಯ 46 ರನ್ ಬಾರಿಸಿದರೆ, ಅಶುತೋಷ್ ಶರ್ಮಾ 15 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 33 ರನ್ ಸಿಡಿಸಿ ಮಿಂಚಿದರು.
ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಪ್ರಭ್ಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸ್ಯಾಮ್ ಕರನ್, ಸಿಕಂದರ್ ರಾಝ, ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಕಗಿಸೊ ರಬಾಡ.
ಇದನ್ನೂ ಓದಿ: IPL 2024: ಐಪಿಎಲ್ನಲ್ಲಿ ಅಪರೂಪದ ದಾಖಲೆ ಬರೆದ ರವೀಂದ್ರ ಜಡೇಜಾ
ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ಶಹಬಾಝ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್ ಉನಾದ್ಕಟ್, ಟಿ ನಟರಾಜನ್.
Published On - 11:27 pm, Tue, 9 April 24