IPL 2024: ವಿರಾಟ್ ಕೊಹ್ಲಿಗಾಗಿ ಹಲಸಿನ ಹಣ್ಣು ತಂದ RCB ಅಭಿಮಾನಿ
IPL 2024 RCB vs CSK: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈವರೆಗೆ 32 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ವೇಳೆ ಆರ್ಸಿಬಿ 10 ಪಂದ್ಯಗಳಲ್ಲಿ ಗೆದ್ದರೆ, ಸಿಎಸ್ಕೆ ತಂಡವು 21 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿದೆ. ಇದೀಗ 33ನೇ ಬಾರಿ ಉಭಯ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಬಾರಿ ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದೆ ಎಂಬುದೇ ಕುತೂಹಲ.
ಐಪಿಎಲ್ನ (IPL 2024) 68ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ವೇಳೆ ವಿರಾಟ್ ಕೊಹ್ಲಿಗೆ (Virat Kohli) ವಿಶೇಷ ಉಡುಗೊರೆ ನೀಡಲು ಅಭಿಮಾನಿಯೊಬ್ಬರು ಮುಂದಾಗಿದ್ದಾರೆ. ಅದು ಅಂತಿಂಥ ಉಡುಗೊರೆಯಲ್ಲ, ಬದಲಾಗಿ ವಿಶ್ವ ಪ್ರಸಿದ್ದ ತೂಬಗೆರೆ ಹಲಸಿನ ಹಣ್ಣಿನ ಗಿಫ್ಟ್.
ಹೌದು, ಆರ್ಸಿಬಿ ತಂಡದ ಅಪ್ಪಟ ಅಭಿಮಾನಿಯಾಗಿರುವ ಅಂಬರೀಶ್ ಅವರು ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯ ಹಲಸಿನ ಹಣ್ಣಿನೊಂದಿಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ಅಲ್ಲದೆ ಆರ್ಸಿಬಿ-ಸಿಎಸ್ಕೆ ನಡುವಣ ಪಂದ್ಯದ ವೇಳೆ ಈ ಹಲಸಿನ ಹಣ್ಣನ್ನು ವಿರಾಟ್ ಕೊಹ್ಲಿಗೆ ಉಡುಗೊರೆಯಾಗಿ ನೀಡುವ ಬಯಕೆ ಹೊಂದಿದ್ದಾರೆ.
ದೇಶ ವಿದೇಶದಲ್ಲಿ ಪ್ರಸಿದ್ದಿಯಾಗಿರುವ ತೂಬಗೆರೆ ಹಲಸಿನ ಹಣ್ಣನ್ನು ವಿರಾಟ್ ಕೊಹ್ಲಿಗೆ ನೀಡಿ ಆರ್ಸಿಬಿ ತಂಡಕ್ಕೆ ಶುಭಕೋರಬೇಕು. ಈ ಮೂಲಕ ಸಿಎಸ್ಕೆ ತಂಡದ ವಿರುದ್ಧ ಆರ್ಸಿಬಿ ಗೆದ್ದು ಪ್ಲೇಆಫ್ಗೆ ಪ್ರವೇಶಿಸಬೇಕೆಂದು ವೃತ್ತಿಯಲ್ಲಿ ರೈತರಾಗಿರುವ ಅಂಬರೀಶ್ ಅವರ ಮಹದಾಶೆ.
ಅದರಂತೆ ಇದೀಗ ಘಾಟಿ ಸುಬ್ರಮಣ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿರುವ ಅಂಬರೀಶ್, ಇತಿಹಾಸ ಪ್ರಸಿದ್ಧ ತೂಬಗೆರೆಯ ಹಲಸಿನ ಹಣ್ಣಿನೊಂದಿಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ಕರುನಾಡ ಮಣ್ಣಿನಲ್ಲಿ ಮೂಡಿಬಂದಿರುವ ಈ ವಿಶ್ವ ಪ್ರಸಿದ್ಧ ಜಾಕ್ ಫ್ರೂಟ್ ವಿರಾಟ್ ಕೊಹ್ಲಿಯ ಕೈ ಸೇರಲಿದೆಯಾ ಕಾದು ನೋಡಬೇಕಿದೆ.
ದೇವೇಗೌಡರಿಗೂ ಹಲಸಿನ ಹಣ್ಣಿನ ಗಿಫ್ಟ್:
ಇಂದು (ಮೇ 18) 91ನೇ ಹುಟ್ಟುಹಬ್ಬ ಆಚರಿಸಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರ ಅವರಿಗೂ ಅಂಬರೀಶ್ ತೂಬಗೆರೆ ಹಲಸಿನ ಹಣ್ಣನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ಜೆಡಿಎಸ್ನ ವರಿಷ್ಠ ನಾಯಕನಿಗೆ ಶುಭಾಶಯ ಕೋರಿದ್ದಾರೆ.
ಪ್ಲೇಆಫ್ ನಿರ್ಣಾಯಕ ಪಂದ್ಯ:
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಆರ್ಸಿಬಿ ಮತ್ತು ಸಿಎಸ್ಕೆ ನಡುವೆ ಪ್ಲೇಆಫ್ ನಿರ್ಣಾಯಕ ಪಂದ್ಯ ನಡೆಯಲಿದೆ. ಅಂದರೆ ಈ ಪಂದ್ಯದಲ್ಲಿ ಸಿಎಸ್ಕೆ ತಂಡ ಜಯ ಸಾಧಿಸಿದರೆ ಪ್ಲೇಆಫ್ ಹಂತಕ್ಕೇರಲಿದೆ. ಒಂದು ವೇಳೆ ಆರ್ಸಿಬಿ ತಂಡವು 11 ಎಸೆತಗಳನ್ನು ಬಾಕಿ ಇರಿಸಿ ಅಥವಾ 18 ರನ್ಗಳಿಂದ ಜಯ ಸಾಧಿಸಿದರೆ ಪ್ಲೇಆಫ್ಗೆ ಎಂಟ್ರಿ ಕೊಡಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಉಭಯ ತಂಡಗಳಿಂದ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.
ಇದನ್ನೂ ಓದಿ: RCB vs CSK: 5 ಓವರ್ಗಳ ಪಂದ್ಯ ನಡೆದರೆ, RCB ಎಷ್ಟು ಎಸೆತಗಳಲ್ಲಿ ಗೆಲ್ಲಬೇಕು? ಇಲ್ಲಿದೆ ಮಾಹಿತಿ
ಉಭಯ ತಂಡಗಳ ಮುಖಾಮುಖಿ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈವರೆಗೆ 32 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ವೇಳೆ ಆರ್ಸಿಬಿ 10 ಪಂದ್ಯಗಳಲ್ಲಿ ಗೆದ್ದರೆ, ಸಿಎಸ್ಕೆ ತಂಡವು 21 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿದೆ. ಅಂದರೆ ಇಲ್ಲಿ ಉಭಯ ತಂಡಗಳ ಮುಖಾಮುಖಿಯಲ್ಲಿ ಸಿಎಸ್ಕೆ ತಂಡ ಮೇಲುಗೈ ಹೊಂದಿರುವುದು ಸ್ಪಷ್ಟ. ಇದಾಗ್ಯೂ ನಿರ್ಣಾಯಕ ಮ್ಯಾಚ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ಗೆ ಸೋಲುಣಿಸಿ ಆರ್ಸಿಬಿ ಪ್ಲೇಆಫ್ಗೆ ಪ್ರವೇಶಿಸಲಿದೆಯಾ ಕಾದು ನೋಡಬೇಕಿದೆ.