IPL 2024: ಹ್ಯಾಟ್ರಿಕ್ ಜಯ; ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನಕ್ಕೇರಿದ ಆರ್‌ಸಿಬಿ..!
IPL 2024: ಆರ್ಸಿಬಿಯ ತವರು ನೆಲ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024ರ 52ನೇ ಪಂದ್ಯದಲ್ಲಿ ಆತಿಥೇಯ ಫಾಫ್ ಡುಪ್ಲೆಸಿಸ್ ಪಡೆ, ಗುಜರಾತ್ ಟೈಟಾನ್ಸ್ ತಂಡವನ್ನು 4 ವಿಕೆಟ್ಗಳಿಂದ ಮಣಿಸಿದೆ. ಇದು ಈ ಆವೃತ್ತಿಯಲ್ಲಿ ಆರ್ಸಿಬಿಯ 4ನೇ ಗೆಲುವಾಗಿದ್ದು, ಒಟ್ಟು 8 ಅಂಕಗಳೊಂದಿಗೆ ಆರ್‌ಸಿಬಿ ಇದೀಗ ಪಾಯಿಂಟ್ ಪಟ್ಟಿಯಲ್ಲಿ ಏಕಾಏಕಿ ಮೂರು ಸ್ಥಾನ ಮೇಲೇರಿ, ಇದೀಗ 7ನೇ ಸ್ಥಾನಕ್ಕೆ ಬಂದು ಕುಳಿತಿದೆ.

ಆರ್ಸಿಬಿಯ ತವರು ನೆಲ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024ರ (IPL 2024) 52ನೇ ಪಂದ್ಯದಲ್ಲಿ ಆತಿಥೇಯ ಫಾಫ್ ಡುಪ್ಲೆಸಿಸ್ ಪಡೆ, ಗುಜರಾತ್ ಟೈಟಾನ್ಸ್ (Royal Challengers Bengaluru vs Gujarat Titans) ತಂಡವನ್ನು 4 ವಿಕೆಟ್ಗಳಿಂದ ಮಣಿಸಿದೆ. ಇದು ಈ ಆವೃತ್ತಿಯಲ್ಲಿ ಆರ್ಸಿಬಿಯ 4ನೇ ಗೆಲುವಾಗಿದ್ದು, ಒಟ್ಟು 8 ಅಂಕಗಳೊಂದಿಗೆ ಆರ್‌ಸಿಬಿ ಇದೀಗ ಪಾಯಿಂಟ್ ಪಟ್ಟಿಯಲ್ಲಿ ಏಕಾಏಕಿ ಮೂರು ಸ್ಥಾನ ಮೇಲೇರಿ, ಇದೀಗ 7ನೇ ಸ್ಥಾನಕ್ಕೆ ಬಂದು ಕುಳಿತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ 19.3 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಶಾರುಖ್ ಖಾನ್ 37 ರನ್ ಹಾಗೂ ರಾಹುಲ್ ತೆವಾಟಿಯಾ 35 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ಆರಂಭಿಕರಾದ ಫಾಫ್ ಡುಪ್ಲೆಸಿಸ್ (Faf du Plessis) ಹಾಗೂ ವಿರಾಟ್ ಕೊಹ್ಲಿಯ (Virat Kohli) ಸ್ಫೋಟಕ ಆರಂಭದ ನೆರವಿನಿಂದ ಇನ್ನು 38 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆಬೀರಿತು.
ತತ್ತರಿಸಿದ ಗುಜರಾತ್ ಇನ್ನಿಂಗ್ಸ್
ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ, ಗುಜರಾತ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ನಾಯಕ ಫಾಫ್ ಡು ಪ್ಲೆಸಿಸ್ ಅವರ ನಿರ್ಧಾರವನ್ನು ಆರ್‌ಸಿಬಿ ಬೌಲರ್‌ಗಳು ಸಮರ್ಥಿಸಿಕೊಂಡರು. ಆರಂಭದಲ್ಲೇ ಗುಜರಾತ್ ಬ್ಯಾಟರ್ಗಳ ಹೆಡೆಮುರಿ ಕಟ್ಟಿದ ಆರ್‌ಸಿಬಿ ವೇಗಿಗಳು ಗುಜರಾತ್ ತಂಡವನ್ನು 19.3 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಮಾಡಿದರು. ತಂಡದ ಪರ ಗರಿಷ್ಠ ರನ್ ಕಲೆಹಾಕಿದ ಶಾರುಖ್ ಖಾನ್ 24 ಎಸೆತಗಳಲ್ಲಿ 37 ರನ್ ಗಳಿಸಿದರು. ರಾಹುಲ್ ತೆವಾಟಿಯಾ ಕೂಡ 35 ರನ್‌ಗಳ ಕಾಣಿಕೆ ನೀಡಿದರೆ, ಡೇವಿಡ್ ಮಿಲ್ಲರ್ 30 ರನ್ ಬಾರಿಸಿದರು. ಉಳಿದಂತೆ ರಶೀದ್ ಖಾನ್ 18 ರನ್ ಮತ್ತು ವಿಜಯ್ ಶಂಕರ್ 10 ರನ್ ಕೊಡುಗೆ ನೀಡಿದರು. ಇದನ್ನು ಬಿಟ್ಟರೆ ತಂಡದ ಉಳಿದ ಬ್ಯಾಟರ್ಗಳಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿ ಬರಲಿಲ್ಲ. ಇತ್ತ ಇಂದಿನ ಪಂದ್ಯದಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದ ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್, ಯಶ್ ದಯಾಳ್ ಮತ್ತು ವಿಜಯಕುಮಾರ್ ವೈಶಾಖ್ ತಲಾ 2 ವಿಕೆಟ್ ಪಡೆದರು. ಕ್ಯಾಮರೂನ್ ಗ್ರೀನ್ ಮತ್ತು ಕರ್ಣ್ ಶರ್ಮಾ ತಲಾ 1 ವಿಕೆಟ್ ಉರುಳಿಸಿದರು.
ಆರ್ಸಿಬಿಗೆ ಸ್ಫೋಟಕ ಆರಂಭ
ಗುಜರಾತ್ ತಂಡವನ್ನು 148 ರನ್‌ಗಳಿಗೆ ಕಟ್ಟಿಹಾಕಿ ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ಪರ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಸ್ಫೋಟಕ ಆರಂಭ ಆರಂಭ ನೀಡಿದರು. ಇಬ್ಬರೂ ಕೇವಲ 35 ಎಸೆತಗಳಲ್ಲಿ 92 ರನ್‌ಗಳ ಸ್ಫೋಟಕ ಜೊತೆಯಾಟ ನಡೆಸಿದರು. ಈ ನಡುವೆ ಫಾಫ್ ಅರ್ಧಶತಕ ಕೂಡ ಪೂರೈಸಿದರು. ಫಾಫ್ 23 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 64 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಆರ್‌ಸಿಬಿ 10 ಓವರ್ ಒಳಗೆ ಜಯದ ನಗೆ ಬೀರಲಿದೆ ಎಂದು ತೊರುತ್ತಿತ್ತು.
25 ರನ್‌ಗಳ ಅಂತರದಲ್ಲಿ 6 ವಿಕೆಟ್
ಆದರೆ ನಾಯಕ ಫಾಫ್ ಡುಪ್ಲೆಸಿಸ್ ವಿಕೆಟ್ ಬಳಿಕ ಆರ್‌ಸಿಬಿ ಬ್ಯಾಟರ್ಗಳ ಪೆವಿಲಿಯನ್ ಪರೇಡ್ ಆರಂಭವಾಯಿತು. ಹೀಗಾಗಿ ಆರ್‌ಸಿಬಿ ಕೇವಲ 25 ರನ್‌ಗಳ ಅಂತರದಲ್ಲಿ ಬರೋಬ್ಬರಿ 6 ವಿಕೆಟ್ ಕಳೆದುಕೊಂಡಿತು. ವಿಲ್ ಜಾಕ್ಸ್ 1, ರಜತ್ ಪಾಟಿದಾರ್ 2, ಗ್ಲೆನ್ ಮ್ಯಾಕ್ಸ್ ವೆಲ್ 4 ಮತ್ತು ಕ್ಯಾಮರೂನ್ ಗ್ರೀನ್ 1 ಮತ್ತು ವಿರಾಟ್ ಕೊಹ್ಲಿ 42 ರನ್ ಗಳಿಸಿ ಔಟಾದರು. ನಂತರ ಬಂದ ದಿನೇಶ್ ಕಾರ್ತಿಕ್ ಮತ್ತು ಸ್ವಪ್ನಿಲ್ ಸಿಂಗ್ ಜೊತೆಯಾಟ ನಡೆಸಿ ಆರ್‌ಸಿಬಿ ಗೆಲುವಿಗೆ ಕಾರಣರಾದರು. ದಿನೇಶ್ ಕಾರ್ತಿಕ್ 12 ಎಸೆತಗಳಲ್ಲಿ ಅಜೇಯ 21 ರನ್ ಗಳಿಸಿದರೆ, ಸ್ವಪ್ನಿಲ್ ಸಿಂಗ್ 15 ರನ್‌ಗಳ ಕೊಡುಗೆ ನೀಡಿದರು. ಗುಜರಾತ್ ಪರ ಜೋಶುವಾ ಲಿಟಲ್ ಒಬ್ಬರೇ 4 ವಿಕೆಟ್ ಹಾಗೂ ನೂರ್ ಅಹ್ಮದ್ 2 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:03 pm, Sat, 4 May 24