ಐಪಿಎಲ್ (IPL 2024) ಆರಂಭಕ್ಕೂ ಮುನ್ನ ತಂಡದ ನಾಯಕ ಹಾರ್ದಿಕ್ ಪಾಂಡ್ಯರನ್ನು (Hardik Pandya) ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯೊಂದಿಗೆ ಟ್ರೇಡ್ ಮಾಡಿಕೊಂಡು ಕೊಂಚ ಹಿನ್ನಡೆ ಅನುಭವಿಸಿದ್ದ ಗುಜರಾತ್ ಟೈಟಾನ್ಸ್ (Gujarat Titans) ತಂಡಕ್ಕೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ತಂಡದ ಪ್ರಮುಖ ಬೌಲರ್ ಮೊಹಮ್ಮದ್ ಶಮಿ (Mohammed Shami) ಇದೀಗ ಇಡೀ ಐಪಿಎಲ್ನಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ. ಕಳೆದೆರಡು ಆವೃತ್ತಿಗಳಿಂದ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯುತ್ತಿರುವ ಶಮಿ, ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದರು. ಆದರೀಗ ಶಮಿ ಅಲಭ್ಯತೆ ಗುಜರಾತ್ ತಂಡಕ್ಕೆ ಸಂಕಷ್ಟ ತಂದೊಡ್ಡಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಕಾಲಿನ ನೋವಿನಿಂದ ಬಳಲುತ್ತಿರುವ ಶಮಿ, ಲಂಡನ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ತಿಳಿದುಬಂದಿದೆ.
2022 ರಲ್ಲಿ ಗುಜರಾತ್ ಟೈಟಾನ್ ತಂಡವನ್ನು ಸೇರಿಕೊಂಡ ಶಮಿ, ತಂಡ ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆ ಸೀಸನ್ನಲ್ಲಿ ಶಮಿ ಒಟ್ಟು 20 ವಿಕೆಟ್ಗಳನ್ನು ಕಬಳಿಸಿ, ಪ್ರಮುಖ ವಿಕೆಟ್ ಟೇಕರ್ ಎನಿಸಿಕೊಂಡಿದ್ದರು. ಆ ನಂತರ 2023 ರಲ್ಲಿ ನಡೆದ ಐಪಿಎಲ್ನಲ್ಲಿ ಮತ್ತೊಮ್ಮೆ ಗುಜರಾತ್ ತಂಡದ ಬೌಲಿಂಗ್ ಜೀವಾಳ ಎನಿಸಿಕೊಂಡಿದ್ದ ಶಮಿ, ಈ ಸೀಸನ್ನಲ್ಲೂ ಆಡಿದ 17 ಪಂದ್ಯಗಳಲ್ಲಿ 28 ವಿಕೆಟ್ಗಳನ್ನು ಪಡೆದು ತಂಡ ಫೈನಲ್ಗೇರುವಲ್ಲಿ ಪ್ರಮುಖ ಕೊಡುಗೆ ನೀಡಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಸಿಎಸ್ಕೆ ಎದುರು ಸೋತಿದ್ದ ಗುಜರಾತ್ ತಂಡ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗುವ ಅವಕಾಶವನ್ನು ಕೈಚೆಲ್ಲಿತ್ತು.
ಇದೀಗ ಇಡೀ ಸೀಸನ್ನಿಂದ ಶಮಿ ಹೊರಬಿದ್ದಿರುವುದು ಗುಜರಾತ್ ಟೈಟಾನ್ಸ್ ತಂಡವನ್ನು ಸಂಕಷ್ಟಕ್ಕೆ ದೂಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೇಲೆ ಹೇಳಿದಂತೆ ತಂಡದ ಯಶಸ್ವಿ ನಾಯಕ ಹಾರ್ದಿಕ್ ಪಾಂಡ್ಯ ಈಗಾಗಲೇ ತಂಡ ತೊರೆದಿದ್ದಾರೆ. ಇದೀಗ ಶಮಿ ಆಡದ ಕಾರಣ ಮತ್ತೊಬ್ಬ ಅನುಭವಿ ಆಟಗಾರನನ್ನು ಮಿಸ್ ಮಾಡಿಕೊಳ್ಳುತ್ತಿರುವುದು ಗುಜರಾತ್ ಪಾಲಿಗೆ ದೊಡ್ಡ ಹಿನ್ನಡೆಯಾಗಿದೆ. ಇದೆಲ್ಲದರ ನಡುವೆ ಕೇನ್ ವಿಲಿಯಮ್ಸನ್ರಂತಹ ಅನುಭವಿ ಆಟಗಾರ ತಂಡದಲ್ಲಿದ್ದರೂ ಗುಜರಾತ್ ಫ್ರಾಂಚೈಸಿ, ಈ ಬಾರಿ ತಂಡದ ನಾಯಕತ್ವವನ್ನು ಶುಭ್ಮನ್ ಗಿಲ್ಗೆ ನೀಡಿದೆ. ಇದೀಗ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಕಣಕ್ಕಿಳಿಯುತ್ತಿರುವ ಗಿಲ್, ಈ ಇಬ್ಬರು ಅನುಭವಿಗಳ ಅಲಭ್ಯತೆಯಲ್ಲಿ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
India pacer Mohammed Shami ruled out of IPL due to left ankle injury which would require surgery in the UK: BCCI source tells PTI
— Press Trust of India (@PTI_News) February 22, 2024
ಗುಜರಾತ್ ಟೈಟಾನ್ಸ್ ಈಗ ಶಮಿ ಬದಲಿಗೆ ಇತರ ವೇಗದ ಬೌಲರ್‌ಗಳನ್ನು ತಂಡಕ್ಕೆ ಸೇರಿಸಿಕೊಳ್ಳಲು ಬಯಸಿದೆ. ಆದರೆ, ವೇಗದ ಬೌಲರ್‌ಗಳಾದ ಉಮೇಶ್ ಯಾದವ್, ಕಾರ್ತಿಕ್ ತ್ಯಾಗಿ ಮತ್ತು ಸ್ಪೆನ್ಸರ್ ಜಾನ್ಸನ್ ತಂಡದಲ್ಲಿದ್ದಾರೆ. ಆದರೆ ಪ್ರಸ್ತುತ ಉಮೇಶ್ ಯಾದವ್ ಫಾರ್ಮ್ನಲ್ಲಿಲ್ಲ. ಕಾರ್ತಿಕ್ ತ್ಯಾಗಿ ಕೂಡ ಯುವ ಬೌಲರ್ ಆಗಿದ್ದು, ಅವರಿಗೂ ಅನುಭವದ ಕೊರತೆ ಇದೆ. ಇತ್ತ ಸ್ಪೆನ್ಸರ್ ಜಾನ್ಸನ್ಗೂ ಕೂಡ ಐಪಿಎಲ್ನಲ್ಲಿ ಹೆಚ್ಚು ಆಡಿದ ಅನುಭವವಿಲ್ಲ. ಹೀಗಾಗಿ ಶಮಿ ಕೊರತೆಯನ್ನು ಸರಿದೂಗಿಸುವುದು ಗುಜರಾತ್ ತಂಡಕ್ಕೆ ಅಸಾಧ್ಯವಾಗಿದೆ.
ಇಲ್ಲಿ ದೊಡ್ಡ ಪ್ರಶ್ನೆ ಏನೆಂದರೆ ಐಪಿಎಲ್ನಿಂದ ಹೊರಬಿದ್ದಿರುವ ಮೊಹಮ್ಮದ್ ಶಮಿ ಟಿ20 ವಿಶ್ವಕಪ್ ವೇಳೆಗೆ ಫಿಟ್ ಆಗುತ್ತಾರಾ? ಎಂಬುದು. ಐಪಿಎಲ್ ಮುಗಿದ ತಕ್ಷಣ ಟಿ20 ವಿಶ್ವಕಪ್ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿದೆ. ಶಮಿ ತುತ್ತಾಗಿರುವ ಗಾಯವನ್ನು ನೋಡಿದರೆ ಟೀಂ ಇಂಡಿಯಾ ಬಹುಶಃ ಶಮಿ ಇಲ್ಲದೆಯೇ ಟಿ20 ವಿಶ್ವಕಪ್‌ಗೆ ಎಂಟ್ರಿ ಕೊಡಬೇಕಾಗುತ್ತಿದೆ. ಒಂದು ವೇಳೆ ಶಮಿ ವಿಶ್ವಕಪ್ ವೇಳಗೆ ಫಿಟ್ ಆದರೂ ಸಹ ಅವರು ಯಾವುದೇ ಅಭ್ಯಾಸವಿಲ್ಲದೆ ಕಣಕ್ಕಿಳಿಯಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ತಂಡದಲ್ಲಿ ಆಡಳಿತ ಮಂಡಳಿ ಶಮಿ ಬಗ್ಗೆ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:49 pm, Thu, 22 February 24