IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಭಾರೀ ಮುಖಭಂಗಕ್ಕೊಳಗಾಗಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಆರ್ಸಿಬಿ ತಂಡವು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಈ ಹೀನಾಯ ಸೋಲಿನ ಬೆನ್ನಲ್ಲೇ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ ಪಿಚ್ ಬಗ್ಗೆ ಅಪಸ್ವರ ಎತ್ತಿದ್ದಾರೆ.
ಆರ್ಸಿಬಿ ವಿರುದ್ಧದ ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಕೆಆರ್ ತಂಡದ ನಾಯಕ ಅಜಿಂಕ್ಯ ರಹಾನೆ, ‘ಸ್ಪಿನ್ ಬೌಲರ್‌ಗಳಿಗೆ ಸಹಾಯಕವಾಗುವಂತಹ ಪಿಚ್ ನಮಗೆ ಬೇಕು. ಆದರೆ ಈ ಪಿಚ್ ಕಳೆದ ಒಂದೂವರೆ ದಿನಗಳಿಂದ ಮುಚ್ಚಿಡಲಾಗಿತ್ತು ಎಂದಿದ್ದರು.
ಅಲ್ಲದೆ ಕೆಕೆಆರ್ ತಂಡದಲ್ಲಿ ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿಯಂತಹ ಗುಣಮಟ್ಟದ ಸ್ಪಿನ್ನರ್‌ಗಳಿದ್ದಾರೆ. ಅವರು ಯಾವುದೇ ಪಿಚ್‌ನಲ್ಲಿ ಬೌಲಿಂಗ್ ಮಾಡಬಲ್ಲರು. ಇದಾಗ್ಯೂ ನಮಗೆ ತವರು ಮೈದಾನವು ಸಹಾಯಕವಾಗಬೇಕೆಂದು ರಹಾನೆ ಆಗ್ರಹಿಸಿದ್ದರು.
ಐಪಿಎಲ್ ನಿಯಮಗಳ ಪ್ರಕಾರ, ಫ್ರಾಂಚೈಸಿಗಳು ಪಿಚ್‌ನಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ನಾನು ಕ್ಯುರೇಟರ್ ಆಗಿದ್ದಾಗಿನಿಂದ ಈಡನ್ ಗಾರ್ಡನ್ಸ್ ಮೈದಾನದ ಪಿಚ್ ಒಂದೇ ಆಗಿದೆ. ಇದನ್ನು ಬದಲಾಯಿಸಲಾಗುವುದಿಲ್ಲ ಎಂದು ಕ್ಯುರೇಟರ್ ಸುಜನ್ ಮುಖರ್ಜಿ ತಿಳಿಸಿದ್ದಾರೆ.
ಏಕೆಂದರೆ ಆರ್ಸಿಬಿ ಮತ್ತು ಕೆಕೆಆರ್ ನಡುವಣ ಪಂದ್ಯದಲ್ಲಿ ಕೃನಾಲ್ ಪಾಂಡ್ಯ (3 ವಿಕೆಟ್) ಮತ್ತು ಸುಯಾಶ್ ಶರ್ಮಾ (1 ವಿಕೆಟ್) ವಿಕೆಟ್ ಕಬಳಿಸಿದ್ದರು. ಹಾಗೆಯೇ ಕೆಕೆಆರ್ ಪರ ವರುಣ್ ಚಕ್ರವರ್ತಿ (1 ವಿಕೆಟ್) ಹಾಗೂ ಸುನಿಲ್ ನರೈನ್ (1 ವಿಕೆಟ್) ಸಹ ವಿಕೆಟ್ ಪಡೆದಿದ್ದರು. ಈ ಪಿಚ್ ಸ್ಪಿನ್ ಸ್ನೇಹಿಯಾಗಿಲ್ಲದಿದ್ದರೆ, ಆರ್ಸಿಬಿ ಬೌಲರ್ಗಳು 4 ವಿಕೆಟ್ ಪಡೆದಿರುವುದು ಹೇಗೆ? ಸುಜನ್ ಮುಖರ್ಜಿ ಪ್ರಶ್ನಿಸಿದ್ದಾರೆ.
2015 ರಲ್ಲಿ ಸೌರವ್ ಗಂಗೂಲಿ ಅವರು ಸುಜನ್ ಮುಖರ್ಜಿ ಅವರನ್ನು ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಕ್ಯುರೇಟರ್ ಆಗಿ ನೇಮಿಸಿದರು. ಅಂದಿನಿಂದ ಇಲ್ಲಿನ ಪಿಚ್ ಸಮತೋಲಿತ ಮತ್ತು ಕ್ರೀಡಾಭರಿತವಾಗಿದೆ.
ಇದಾಗ್ಯೂ 2023 ರಲ್ಲಿ ಕೆಕೆಆರ್ ತಂಡಕ್ಕೆ ‘ಹೋಮ್ ಅಡ್ವಾಂಟೇಜ್’ ಸಿಗಲಿಲ್ಲ ಎಂದು ಅಂದಿನ ನಾಯಕ ನಿತೀಶ್ ರಾಣಾ ದೂರಿದ್ದರು. ಆದರೆ 2024 ರಲ್ಲಿ ಕೆಕೆಆರ್ ತಂಡವು ತವರಿನಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಹೀಗಾಗಿ ಪಿಚ್ ಬಗ್ಗೆ ಯಾವುದೇ ತಕರಾರು ಇರಲಿಲ್ಲ.
ಇದನ್ನೂ ಓದಿ: David Warner: ಡೇವಿಡ್ ವಾರ್ನರ್ಗೆ ಒಲಿದ ನಾಯಕತ್ವ..!
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಸೋಲಿನ ಬೆನ್ನಲ್ಲೇ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಪಿಚ್ ಬದಲಿಸಬೇಕೆಂದು ಆಗ್ರಹಿಸಿದ್ದಾರೆ. ಈ ಬೇಡಿಕೆಗೆ ಕೊಲ್ಕತ್ತಾ ಕ್ರಿಕೆಟ್ ಬೋರ್ಡ್ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.