ಐದು ಟ್ರೋಫಿ ಗೆದ್ದಿದ್ದೇವೆ, ಯಾವಾಗಲೂ ಗೆಲ್ಲೋಕೆ ಆಗಲ್ಲ: ಹಾರ್ದಿಕ್ ಪಾಂಡ್ಯ ಅಚ್ಚರಿಯ ಹೇಳಿಕೆ

IPL 2025 PBKS vs MI: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2025) 69ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 184 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 18.3 ಓವರ್​ಗಳಲ್ಲಿ 187 ರನ್ ಬಾರಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಐದು ಟ್ರೋಫಿ ಗೆದ್ದಿದ್ದೇವೆ, ಯಾವಾಗಲೂ ಗೆಲ್ಲೋಕೆ ಆಗಲ್ಲ: ಹಾರ್ದಿಕ್ ಪಾಂಡ್ಯ ಅಚ್ಚರಿಯ ಹೇಳಿಕೆ
Hardik Pandya

Updated on: May 27, 2025 | 8:34 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸೋಲನುಭವಿಸಿದೆ. ಜೈಪುರದ ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ಶ್ರೇಯಸ್ ಅಯ್ಯರ್ ಮುಂಬೈ ಪಡೆಯನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 184 ರನ್​ ಕಲೆಹಾಕಿದ್ದರು.

ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಪರ ಪ್ರಿಯಾಂಶ್ ಆರ್ಯ (62) ಹಾಗೂ ಜೋಶ್ ಇಂಗ್ಲಿಸ್ (73) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ ತಂಡವು 18.3 ಓವರ್​ಗಳಲ್ಲಿ ಗುರಿ ತಲುಪಿತು. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಮೊದಲ ಕ್ವಾಲಿಫೈಯರ್ ಪಂದ್ಯವಾಡುವುದು ಖಚಿತವಾದರೆ, ಅತ್ತ ಮುಂಬೈ ಇಂಡಿಯನ್ಸ್ ಎಲಿಮಿನೇಟರ್ ಪಂದ್ಯದಲ್ಲಿ ಕಣಕ್ಕಿಳಿಯಬೇಕಿದೆ.

ಹೀಗಾಗಿಯೇ ಈ ಸೋಲಿನ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ನಿರಾಶರಾಗಿದ್ದರು. ಅಲ್ಲದೆ ಪಂದ್ಯದ ಬಳಿಕ ಮಾತನಾಡಿದ ಪಾಂಡ್ಯ, ನಾವು 20 ರನ್​ಗಳನ್ನು ಕಡಿಮೆ ಕಲೆಹಾಕಿದ್ದೇವೆ ಎಂದೆನಿಸುತ್ತದೆ. ಇದುವೇ ಸೋಲಿಗೆ ಕಾರಣ. ಏಕೆಂದರೆ ಪಂಜಾಬ್ ಕಿಂಗ್ಸ್ ಈ ಪಿಚ್​ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ.

ನಾವು ಇನ್ನೂ ಹೆಚ್ಚುವರಿ 20 ರನ್​ಗಳನ್ನು ಕಲೆಹಾಕಬೇಕಿತ್ತು. ನಾವು ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಎಡವಿದ್ದೇವೆ. ಇದು ಕೇವಲ ಒಂದು ಸಣ್ಣ ತಪ್ಪು. ಇದರಿಂದ ಕಲಿತು, ನಾವು ನಾಕೌಟ್‌ ಪಂದ್ಯಕ್ಕಾಗಿ ಸಿದ್ಧರಾಗುತ್ತೇವೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಈ ಸೋಲಿನ ಹೊರತಾಗಿಯೂ ಮುಂಬೈ ಇಂಡಿಯನ್ಸ್ ತಂಡವು  ಉತ್ತಮ ಕ್ರಿಕೆಟ್ ಆಡುತ್ತಿದೆ. ಇಂದು ನಮ್ಮ ಅತ್ಯುತ್ತಮ ಕ್ರಿಕೆಟ್ ಆಡಲು ಸಾಧ್ಯವಾಗದ ದಿನಗಳಲ್ಲಿ ಒಂದು ಅಷ್ಟೇ. ಐಪಿಎಲ್ ಅಂದರೆನೇ ಹಾಗೆ, ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ಐದು ಟ್ರೋಫಿಗಳನ್ನು ಗೆದ್ದಿದೆ. ಆದರೆ ಯಾವಾಗಲೂ ಪಂದ್ಯಗಳನ್ನು ಗೆಲ್ಲೋದಕ್ಕೆ ಆಗುವುದಿಲ್ಲ.

ಕೆಲವೊಮ್ಮೆ ಸೋಲುಗಳು ಎದುರಾಗುತ್ತವೆ. ಈ ಸೋಲಿನಿಂದ ಪಾಠ ಕಲಿತು ಮುಂದೆ ಸಾಗಬೇಕಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ನಾವು ಮಾಡಿ ತಪ್ಪೇನು ಎಂಬುದನ್ನು ವಿಮರ್ಶಿಸಲಿದ್ದೇವೆ. ಎಲ್ಲಿ ನಾವು 20 ರನ್​ಗಳನ್ನು ಗಳಿಸಲು ವಿಫಲರಾಗಿದ್ದೇವೆ ಎಂಬುದನ್ನು ಅವಲೋಕಿಸಬೇಕಿದೆ. ಈ ಎಲ್ಲಾ ಲೆಕ್ಕಚಾರಗಳ ಮೂಲಕ ಎಲಿಮಿನೇಟರ್ ಪಂದ್ಯದಲ್ಲಿ ಕಂಬ್ಯಾಕ್ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಇದನ್ನೂ ಓದಿ: IPL 2025: ಬಂದ್ಬಿಟ್ಟ… RCB ತಂಡಕ್ಕೆ ರಣ ಬೇಟೆಗಾರ ಬಂದೇ ಬಿಟ್ಟ..!

ಮೇ 29 ರಂದು ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಆರ್​ಸಿಬಿ ಅಥವಾ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಮೇ 30 ರಂದು ನಡೆಯಲಿರುವ ಎಲಿಮಿನೇಟರ್ ಮ್ಯಾಚ್​ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಆರ್​ಸಿಬಿ ಅಥವಾ ಗುಜರಾತ್ ಟೈಟಾನ್ಸ್ ತಂಡಗಳು ಸೆಣಸಲಿದೆ. ಅಂದರೆ ಇಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್​ಸಿಬಿ ಗೆದ್ದರೆ, ರಾಯಲ್ ಪಡೆ ಮೊದಲ ಕ್ವಾಲಿಫೈಯರ್​ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಸೋತರೆ ಮುಂಬೈ ಇಂಡಿಯನ್ಸ್ ಜೊತೆ ಆರ್​ಸಿಬಿ ಎಲಿಮಿನೇಟರ್ ಪಂದ್ಯವಾಡಲಿದೆ.