IPL 2025: ಲಕ್ನೋ ಮಾಲೀಕನನ್ನು ಹೊರತುಪಡಿಸಿ ಮಿಕ್ಕವರಿಗೆಲ್ಲ ಧನ್ಯವಾದ ತಿಳಿಸಿದ ರಾಹುಲ್
KL Rahul: ಈ ಹಿಂದೆ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದ ರಾಹುಲ್, ತಂಡದೊಂದಿಗಿನ ಸಂಬಂಧ ಕೊನೆಗೊಂಡ ನಂತರ ತಮ್ಮ ಹಳೆಯ ಫ್ರಾಂಚೈಸಿಯ ತರಬೇತುದಾರರು, ತಂಡದ ಸಹ ಆಟಗಾರರು ಮತ್ತು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಆದರೆ ರಾಹುಲ್, ತಂಡದ ಮಾಲೀಕ ಸಂಜೀವ್ ಗೋಯಂಕಾ ಬಗ್ಗೆ ಒಂದೇ ಒಂದು ಮಾತುಗಳನ್ನಾಡಿಲ್ಲ.
ಐಪಿಎಲ್ ಮೆಗಾ ಹರಾಜು ಮುಗಿದಿದ್ದು, ಭಾಗಶಃ ಆಟಗಾರರು ಮುಂದಿನ ಐಪಿಎಲ್ನಲ್ಲಿ ಹೊಸ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಕಳೆದ ಬಾರಿ ಡೆಲ್ಲಿ ಪರ ಆಡಿದ್ದ ರಿಷಬ್ ಪಂತ್, ಈ ಬಾರಿ ಲಕ್ನೋ ಪರ ಆಡಿದರೆ, ಇತ್ತ ಕಳೆದ ಬಾರಿ ಲಕ್ನೋ ಪರ ಆಡಿದ್ದ ಕನ್ನಡಿಗ ಕೆಎಲ್ ರಾಹುಲ್ ಈ ಬಾರಿ ಡೆಲ್ಲಿ ಪರ ಕಣಕ್ಕಿಳಿಯಲಿದ್ದಾರೆ. ಡೆಲ್ಲಿ ಫ್ರಾಂಚೈಸಿ, ರಾಹುಲ್ಗೆ 14 ಕೋಟಿ ರೂ. ಖರೀದಿಸಿದೆ. ಹೀಗಾಗಿ ಈ ಹಿಂದೆ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದ ರಾಹುಲ್, ತಂಡದೊಂದಿಗಿನ ಸಂಬಂಧ ಕೊನೆಗೊಂಡ ನಂತರ ತಮ್ಮ ಹಳೆಯ ಫ್ರಾಂಚೈಸಿಯ ತರಬೇತುದಾರರು, ತಂಡದ ಸಹ ಆಟಗಾರರು ಮತ್ತು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಆದರೆ ರಾಹುಲ್, ತಂಡದ ಮಾಲೀಕ ಸಂಜೀವ್ ಗೋಯಂಕಾ ಬಗ್ಗೆ ಒಂದೇ ಒಂದು ಮಾತನಾಡದಿರುವುದು ಈ ಇಬ್ಬರ ನಡುವಿನ ಮೈನಸ್ಸು ಎಷ್ಟು ಗಂಭೀರವಾಗಿದೆ ಎಂಬುದನ್ನು ನಾವಿಲ್ಲಿ ಅರಿತುಕೊಳ್ಳಬಹುದಾಗಿದೆ.
ಸಂಜೀವ್ ಗೋಯಂಕಾ ಹೆಸರಿಲ್ಲ
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ರಾಹುಲ್, ಲಕ್ನೋ ತಂಡದೊಂದಿಗಿನ ಈ ಪ್ರಯಾಣವನ್ನು ಅವಿಸ್ಮರಣೀಯವಾಗಿ ಮಾಡಿದ ತರಬೇತುದಾರರು, ಸಹ ಆಟಗಾರರು ಮತ್ತು ಅಭಿಮಾನಿಗಳಿಗೆ ನಾನು ಕೃತಜ್ಞನಾಗಿದ್ದೇನೆ. ನಂಬಿಕೆ, ನೆನಪುಗಳು, ಶಕ್ತಿ ಮತ್ತು ಅಚಲ ಬೆಂಬಲಕ್ಕಾಗಿ ಧನ್ಯವಾದಗಳು. ಹೊಸ ಆರಂಭಕ್ಕೆ ಸಿದ್ಧವಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ತಂಡದ ಕೋಚ್, ಸಹ ಆಟಗಾರರನ್ನು ಇಲ್ಲಿ ಉಲ್ಲೇಖಿಸಿರುವ ರಾಹುಲ್, ತಂಡದ ಮಾಲೀಕ ಸಂಜೀವ್ ಗೋಯಂಕಾ ಬಗ್ಗೆ ಒಂದೇ ಒಂದು ಮಾತನ್ನು ಸಹ ಹೇಳಿಲ್ಲ.
Grateful to the coaches, teammates and the fans who made this journey with LSG unforgettable. Thank you for the trust, memories, energy and unwavering support. Here’s to new beginnings! ✌️ pic.twitter.com/Vz5XFeDjwV
— K L Rahul (@klrahul) November 27, 2024
ಇಬ್ಬರ ನಡುವೆ ಮನಸ್ತಾಪ
ವಾಸ್ತವವಾಗಿ 2022 ರಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಸೇರಿಕೊಂಡಿದ್ದ ರಾಹುಲ್, ಕಳೆದ ಮೂರು ಆವೃತ್ತಿಗಳಲ್ಲಿ ತಂಡವನ್ನು ಪ್ರತಿನಿಧಿಸಿದಲ್ಲದೆ, ನಾಯಕನಾಗಿಯೂ ತಂಡವನ್ನು ಮುನ್ನಡೆಸಿದ್ದರು. ಆದರೆ ಕಳೆದ ಆವೃತ್ತಿಯಲ್ಲಿ ಲಕ್ನೋ ತಂಡಕ್ಕೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇತ್ತ ರಾಹುಲ್ ಕೂಡ ಆಟಗಾರನಾಗಿ ಮತ್ತು ನಾಯಕನಾಗಿ ಎಡವಿದ್ದರು. ಇದರ ಜೊತೆಗೆ ಕಳೆದ ಆವೃತ್ತಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದ ತಂಡದ ಮಾಲೀಕ ಸಂಜೀವ್ ಗೋಯಾಂಕ, ನಾಯಕ ರಾಹುಲ್ರನ್ನು ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು. ಆ ಬಳಿಕ ಈ ಇಬ್ಬರ ನಡುವೆ ವೈಮನಸು ಮೂಡಿದೆ ಎಂದು ಹೇಳಲಾಗುತ್ತಿತ್ತು. ಆದರೆ ಆ ನಂತರವೂ ಈ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಮೆಗಾ ಹರಾಜಿಗೂ ಮುನ್ನ ರಾಹುಲ್ರನ್ನು ತಂಡದಿಂದ ಕೈಬಿಡಲಾಗಿತ್ತು.
ಏಟಿಗೆ ಎದುರೇಟು
ಆ ಬಳಿಕ ರಿಟೆನ್ಷನ್ ಪಟ್ಟಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದ ಸಂಜೀವ್, ‘ತಮ್ಮ ಹಿತಾಸಕ್ತಿಗಾಗಿ ಅಲ್ಲ, ಗೆಲುವಿನ ಮನಸ್ಥಿತಿ ಹೊಂದಿರುವ ಮತ್ತು ತಂಡಕ್ಕಾಗಿ ಆಡುವಂತಹ ಆಟಗಾರರನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಬಯಸಿದ್ದೇನೆ ಎಂದಿದ್ದರು. ಸಂಜೀವ್ ಅವರ ಈ ಹೇಳಿಕೆ ಸಂಚಲನ ಮೂಡಿಸಿದ್ದಲ್ಲದೆ, ಈ ಹೇಳಿಕೆಯ ಮೂಲಕ ಅವರು ಕೆಎಲ್ ರಾಹುಲ್ಗೆ ಅವಮಾನ ಮಾಡಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶಗೊಂಡಿದ್ದರು. ಇದೀಗ ಲಕ್ನೋ ತಂಡಕ್ಕೆ ಧನ್ಯವಾದ ತಿಳಿಸಿರುವ ರಾಹುಲ್, ತಂಡದ ಮಾಲೀಕ ಸಂಜೀವ್ರನ್ನು ಕಡೆಗಣಿಸುವ ಮೂಲಕ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ