
ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಯುವ ವೇಗಿ ಮಥೀಶ ಪತಿರಾಣ ಮಹೇಂದ್ರ ಸಿಂಗ್ ಧೋನಿ (MS Dhoni) ಅವರನ್ನು ಹಾಡಿ ಹೊಗಳಿದ್ದಾರೆ. ಅದು ಸಹ ಅವರು ನನ್ನ ಕ್ರಿಕೆಟಿಂಗ್ ಫಾದರ್ ಎನ್ನುವ ಮೂಲಕ ಎಂಬುದು ವಿಶೇಷ. ಚೆನ್ನೈ ಸೂಪರ್ ಕಿಂಗ್ಸ್ ಸೋಷಿಯಲ್ ಮೀಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಥೀಶ ಪತಿರಾಣ, ಮಹೇಂದ್ರ ಸಿಂಗ್ ಧೋನಿ ನನಗೆ ತಂದೆಯಂತೆ. ಅವರು ನನ್ನ ಕ್ರಿಕೆಟಿಂಗ್ ಫಾದರ್. ಅವರ ಸಲಹೆಗಳಿಂದಾಗಿ ನಾನು ಇಂದು ಈ ಮಟ್ಟವನ್ನು ತಲುಪಿದ್ದೇನೆ ಎಂದಿದ್ದಾರೆ.
ಇದೇ ವೇಳೆ ಧೋನಿಯನ್ನು ಮೊದಲ ಬಾರಿಗೆ ಭೇಟಿಯಾದದ್ದನ್ನು ನೆನಪಿಸಿಕೊಂಡ ಪತಿರಾಣ, ಅವತ್ತು ಅವರು “ಹಾಯ್ ಮಾಲಿ, ಹೇಗಿದ್ದೀರಿ?” ಎಂದು ಕೇಳಿದರು. ನನ್ನನ್ನು ಧೋನಿ ಸ್ವಾಗತಿಸಿದಾಗ ತನಗೆ ಎಷ್ಟು ಸಂತೋಷವಾಯಿತು ಎಂಬುದನ್ನು ವರ್ಣಿಸಲು ಅಸಾಧ್ಯ.
ನನ್ನ ಬೌಲಿಂಗ್ ಶೈಲಿಯು ಲಸಿತ್ ಮಾಲಿಂಗ ಅವರಂತೆಯೇ ಇದ್ದುದರಿಂದ ಅವರು ನನ್ನನ್ನು “ಮಾಲಿ” ಎಂದು ಕರೆದಿದ್ದರು. ಇದುವೇ ಈಗ ನನ್ನ ನಿಕ್ ನೇಮ್ ಆಗಿ ಮಾರ್ಪಟ್ಟಿದೆ ಎಂದರು.
ಇನ್ನು ಧೋನಿ ನನಗೆ ತಂದೆ ಇದ್ದಂತೆ… ಏಕೆಂದರೆ ನಾನು ಚೆನ್ನೈ ಸೂಪರ್ ಕಿಂಗ್ಸ್ನಲ್ಲಿರುವಾಗ ಅವರು ನನಗೆ ನೀಡುತ್ತಿರುವ ಬೆಂಬಲ, ಮಾರ್ಗದರ್ಶನ ನಿಜಕ್ಕೂ ಅದ್ಭುತ. ನನ್ನ ತಂದೆ ನನ್ನ ಮನೆಯಲ್ಲಿ ಏನು ಮಾಡುತ್ತಾರೋ, ಅದನ್ನೇ ಧೋನಿ ನನಗೆ ಇಲ್ಲಿ ಸೂಚಿಸುತ್ತಾರೆ. ಹೀಗಾಗಿಯೇ ನಾನು ಧೋನಿಯನ್ನು ನನ್ನ ಕ್ರಿಕೆಟ್ ತಂದೆ ಎಂದು ಪರಿಗಣಿಸುತ್ತೇನೆ ಎಂದು ಮಥೀಶ ಪತಿರಾಣ ಹೇಳಿದ್ದಾರೆ.
ಹಾಗೆಯೇ ಧೋನಿ ಬಗ್ಗೆ ಮಾತನಾಡಿದ ಮಥೀಶ ಪತಿರಾಣ ಪೋಷಕರು, ಧೋನಿಯನ್ನು ವರ್ಣಿಸಲು ಪದಗಳೇ ಸಾಲದು. ಅವರು ನಿಜವಾಗಿಯೂ ದೇವರಂತೆ. ಮಥೀಶಾ ತನ್ನ ತಂದೆಯನ್ನು ಗೌರವಿಸುವ ರೀತಿಯಲ್ಲಿಯೇ ಧೋನಿಯನ್ನು ಗೌರವಿಸುತ್ತಾರೆ ಎಂದು ಪತಿರಾಣ ಅವರ ತಾಯಿ ಹೇಳಿದ್ದಾರೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಗೆ ಗಾಯ: ಬಿಗ್ ಅಪ್ಡೇಟ್ ನೀಡಿದ RCB ಕೋಚ್
ಇಂಡಿಯನ್ ಪ್ರೀಮಿಯರ್ ಲೀಗ್ನ 17ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಶನಿವಾರ (ಏ.5) ಸಂಜೆ ಚೆನ್ನೈ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಸಿಎಸ್ಕೆ ತಂಡವು ಗೆಲುವಿನ ಲಯಕ್ಕೆ ಮರಳುವ ವಿಶ್ವಾಸದಲ್ಲಿದೆ. ಅತ್ತ ಸತತ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಮ್ಯಾಚ್ನಲ್ಲೂ ಭರ್ಜರಿ ಜಯ ಸಾಧಿಸುವ ವಿಶ್ವಾಸದಲ್ಲಿದೆ.