
ಜೂನ್ 3 ರಂದು ನಡೆದ ಐಪಿಎಲ್ 2025 (IPL 2025) ರ ಫೈನಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಿತು. ಈ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಪಂಜಾಬ್ ಕಿಂಗ್ಸ್ (RCB vs PBKS) ತಂಡವನ್ನು ಆರು ರನ್‌ಗಳಿಂದ ಸೋಲಿಸುವ ಮೂಲಕ ಮೊದಲ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿತು. ಇದರೊಂದಿಗೆ ಎರಡು ತಿಂಗಳಿಗಿಂತ ಹೆಚ್ಚು ಕಾಲ ನಡೆದ ಈ ಲೀಗ್ಗೆ ಅದ್ದೂರಿ ತೆರೆಬಿದ್ದಿತು. ಪ್ರಶಸ್ತಿ ವಿಜೇತರಿಗೆ ಬಿಸಿಸಿಐ (BCCI) ವತಿಯಿಂದ ಭರ್ಜರಿ ಬಹುಮಾನ ಕೂಡ ಸಿಕ್ಕಿತು. ಇದು ಮಾತ್ರವಲ್ಲದೆ ಈ ಸೀಸನ್‌ನಲ್ಲಿ ಎಲ್ಲಾ ತಂಡಗಳಿಗೂ ನಿರೀಕ್ಷೆಗೂ ಮೀರಿದ ಆದಾಯ ಸಿಕ್ಕಿದೆ. ಫ್ರಾಂಚೈಸಿಗಳ ಆದಾಯ ಒಂದೆಡೆಯಾದರೆ, ಇತ್ತ ಐಪಿಎಲ್ ಆಯೋಜಕ ಬಿಸಿಸಿಐಗೂ 20 ಸಾವಿರ ಕೋಟಿಗೂ ಅಧಿಕ ಆದಾಯ ಹರಿದುಬಂದಿದೆ.
ಐಪಿಎಲ್ ಆಯೋಜಕತ್ವದಿಂದ ಬಿಸಿಸಿಐಗೆ ಅತಿದೊಡ್ಡ ಆದಾಯದ ಮೂಲವೆಂದರೆ ಪ್ರಸಾರ ಶುಲ್ಕ. ಆ ಪ್ರಕಾರ 2025 ರ ಐಪಿಎಲ್ ಪ್ರಸಾರದ ಹಕ್ಕನ್ನು ಬಿಸಿಸಿಐ 9678 ಕೋಟಿ ರೂ.ಗಳಿಗೆ ಮಾರಾಟ ಮಾಡಿತ್ತು. ಅಲ್ಲದೆ ಒಂದು ಪಂದ್ಯದಿಂದ ಸಿಗುವ ಆದಾಯ ಸುಮಾರು 130.7 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಈ ಲೀಗ್‌ನ ಪ್ರಸಾರದ ಹಕ್ಕುಗಳನ್ನು ಸ್ಟಾರ್ ಸ್ಪೋರ್ಟ್ಸ್ ಸ್ವಾಧೀನಪಡಿಸಿಕೊಂಡರೆ, ಡಿಜಿಟಲ್ ಹಕ್ಕುಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಒಡೆತನದ ವಯಾಕಾಮ್ ಸ್ವಾಧೀನಪಡಿಸಿಕೊಂಡಿತ್ತು.
‘ಎಕನಾಮಿಕ್ ಟೈಮ್ಸ್’ ವರದಿಯ ಪ್ರಕಾರ, ಐಪಿಎಲ್ 2025 ರಲ್ಲಿ ಜಾಹೀರಾತುದಾರರ ಸಂಖ್ಯೆ ಶೇ. 27 ರಷ್ಟು ಹೆಚ್ಚಾಗಿ 105 ಕ್ಕೆ ತಲುಪಿತು. ಕಳೆದ ವರ್ಷ, ಟಾಟಾ ಗ್ರೂಪ್ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವವನ್ನು ಮುಂದಿನ ಐದು ವರ್ಷಗಳವರೆಗೆ 2500 ಕೋಟಿ ರೂ.ಗಳಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದ ಪ್ರಕಾರ ಪ್ರತಿ ಆವೃತ್ತಿಗೆ ಟಾಟಾ ಗ್ರೂಪ್ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವಕ್ಕೆ 500 ಕೋಟಿ ರೂ. ನೀಡಲಿದೆ. ಇದರ ಹೊರತಾಗಿ, ಆದಾಯ ಹಂಚಿಕೆ ಮಾದರಿಯ ಆಧಾರದ ಮೇಲೆ ಬಿಸಿಸಿಐ ಅನೇಕ ಕಂಪನಿಗಳಿಂದ ಹಣವನ್ನು ಪಡೆಯುತ್ತದೆ.
IPL 2025: ಮೌನವಾಗಿರಲು ಸಾಧ್ಯವಿಲ್ಲ; ಐಪಿಎಲ್ ತಂಡಗಳಿಗೆ ಲಗಾಮ್ ಹಾಕಲು ಬಿಸಿಸಿಐ ತಯಾರಿ
ಮೂಲಗಳ ಪ್ರಕಾರ, ಬಿಸಿಸಿಐ ಕೇಂದ್ರ, ಪ್ರಾಯೋಜಕತ್ವ ಮತ್ತು ಟಿಕೆಟ್ ಆದಾಯದ 20 ಪ್ರತಿಶತ ಮತ್ತು ಪರವಾನಗಿ ಆದಾಯದ 12.5 ಪ್ರತಿಶತವನ್ನು ಪ್ರತಿ ತಂಡದಿಂದ ಪಡೆಯುತ್ತದೆ. ಬಿಸಿಸಿಐ ಪ್ರತಿ ತಂಡಕ್ಕೂ ಸ್ಥಿರ ಕೇಂದ್ರ ಆದಾಯ ಮತ್ತು ಲೀಗ್‌ನ ಸ್ಥಾನದ ಆಧಾರದ ಮೇಲೆ ವೇರಿಯಬಲ್ ಆದಾಯವನ್ನು ಒದಗಿಸುತ್ತದೆ. 2024 ರ ಆರ್ಥಿಕ ವರ್ಷದಲ್ಲಿ, ಬಿಸಿಸಿಐ ತನ್ನ ಆದಾಯವನ್ನು ಹೆಚ್ಚಿಸಿಕೊಂಡಿದ್ದು, ಬರೋಬ್ಬರಿ 20,686 ಕೋಟಿ ರೂ. ಗಳಿಸಿದೆ. 2023 ರ ಆರ್ಥಿಕ ವರ್ಷದಲ್ಲಿ ಕೂಡ ಬಿಸಿಸಿಐ 16,493 ಕೋಟಿ ರೂ. ಆದಾಯವನ್ನು ಗಳಿಸಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ