2025 ರ ಐಪಿಎಲ್ (IPL 2025) ಅನ್ನು ಗೆಲುವಿನೊಂದಿಗೆ ಆರಂಭಿಸಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಮುಂದಿನ ಪಂದ್ಯದಲ್ಲೇ ಸೋಲಿನ ದೊಡ್ಡ ಆಘಾತ ಎದುರಾಗಿದೆ. ಹೈದರಾಬಾದ್ ತಂಡವು ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ತನ್ನ ತವರಿನಲ್ಲೇ ಸೋಲಿನ ಆಘಾತ ಅನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 20 ಓವರ್‌ಗಳಲ್ಲಿ 190 ರನ್ ಗಳಿಸಿತು, ಇದಕ್ಕೆ ಪ್ರತಿಕ್ರಿಯೆಯಾಗಿ ಲಕ್ನೋ ಸುಲಭವಾಗಿ ಜಯದ ನಗೆ ಬೀರಿತು. ಹೈದರಾಬಾದ್ ತಂಡದ ಗೆಲುವಿನ ಹೀರೋಗಳೆಂದರೆ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಮಿಂಚಿದರೆ, ನಿಕೋಲಸ್ ಪೂರನ್-ಮಿಚೆಲ್ ಮಾರ್ಷ್ ಬ್ಯಾಟಿಂಗ್‌ನಲ್ಲಿ ಮಿಂಚಿದರು. ಠಾಕೂರ್ 4 ವಿಕೆಟ್ ಪಡೆದರೆ, ಪೂರನ್ ಮತ್ತು ಮಾರ್ಷ್ ಅರ್ಧಶತಕ ಗಳಿಸಿದರು.
ಟಾಸ್ ಗೆದ್ದ ಲಕ್ನೋ ನಾಯಕ ರಿಷಭ್ ಪಂತ್ ಹೈದರಾಬಾದ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆರಂಭದಲ್ಲೇ ಹೈದರಾಬಾದ್ ತಂಡ 300 ರನ್ ಗಳಿಸಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಶಾರ್ದೂಲ್ ಠಾಕೂರ್ ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಶಾರ್ದೂಲ್ ತಮ್ಮ ಎರಡನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ ಮತ್ತು ನಂತರ ಇಶಾನ್ ಕಿಶನ್ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡುವ ಮೂಲಕ ಲಕ್ನೋ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದಾಗ್ಯೂ, ಟ್ರಾವಿಸ್ ಹೆಡ್ ಎಂದಿನಂತೆ ಹೊಡಿಬಡಿ ಆಟದ ಮೂಲಕ ಪವರ್‌ಪ್ಲೇನಲ್ಲಿ 62 ರನ್‌ಗಳನ್ನು ಕಲೆಹಾಕಿದರು. ಆದರೆ ಹೆಡ್ ಔಟಾದ ನಂತರ ಎಲ್ಲವೂ ಬದಲಾಯಿತು. 47 ರನ್ ಗಳಿಸಿ ಹೆಡ್ ಪ್ರಿನ್ಸ್ ಯಾದವ್ ಬೌಲಿಂಗ್ ನಲ್ಲಿ ಔಟಾದ ನಂತರ ಹೈದರಾಬಾದ್ ತಂಡ ಆಘಾತಕ್ಕೊಳಗಾಯಿತು. ನಿತೀಶ್ ಕುಮಾರ್ ರೆಡ್ಡಿ 32 ರನ್ ಗಳಿಸಿ ಔಟಾದರೆ, ದುರದೃಷ್ಟವಶಾತ್ ಕ್ಲಾಸೆನ್ 26 ರನ್ ಗಳಿಸಿ ರನೌಟ್ ಆದರು. ಅನಿಕೇತ್ ವರ್ಮಾ 13 ಎಸೆತಗಳಲ್ಲಿ 5 ಸಿಕ್ಸರ್‌ಗಳ ಸಹಾಯದಿಂದ 36 ರನ್ ಗಳಿಸಿದರು. ಇವರ ಆಟದಿಂದಾಗಿ ಹೈದರಾಬಾದ್ ತಂಡವು 190 ರನ್ ಕಲೆಹಾಕಿತು.
ವಾಸ್ತವವಾಗಿ ಕಳೆದೆರಡು ಸೀಸನ್ಗಳಿಂದ ಹೈದರಾಬಾದ್ ತಂಡದ ಬ್ಯಾಟಿಂಗ್ಗೆ ಸಾಕಷ್ಟು ಹೈಪ್ ನೀಡಲಾಗುತ್ತಿದೆ. ಆದರೆ ಲಕ್ನೋ ತಂಡದಲ್ಲೂ ಕೂಡ ರನ್‌ಗಳ ಮಳೆ ಹರಿಸುವ ಬ್ಯಾಟ್ಸ್ಮನ್ಗಳಿದ್ದಾರೆ ಎಂಬುದು ಮತ್ತೊಮ್ಮೆ ಸಾಭೀತಾಯಿತು. ಮಿಚೆಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ ತಾವು ಎಂತಹ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಎಂಬುದನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದರು. ಮಾರ್ಕ್ರಾಮ್ ಬೇಗನೆ ಔಟಾದ ನಂತರ, ಇಬ್ಬರೂ ಬ್ಯಾಟ್ಸ್‌ಮನ್‌ಗಳು ಹೈದರಾಬಾದ್ ಬೌಲರ್‌ಗಳನ್ನು ಹೊಡೆದುರುಳಿಸಿದರು. ಪೂರನ್ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಈ ಸೀಸನ್ನ ಅತ್ಯಂತ ವೇಗದ ಅರ್ಧಶತಕವನ್ನು ದಾಖಲಿಸಿದರು.
IPL 2025: ಯಾವ ತಂಡಕ್ಕೂ ಬೇಡವಾಗಿದ್ದ ಶಾರ್ದೂಲ್ ಈಗ ಐಪಿಎಲ್ನ ನಂ.1 ಬೌಲರ್..!
ಇದಲ್ಲದೆ ಪೂರನ್ ಮತ್ತು ಮಾರ್ಷ್ ಕೇವಲ 19 ಎಸೆತಗಳಲ್ಲಿ ಐವತ್ತು ರನ್‌ಗಳ ಜೊತೆಯಾಟ ಪೂರೈಸಿದರು. ಆ ಬಳಿಕ ಇಬ್ಬರೂ ಕೇವಲ 37 ಎಸೆತಗಳಲ್ಲಿ ಶತಕದ ಜೊತೆಯಾಟವನ್ನು ಮುಟ್ಟಿದರು. ಹೀಗಾಗಿ 7.3 ಓವರ್‌ಗಳಲ್ಲಿ ಲಕ್ನೋ ತಂಡ 100 ರನ್‌ಗಳ ಗಡಿ ತಲುಪಿತು. ಇದರಲ್ಲಿ ಮಿಚೆಲ್ ಮಾರ್ಷ್ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, ಪೂರನ್ 26 ಎಸೆತಗಳಲ್ಲಿ 70 ರನ್ ಗಳಿಸಿ ಔಟಾದರು. ಅಂತಿಮವಾಗಿ ತಂಡ ಐದು ವಿಕೆಟ್‌ಗಳಿಂದ ಗೆದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ ತನ್ನ ಖಾತೆ ತೆರೆಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:26 pm, Thu, 27 March 25