Rishabh Pant: ಮೊದಲ ಗೆಲುವು: ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ರಿಷಭ್ ಪಂತ್ ಏನಂದ್ರು ನೋಡಿ
SRH vs LSG, IPL 2025: ಲಕ್ನೋ ಸೂಪರ್ ಜೈಂಟ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಎಲ್ಎಸ್ಜಿ ಕ್ಯಾಪ್ಟನ್ ರಿಷಭ್ ಪಂತ್ ಕೆಲ ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಪಂದ್ಯ ಗೆದ್ದಿರುವುದರಿಂದ ದೊಡ್ಡ ಸಮಾಧಾನವಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರು (ಮಾ. 28): ಐಪಿಎಲ್ 2025 ರ 7 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ (LSG vs SR) ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಲಕ್ನೋ ಸೂಪರ್ ಜೈಂಟ್ಸ್ ತಂಡ ಟಾಸ್ ಗೆದ್ದು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. ಹೈದರಾಬಾದ್ ಪಿಚ್ ಪ್ರಕಾರ ಈ ಸ್ಕೋರ್ ಸಾಕಷ್ಟು ಕಡಿಮೆ. ಇದಕ್ಕೆ ಪ್ರತಿಯಾಗಿ ಲಕ್ನೋ ತಂಡ ಕೇವಲ 16.1 ಓವರ್‌ಗಳಲ್ಲಿ ಗುರಿಯನ್ನು ತಲುಪಿತು. ನಿಕೋಲಸ್ ಪೂರನ್ ಅವರ 70 ರನ್‌ಗಳ ನೆರವಿನಿಂದ ಟೂರ್ನಿಯಲ್ಲಿ ಮೊದಲ ಗೆಲುವು ಕಂಡಿತು. ಪಂದ್ಯ ಮುಗಿದ ಬಳಿಕ ಎಲ್ಎಸ್ಜಿ ನಾಯಕ ರಿಷಭ್ ಪಂತ್ ಕೆಲ ವಿಚಾರ ಹಂಚಿಕೊಂಡಿದ್ದಾರೆ.
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಲಕ್ನೋ ತಂಡದ ಕ್ಯಾಪ್ಟನ್ ರಿಷಭ್ ಪಂತ್, ಈ ಪಂದ್ಯ ಗೆದ್ದಿರುವುದರಿಂದ ದೊಡ್ಡ ಸಮಾಧಾನವಾಗಿದೆ. ನೀವು ಗೆದ್ದಾಗ ತುಂಬಾ ಎತ್ತರಕ್ಕೆ ಹೋಗಬಾರದು ಅಥವಾ ಸೋತಾಗ ತುಂಬಾ ಕೆಳಮಟ್ಟಕ್ಕೆ ಹೋಗಬಾರದು. ನನ್ನ ಮಾರ್ಗದರ್ಶಕರು ಅನೇಕ ಸಲಹೆ ನೀಡಿದ್ದಾರೆ, ಅವರು ಹೇಳಿದ ಹಾಗೆ ನಾನು ಮಾಡಿದೆ. ಪ್ರಿನ್ಸ್ ಬೌಲಿಂಗ್ ಮಾಡಿದ ರೀತಿಯನ್ನು ನೋಡಲು ಸಂತೋಷವಾಯಿತು ಮತ್ತು ಠಾಕೂರ್ ಕೂಡ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ’’ ಎಂದು ಬೌಲಿಂಗ್ ವಿಭಾಗವನ್ನು ಕೊಂಡಾಡಿದ್ದಾರೆ.
ಇದೇವೇಳೆ ಪೂರನ್ 3 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಬಗ್ಗೆ ಮಾತನಾಡಿದ ರಿಷಭ್ ಪಂತ್, ‘‘ನಾವು ಅವರಿಗೆ ಸ್ವಾತಂತ್ರ್ಯ ನೀಡಿದ್ದೇವೆ. ಓರ್ವ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾನೆ ಎಂದಾಗ ಮತ್ತು ಅವರು ನಮಗಾಗಿ ಅದ್ಭುತವಾದ ಶಾಟ್ ಹೊಡೆಯುತ್ತಿದ್ದಾನೆ ಎಂದಾಗ ಆತನಿಗೆ ನೀವು ಜವಾಬ್ದಾರಿಯನ್ನು ನೀಡಬೇಕು. ನಮ್ಮ ತಂಡ ಚೆನ್ನಾಗಿ ಬರುತ್ತಿದೆ, ಆದರೆ ನಾವು ಇಲ್ಲಿಯವರೆಗೆ ನಮ್ಮ ಅತ್ಯುತ್ತಮ ಪ್ರದರ್ಶನ ನೀಡಿಲ್ಲ. ಗೆಲುವು ಪಡೆದಿದ್ದಕ್ಕೆ ಸಂತೋಷವಾಗಿದೆ’’ ಎಂದು ಹೇಳಿದ್ದಾರೆ.
IPL 2025: ಹೈದರಾಬಾದ್ ಬ್ಯಾಟರ್ಗಳ ಅಹಂ ಮುರಿದ ಲಕ್ನೋ
ಲಕ್ನೋ ತಂಡ ಚೆನ್ನಾಗಿ ಬೌಲಿಂಗ್ ಮಾಡಿದೆ ಎಂದ ಪ್ಯಾಟ್ ಕಮ್ಮಿನ್ಸ್:
ಇನ್ನು ಸೋತ ತಂಡದ ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್ ಮಾತನಾಡಿ, ‘‘ಕಳೆದ ಪಂದ್ಯದ ಪಿಚ್ ವಿಭಿನ್ನವಾಗಿತ್ತು ಮತ್ತು ಇಂದಿನ ಪಂದ್ಯದ ಪಿಚ್ ಬೇರೆಯೇ ಆಗಿತ್ತು. ನಾವು ಬೇಗನೆ ರನ್ ಗಳಿಸಬೇಕಾಗಿತ್ತು. ಆದರೆ ಅವರು ನಿಜವಾಗಿಯೂ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ಅವರ ಬೌಲಿಂಗ್ ಕೂಡ ಚೆನ್ನಾಗಿತ್ತು. ಇದು ತುಂಬಾ ಒಳ್ಳೆಯ ವಿಕೆಟ್. 190 ರನ್ ತಲುಪಿದ್ದು ತುಂಬಾ ಒಳ್ಳೆಯ ಪ್ರಯತ್ನ. ಇಶಾನ್ (ಕಿಶನ್) ಹಿಂದಿನ ದಿನ ಆಡಿದಂತೆ, ಇನ್ನಿಂಗ್ಸ್ ಉದ್ದಕ್ಕೂ ಬ್ಯಾಟಿಂಗ್ ಮಾಡಲು ಅಂತಹ ಒಬ್ಬ ವ್ಯಕ್ತಿ ಬೇಕು. ನಮ್ಮಲ್ಲಿ 8 ಬ್ಯಾಟ್ಸ್‌ಮನ್‌ಗಳು ಇದ್ದರು, ಆದರೆ ಪರಿಣಾಮಕಾರಿ ಆಗಲು ಸಾಧ್ಯವಾಗಲಿಲ್ಲ. ಇದು ದೀರ್ಘವಾದ ಟೂರ್ನಿಯಾಗಿದೆ. ನಮಗೆ ಶೀಘ್ರದಲ್ಲೇ ಉತ್ತಮ ಅವಕಾಶ ಸಿಗುತ್ತದೆ, ಸೋಲಿನ ಬಗ್ಗೆ ಚಿಂತಿಸದೆ ನಾವು ಮುಂದುವರಿಯಬೇಕಾಗಿದೆ’’ ಎಂದು ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:08 am, Fri, 28 March 25