IPL 2025: ಉಳಿದ ಐಪಿಎಲ್ ಪಂದ್ಯಗಳಿಗೆ ಜೋಶ್ ಹೇಜಲ್‌ವುಡ್ ಅನುಮಾನ

RCB IPL 2025: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ ಐಪಿಎಲ್ 2025 ಒಂದು ವಾರಕ್ಕೆ ಸ್ಥಗಿತಗೊಂಡಿದೆ. ಆರ್‌ಸಿಬಿ ಆಟಗಾರ ಜೋಶ್ ಹೇಜಲ್‌ವುಡ್ ಅವರ ಗಾಯವು ತಂಡಕ್ಕೆ ದೊಡ್ಡ ಹೊಡೆತ ನೀಡಿದೆ. ಅವರ ಗಾಯದಿಂದಾಗಿ ಉಳಿದ ಪಂದ್ಯಗಳಲ್ಲಿ ಆಡುವುದು ಅನುಮಾನ. ಬಿಸಿಸಿಐ ಕದನ ವಿರಾಮದ ನಂತರ ಲೀಗ್ ಪುನರಾರಂಭಿಸಲು ಯೋಜಿಸಿದೆ ಆದರೆ ಅನೇಕ ವಿದೇಶಿ ಆಟಗಾರರ ಮರಳುವಿಕೆ ಪ್ರಶ್ನಾರ್ಹವಾಗಿದೆ.

IPL 2025: ಉಳಿದ ಐಪಿಎಲ್ ಪಂದ್ಯಗಳಿಗೆ ಜೋಶ್ ಹೇಜಲ್‌ವುಡ್ ಅನುಮಾನ
Josh Hazlewood

Updated on: May 11, 2025 | 7:33 PM

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾದ ಕಾರಣ ಐಪಿಎಲ್ 2025 (IPL 2025) ಅನ್ನು ಒಂದು ವಾರದವರೆಗೆ ಸ್ಥಗಿತಗೊಳಿಸಲಾಗಿದೆ. ಮೇ 10 ರ ಸಂಜೆ ಕದನ ವಿರಾಮ ಘೋಷಿಸಿದ ನಂತರ, ಬಿಸಿಸಿಐ (BCCI) ಲೀಗ್ ಅನ್ನು ಪುನರಾರಂಭಿಸಲು ಯೋಜಿಸುತ್ತಿದೆ. ಆದರೆ ಅನೇಕ ವಿದೇಶಿ ಆಟಗಾರರು ಈಗಾಗಲೇ ಭಾರತವನ್ನು ತೊರೆದಿದ್ದು, ಅವರ ಮರಳುವಿಕೆ ಇನ್ನೂ ಪ್ರಶ್ನಾರ್ಹವಾಗಿದೆ. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ದೊಡ್ಡ ಹೊಡೆತ ನೀಡಿದೆ. ವಾಸ್ತವವಾಗಿ, ಈ ಸೀಸನ್​ನಲ್ಲಿ ಆರ್​ಸಿಬಿ ತಂಡವನ್ನು ಟಾಪ್ -4 ರಲ್ಲಿ ಸ್ಥಿರವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೋಶ್ ಹೇಜಲ್‌ವುಡ್ (Josh Hazlewood) ಉಳಿದ ಐಪಿಎಲ್ ಪಂದ್ಯಗಳಿಗೆ ಲಭ್ಯರಾಗುವುದು ಅನುಮಾನವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಹೇಜಲ್‌ವುಡ್ ಪ್ರಸ್ತುತ ಗಾಯದಿಂದ ಬಳಲುತ್ತಿದ್ದಾರೆ. ಅಲ್ಲದೆ ಅವರು ಜೂನ್ 11 ರಿಂದ ಲಾರ್ಡ್ಸ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯವನ್ನು ಆಡಬೇಕಾಗಿದೆ. ಆದ್ದರಿಂದ, ಐಪಿಎಲ್ ಪುನರಾರಂಭವಾದಾಗ ಅವರು ಬರುವ ಸಾಧ್ಯತೆಗಳು ಬಹುತೇಕ ಶೂನ್ಯ ಎಂದು ಹೇಳಲಾಗುತ್ತಿದೆ.

ಹೇಜಲ್​ವುಡ್​ಗೆ ಇಂಜುರಿ

ಮೇಲೆ ಹೇಳಿದಂತೆ ವೇಗಿ ಜೋಶ್ ಹೇಜಲ್‌ವುಡ್ ಮತ್ತೆ ಆರ್​ಸಿಬಿ ತಂಡಕ್ಕೆ ಮರಳುತ್ತಾರೋ ಇಲ್ಲವೋ ಎಂಬ ಅನುಮಾನವಿದೆ. ಭುಜದ ಗಾಯದಿಂದಾಗಿ ಅವರು ಮೇ 3 ರಂದು ನಡೆದಿದ್ದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ತವರು ಪಂದ್ಯದಲ್ಲಿ ಆಡಿರಲಿಲ್ಲ. ಇಎಸ್‌ಪಿಎನ್‌ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಪಂದ್ಯಾವಳಿಯನ್ನು ಸ್ಥಗಿತಗೊಳಿಸದಿದ್ದರೆ, ಮೇ 9 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡುವುದು ಅವರಿಗೆ ಕಷ್ಟಕರವಾಗುತ್ತಿತ್ತು.

ಇಷ್ಟೇ ಅಲ್ಲ, ಈ ಗಾಯದಿಂದಾಗಿ, ಅವರು ಇಡೀ ಸೀಸನ್​ನಿಂದ ಹೊರಗುಳಿಯುವ ಅಪಾಯದಲ್ಲಿದ್ದರು. ಆದಾಗ್ಯೂ, ಕ್ರಿಕೆಟ್ ಆಸ್ಟ್ರೇಲಿಯಾ ಅವರ ಗಾಯದ ಬಗ್ಗೆ ಚಿಂತಿಸುತ್ತಿಲ್ಲ ಎಂದು ವರದಿಯಾಗಿದ್ದು, ಹೇಜಲ್​ವುಡ್ WTC ಫೈನಲ್‌ಗೆ ಟೆಸ್ಟ್ ತಂಡದಲ್ಲಿ ಆಯ್ಕೆಯಾಗುವ ನಿರೀಕ್ಷೆಯಿದೆ. ಈ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ಮಂಡಳಿಯು ಯುಕೆಯಲ್ಲಿ ಕಂಡೀಷನಿಂಗ್ ಶಿಬಿರವನ್ನು ನಡೆಸಲಿದ್ದು, ಹೇಜಲ್‌ವುಡ್ ಈ ಶಿಬಿರದ ಭಾಗವಾಗಲಿದ್ದಾರೆ.

IPL 2025: ಪೂರ್ವ ನಿಗದಿತ ಸ್ಥಳಗಳಲ್ಲೇ ನಡೆಯಲಿವೆ ಐಪಿಎಲ್ ಪ್ಲೇಆಫ್‌, ಫೈನಲ್

ಹೇಜಲ್‌ವುಡ್ ಅದ್ಭು ಬೌಲಿಂಗ್

ಈ ಸೀಸನ್​ನಲ್ಲಿ ಹೇಜಲ್‌ವುಡ್ ಆರ್‌ಸಿಬಿಯ ಪ್ರಮುಖ ಅಸ್ತ್ರವಾಗಿದ್ದರು. ಪವರ್‌ಪ್ಲೇ ಆಗಿರಲಿ ಅಥವಾ ಡೆತ್ ಓವರ್‌ಗಳಾಗಿರಲಿ, ಪಂದ್ಯದ ಪ್ರತಿಯೊಂದು ಹಂತದಲ್ಲೂ ಅವರು ಮಾರಕವಾಗಿ ಬೌಲಿಂಗ್ ಮಾಡಿದರು. ರನ್‌ಗಳಿಗೆ ಕಡಿವಾಣ ಹಾಕುವುದರ ಜೊತೆಗೆ, ವಿಕೆಟ್‌ಗಳನ್ನು ಸಹ ಪಡೆದರು. ಹೀಗಾಗಿ ಅವರು ಆರ್‌ಸಿಬಿ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ಪಂದ್ಯಾವಳಿಯನ್ನು ಸ್ಥಗಿತಗೊಳಿಸುವ ಮೊದಲು ಹೇಜಲ್‌ವುಡ್ ಆಡಿದ 10 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಕಬಳಿಸಿದ್ದರು. ಅವರು ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದರು. ಅವರ ಅನುಪಸ್ಥಿತಿಯು ಆರ್‌ಸಿಬಿಗೆ ದೊಡ್ಡ ನಷ್ಟವನ್ನುಂಟುಮಾಡಬಹುದು. ಗುಜರಾತ್ ಟೈಟಾನ್ಸ್‌ನ ಪ್ರಸಿದ್ಧ್ ಕೃಷ್ಣ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನ ನೂರ್ ಅಹ್ಮದ್ ಮಾತ್ರ ಅವರಿಗಿಂತ ಮುಂದಿದ್ದು, ಇಬ್ಬರೂ ತಲಾ 20 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ