IPL 2025: ಪೂರ್ವ ನಿಗದಿತ ಸ್ಥಳಗಳಲ್ಲೇ ನಡೆಯಲಿವೆ ಐಪಿಎಲ್ ಪ್ಲೇಆಫ್, ಫೈನಲ್
IPL 2025 Revised Schedule: ಐಪಿಎಲ್ 2025 ರ ಪಂದ್ಯಾವಳಿಯನ್ನು ಭಾರತ-ಪಾಕಿಸ್ತಾನ ಉದ್ವಿಗ್ನತೆಯಿಂದಾಗಿ ಮುಂದೂಡಲಾಗಿತ್ತು. ಈಗ, ಕದನವಿರಾಮದಿಂದಾಗಿ ಮೇ 16 ರಿಂದ ಪುನರಾರಂಭವಾಗುವ ನಿರೀಕ್ಷೆಯಿದೆ. ಫೈನಲ್ ಮೇ 30ಕ್ಕೆ, ಪ್ಲೇಆಫ್ ಪಂದ್ಯಗಳು ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ ನಡೆಯಲಿವೆ. ಬಿಸಿಸಿಐ ಹೊಸ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಲೀಗ್ ಪಂದ್ಯಗಳು ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ಗಳಲ್ಲಿ ನಡೆಯಲಿವೆ ಎಂದು ಹೇಳಲಾಗುತ್ತಿದೆ.

ಐಪಿಎಲ್ 2025 (IPL 2025) ರ ದ್ವಿತೀಯಾರ್ಧದ ಪಂದ್ಯಗಳ ಹೊಸ ವೇಳಾಪಟ್ಟಿ ಭಾನುವಾರ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂಬ ಸುದ್ದಿ ಹೊರಬಿದ್ದಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಪಂದ್ಯಾವಳಿಯನ್ನು ಒಂದು ವಾರ ಮುಂದೂಡಲಾಗಿದೆ. ಇದೀಗ ಉಭಯ ದೇಶಗಳು ಕದನ ವಿರಾಮ ಘೋಷಿಸಿರುವುದರಿಂದ ಮೇ 16 ರಿಂದ ಪಂದ್ಯಾವಳಿ ಪುನರಾರಂಭಗೊಳ್ಳುವ ಸಾಧ್ಯತೆ ಇದ್ದು, ಫೈನಲ್ ಪಂದ್ಯವನ್ನು ಮೇ 25 ರ ಬದಲು ಮೇ 30 ರಂದು ನಡೆಸಲು ಯೋಜಿಸಲಾಗಿದೆ. ಹಾಗೆಯೇ ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಬಿಸಿಸಿಐ (BCCI) ಉಳಿದ ಎಲ್ಲಾ ಪಂದ್ಯಗಳನ್ನು 3 ಸ್ಥಳಗಳಲ್ಲಿ ನಡೆಸಲು ಚಿಂತಿಸಲಾಗಿದೆ. ಏತನ್ಮಧ್ಯೆ, ಪ್ಲೇಆಫ್ ಪಂದ್ಯಗಳು ಮತ್ತು ಫೈನಲ್ ಪಂದ್ಯ ನಡೆಯುವ ಸ್ಥಳದ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ.
ಪೂರ್ವ ನಿಗದಿತ ಸ್ಥಳಗಳಲ್ಲೇ ಪ್ಲೇಆಫ್
ANI ವರದಿಯ ಪ್ರಕಾರ, ಲೀಗ್ ಹಂತದ ಪಂದ್ಯಗಳು ನಡೆಯುವ ಸ್ಥಳ ಬದಲಾದರೂ, ಪ್ಲೇಆಫ್ ಪಂದ್ಯಗಳು ನಡೆಯುವ ಸ್ಥಳವನ್ನು ಬದಲಾಯಿಸಲಾಗುವುದಿಲ್ಲ. ಟೂರ್ನಮೆಂಟ್‌ನ ಮೊದಲ ಅರ್ಹತಾ ಪಂದ್ಯವು ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡನೇ ಅರ್ಹತಾ ಪಂದ್ಯವನ್ನು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ ಆಯೋಜಿಸಲಿದೆ. ಪೂರ್ವ ನಿಗದಿಯ ಪ್ರಕಾರ ಎಲಿಮಿನೇಟರ್ ಪಂದ್ಯವೂ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಫೈನಲ್ ಪಂದ್ಯ ಕೂಡ ಈಡನ್ ಗಾರ್ಡನ್ಸ್‌ನಲ್ಲಿ ನಡೆಸುವ ಇರಾದೆಯಲ್ಲಿ ಬಿಸಿಸಿಐ ಇದೆ. ಆದಾಗ್ಯೂ, ಪ್ಲೇಆಫ್ ಮತ್ತು ಫೈನಲ್ ಪಂದ್ಯಗಳ ದಿನಾಂಕ ಬದಲಾಗುವುದು ಮಾತ್ರ ಖಚಿತವಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಸುದ್ದಿಯ ಪ್ರಕಾರ, ಐಪಿಎಲ್ 2025 ರ ಫೈನಲ್ ಪಂದ್ಯವನ್ನು ಮೇ 25 ರ ಬದಲು ಮೇ 30 ರಂದು ನಡೆಸಬಹುದು. ಇದರೊಂದಿಗೆ, ಪ್ಲೇಆಫ್ ಪಂದ್ಯಗಳ ದಿನಾಂಕವೂ ಬದಲಾಗಬಹುದು.
3 ಸ್ಥಳಗಳಲ್ಲಿ ಲೀಗ್ ಪಂದ್ಯಗಳು
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಬಿಸಿಸಿಐ ಇಂದು ರಾತ್ರಿ (ಮೇ 11) ರೊಳಗೆ ಲೀಗ್‌ನ ಉಳಿದ ಪಂದ್ಯಗಳ ಹೊಸ ವೇಳಾಪಟ್ಟಿಯ ಬಗ್ಗೆ ಎಲ್ಲಾ 10 ತಂಡಗಳಿಗೆ ತಿಳಿಸಬಹುದು. ಇದರಿಂದ ಎಲ್ಲಾ ತಂಡಗಳು ತಮ್ಮ ಸಿದ್ಧತೆಗಳನ್ನು ಪ್ರಾರಂಭಿಸಬಹುದು. ಇದರೊಂದಿಗೆ, ಲೀಗ್‌ನ ದಿನಾಂಕವನ್ನು ಸಹ ವಿಸ್ತರಿಸಲಾಗುವುದು. ಅಂದರೆ ಮೇಲೆ ಹೇಳಿದಂತೆ ಪ್ರಸಕ್ತ ಸೀಸನ್ನ ಫೈನಲ್ ಪಂದ್ಯವನ್ನು ಮೇ 25 ರ ಬದಲು ಮೇ 30 ರಂದು ಆಡಲಾಗುತ್ತದೆ. ಇದಲ್ಲದೆ, ಹೊಸ ವೇಳಾಪಟ್ಟಿಯಲ್ಲಿ ಹೆಚ್ಚಿನ ಡಬಲ್ ಹೆಡರ್ ಪಂದ್ಯಗಳನ್ನು ಸೇರಿಸಬಹುದು. ಹಾಗೆಯೇ ಲೀಗ್‌ನ ಉಳಿದ ಪಂದ್ಯಗಳು ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಮಾತ್ರ ನಡೆಯಲಿವೆ ಎಂದು ವರದಿಯಾಗಿದೆ.
IPL 2025: ಆರ್ಸಿಬಿ ಪಾಲಿಗೆ ವರವಾದ ಐಪಿಎಲ್ ಮುಂದೂಡಿಕೆ
ಫ್ರಾಂಚೈಸಿಗಳಿಗೆ ಆತಂಕ
ವರದಿಗಳ ಪ್ರಕಾರ, ಮಂಗಳವಾರದೊಳಗೆ ಐಪಿಎಲ್ ತಂಡಗಳನ್ನು ಒಟ್ಟುಗೂಡಿಸಲು ಬಿಸಿಸಿಐ ತಿಳಿಸಿದೆ. ವಾಸ್ತವವಾಗಿ, ಹೆಚ್ಚಿನ ವಿದೇಶಿ ಆಟಗಾರರು ತಮ್ಮ ದೇಶಗಳಿಗೆ ಮರಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಎಲ್ಲಾ ಹತ್ತು ಫ್ರಾಂಚೈಸಿಗಳು ವಿದೇಶಿ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಯನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳಲು ಪ್ರಯತ್ನಿಸುತ್ತಿವೆ. ಲೀಗ್ ಅಮಾನತುಗೊಂಡ ನಂತರ ವಿದೇಶಿ ಆಟಗಾರರು ಶುಕ್ರವಾರ ಮತ್ತು ಶನಿವಾರದ ನಡುವೆ ಭಾರತವನ್ನು ತೊರೆದಿದ್ದರು. ಆದಾಗ್ಯೂ, ಎಲ್ಲಾ ತಂಡಗಳಿಗೆ ದೊಡ್ಡ ಆತಂಕವೇನೆಂದರೆ ವಿದೇಶಿ ಆಟಗಾರರು ಭಾರತಕ್ಕೆ ಹಿಂತಿರುಗುತ್ತಾರೋ ಇಲ್ಲವೋ ಎಂಬುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
