IPL 2025: ಮಂಗಳವಾರಕ್ಕೆ ರೆಡಿಯಾಗಿರಿ… ಐಪಿಎಲ್ ಪೂರ್ಣಗೊಳಿಸಲು ಮಾಸ್ಟರ್ ಪ್ಲ್ಯಾನ್
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಸೀಸನ್-18 ರಲ್ಲಿ ಒಟ್ಟು 57 ಪಂದ್ಯಗಳು ಪೂರ್ಣಗೊಂಡಿವೆ. ಇನ್ನು ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಮರು ಆಯೋಜಿಸುವ ಸಾಧ್ಯತೆಯಿದ್ದು, ಈ ಪಂದ್ಯದ ಮೂಲಕ 13 ಲೀಗ್ ಮ್ಯಾಚ್ಗಳು ಹಾಗೂ 4 ಪ್ಲೇಆಫ್ ಪಂದ್ಯಗಳನ್ನು ನಡೆಸಲಾಗುತ್ತದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಅನ್ನು ಮೇ ತಿಂಗಳ ಒಳಗೆ ಪೂರ್ಣಗೊಳಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸುತ್ತಿದೆ. ಅದಕ್ಕಾಗಿ ಎಲ್ಲಾ ಫ್ರಾಂಚೈಸಿಗಳಿಗೆ ಮಂಗಳವಾರದೊಳಗೆ ರೆಡಿಯಾಗಿರುವಂತೆ ಸೂಚಿಸಲಾಗಿದೆ. ಪ್ರಸ್ತುತ ಮಾಹಿತಿ ಪ್ರಕಾರ, ಗುರುವಾರ ಅಥವಾ ಶುಕ್ರವಾರದಿಂದ (ಮೇ 16) ಐಪಿಎಲ್ ಶುರುವಾಗುವುದು ಖಚಿತ. ಅಲ್ಲದೆ ಫೈನಲ್ ಪಂದ್ಯವನ್ನು ಮೇ 30 ಆಯೋಜಿಸಲು ಚಿಂತಿಸಲಾಗಿದೆ.
ಇದಕ್ಕೂ ಮುನ್ನ ಫೈನಲ್ ಪಂದ್ಯಕ್ಕೆ ಮೇ 25 ದಿನಾಂಕವನ್ನು ನಿಗದಿ ಮಾಡಲಾಗಿತ್ತು. ಇದೀಗ ಕಳೆದ ಕೆಲ ದಿನಗಳಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಡಬಲ್ ಹೆಡರ್ ಮ್ಯಾಚ್ಗಳ ಮೂಲಕ ಪೂರ್ಣಗೊಳಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸುತ್ತಿದೆ. ಅಂದರೆ ಪ್ರತಿ ದಿನ 2 ಪಂದ್ಯಗಳನ್ನು ಆಯೋಜಿಸುವ ಮೂಲಕ ಮೇ 30 ರೊಳಗೆ ಲೀಗ್ ಹಾಗೂ ಪ್ಲೇಆಫ್ ಸುತ್ತಿನ ಮೂರು ಪಂದ್ಯಗಳನ್ನು ಪೂರ್ಣಗೊಳಿಸಲು ಬಿಸಿಸಿಐ ಚಿಂತಿಸಿದೆ. ಹೀಗಾಗಿ ಮೇ 30 ರಂದು ಫೈನಲ್ ಪಂದ್ಯ ಜರುಗಿದರೂ ಅಚ್ಚರಿಪಡಬೇಕಿಲ್ಲ.
ಪಂಜಾಬ್-ಡೆಲ್ಲಿ ನಡುವೆ ಮರು ಪಂದ್ಯ:
ಮೇ 9 ರಂದು ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಭಾರತ-ಪಾಕ್ ನಡುವಣ ಯುದ್ಧ ಭೀತಿ ಹಿನ್ನಲೆಯಲ್ಲಿ ಅರ್ಧದಲ್ಲೇ ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ ಉಭಯ ದೇಶಗಳ ನಡುವಣ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಟೂರ್ನಿಯನ್ನು ಮುಂದೂಡಲಾಗಿತ್ತು.
ಇದೀಗ ಅರ್ಧದಲ್ಲೇ ಸ್ಥಗಿತಗೊಂಡಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಮರು ಆಯೋಜಿಸಲು ಚಿಂತಿಸಲಾಗಿದೆ. ಹೀಗಾಗಿ ಪಂಜಾಬ್ ಹಾಗೂ ಡೆಲ್ಲಿ ನಡುವಣ ಪಂದ್ಯದೊಂದಿಗೆ ಐಪಿಎಲ್ ಪುನರಾರಂಭಗೊಳ್ಳುವ ಸಾಧ್ಯತೆಯಿದೆ.
17 ಪಂದ್ಯಗಳು ಬಾಕಿ:
ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಮರು ನಿಗದಿ ಮಾಡುವುದರೊಂದಿಗೆ ಮೇ ತಿಂಗಳಲ್ಲೇ 17 ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಇಲ್ಲಿ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ದಕ್ಷಿಣ ಭಾರತದಲ್ಲಿ ಆಯೋಜಿಸುವ ಸಾಧ್ಯತೆಯಿದೆ.
ಇನ್ನುಳಿದಂತೆ ಆಯಾ ತಂಡಗಳ ಹೋಮ್ ಗ್ರೌಂಡ್ನಲ್ಲೇ ಪಂದ್ಯಗಳು ನಡೆಯಲಿದೆ. ಅದರಂತೆ ಲೀಗ್ ಹಂತದಲ್ಲಿ 13 ಮ್ಯಾಚ್ಗಳು ಹಾಗೂ ಪ್ಲೇಆಫ್ ಸುತ್ತಿನಲ್ಲಿ 4 ಪಂದ್ಯಗಳು ನಡೆಯಬೇಕಿದೆ.
ಈ 17 ಪಂದ್ಯಗಳೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಅನ್ನು ಪೂರ್ಣಗೊಳಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸುತ್ತಿದೆ. ಇದೇ ಕಾರಣದಿಂದಾಗಿ ಈಗಾಗಲೇ ಎಲ್ಲಾ ಫ್ರಾಂಚೈಸಿಗಳಿಗೆ ಮಂಗಳವಾರದೊಳಗೆ ಟೂರ್ನಿಗಾಗಿ ಸಜ್ಜಾಗುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: IPL 2025: ಐಪಿಎಲ್ ತಡವಾದ್ರೆ, RCB ತಂಡದ ನಾಲ್ವರು ಅಲಭ್ಯ
ವಿದೇಶಿ ಆಟಗಾರರಿಗೂ ಸೂಚನೆ:
ಭಾರತದಿಂದ ತವರಿಗೆ ಮರಳಿರುವ ವಿದೇಶಿ ಆಟಗಾರರಿಗೂ ಹಿಂತಿರುಗುವಂತೆ ಕೆಲ ಫ್ರಾಂಚೈಸಿಗಳು ಮನವಿ ಮಾಡಿದೆ. ಹೀಗಾಗಿ ಈ ವಾರದಲ್ಲೇ ಬಹುತೇಕ ಫಾರಿನ್ ಪ್ಲೇಯರ್ಸ್ ಭಾರತಕ್ಕೆ ಮರಳಲಿದ್ದಾರೆ. ಹೀಗಾಗಿ ಗುರುವಾರ ಅಥವಾ ಶುಕ್ರವಾರದಿಂದ ಐಪಿಎಲ್ ಮತ್ತೆ ಶುರುವಾಗುವುದು ಖಚಿತ ಎನ್ನಬಹುದು.
Published On - 2:00 pm, Sun, 11 May 25