IPL 2025: ಈ ಸೀಸನ್​ನ ಅತಿ ವೇಗದ ಅರ್ಧಶತಕ ಸಿಡಿಸಿದ 14 ವರ್ಷದ ವೈಭವ್

Vaibhav Suryavanshi's Fastest Fifty: ಐಪಿಎಲ್ 2025ರ 47ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್, ರಾಜಸ್ಥಾನ್ ರಾಯಲ್ಸ್ ವಿರುದ್ಧ 210 ರನ್ ಗಳಿಸಿದೆ. ಗುರಿ ಬೆನ್ನಟ್ಟಿದ ರಾಜಸ್ಥಾನ್‌ ಪರ ಯುವ ಆಟಗಾರ ವೈಭವ್ ಸೂರ್ಯವಂಶಿ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಈ ಸೀಸನ್‌ನ ಅತಿ ವೇಗದ ಅರ್ಧಶತಕದ ದಾಖಲೆ ಬರೆದರು. ಯಶಸ್ವಿ ಜೈಸ್ವಾಲ್ ಅವರೊಂದಿಗೆ ಅವರು ರಾಜಸ್ಥಾನಕ್ಕೆ ಉತ್ತಮ ಆರಂಭ ಒದಗಿಸಿದರು.

IPL 2025: ಈ ಸೀಸನ್​ನ ಅತಿ ವೇಗದ ಅರ್ಧಶತಕ ಸಿಡಿಸಿದ 14 ವರ್ಷದ ವೈಭವ್
Vaibhav Suryavanshi

Updated on: Apr 28, 2025 | 10:50 PM

ಐಪಿಎಲ್ 2025 (IPL 2025) ರ47ನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟನ್ಸ್ (RR vs GT) ನಡುವೆ ರಾಜಸ್ಥಾನದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ 210 ರನ್​ಗಳ ಬೃಹತ್ ಮೊತ್ತ ಕಲೆಹಾಕಿದೆ. ಈ ಗುರಿ ಬೆನ್ನಟ್ಟಿರುವ ರಾಜಸ್ಥಾನಕ್ಕೆ ಯುವ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ (Vaibhav Suryavanshi) ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟಿದ್ದಾರೆ. ಅದರಲ್ಲೂ ಮೊದಲ ಐಪಿಎಲ್ ಸೀಸನ್ ಆಡುತ್ತಿರುವ 14 ವರ್ಷದ ವೈಭವ್, ತಮ್ಮ ಹೊಡಿಬಡಿ ಆಟದ ಮೂಲಕ ಗುಜರಾತ್ ಬೌಲರ್​ಗಳ ಬೆವರಿಳಿಸುವುದರೊಂದಿಗೆ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಈ ಸೀಸನ್​ನ ಅತಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ.

17 ಎಸೆತಗಳಲ್ಲಿ 50 ರನ್‌

ಈ ಪಂದ್ಯದ ಆರಂಭದಿಂದಲೂ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 17 ಎಸೆತಗಳಲ್ಲಿ 50 ರನ್‌ ಪೂರೈಸಿದರು. ಅವರ ಈ ಅರ್ಧಶತಕದ ಇನ್ನಿಂಗ್ಸ್​ನಲ್ಲಿ 3 ಬೌಂಡರಿ ಮತ್ತು 6 ಸಿಕ್ಸರ್‌ಗಳು ಸೇರಿದ್ದವು. ಕೇವಲ 14 ವರ್ಷ 32 ದಿನಗಳಲ್ಲಿ ಈ ಸಾಧನೆ ಮಾಡಿದ ವೈಭವ್ ಐಪಿಎಲ್ ಮತ್ತು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಈ ದಾಖಲೆ ರಿಯಾನ್ ಪರಾಗ್ ಹೆಸರಿನಲ್ಲಿತ್ತು. ರಿಯಾನ್ ಪರಾಗ್ 17 ವರ್ಷ 175 ದಿನಗಳಲ್ಲಿ ಈ ಸಾಧನೆ ಮಾಡಿದ್ದರು.

ಅತ್ಯಂತ ಕಿರಿಯ ಆಟಗಾರ

ವೈಭವ್ ಸೂರ್ಯವಂಶಿ ಐಪಿಎಲ್ ಹಾಗೂ ಟಿ20 ಕ್ರಿಕೆಟ್‌ನ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ವೈಭವ್ ಸೂರ್ಯವಂಶಿಗಿಂತ ಮೊದಲು, ಟಿ20 ಕ್ರಿಕೆಟ್‌ನಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರನೆಂಬ ದಾಖಲೆ ಅಫ್ಘಾನಿಸ್ತಾನದ ಹಸನ್ ಇಸಾಖಿಲ್ ಹೆಸರಿನಲ್ಲಿತ್ತು. ಹಸನ್ ಇಸಾಖಿಲ್ 15 ವರ್ಷ 360 ದಿನಗಳಲ್ಲಿ ಟಿ20ಯಲ್ಲಿ ಅರ್ಧಶತಕ ಸಿಡಿಸಿದ್ದರು. ಆದರೆ ವೈಭವ್ ಸೂರ್ಯವಂಶಿ 14 ನೇ ವಯಸ್ಸಿನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.

ಸಿರಾಜ್​ಗೆ ಮೊದಲ ಓವರ್​ನಲ್ಲೇ ಸಿಕ್ಸರ್ ಬಾರಿಸಿದ 14 ವರ್ಷದ ವೈಭವ್; ವಿಡಿಯೋ

10 ಓವರ್​ಗಳಲ್ಲಿ 144 ರನ್

ವೈಭವ್ ಅವರ ಅದ್ಭುತ ಇನ್ನಿಂಗ್ಸ್‌ನಿಂದಾಗಿ ತಂಡವು ಮೊದಲ ಆರು ಓವರ್‌ಗಳಲ್ಲಿ ಅಂದರೆ ಪವರ್ ಪ್ಲೇನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 87 ರನ್ ಗಳಿಸಿತು. ಈ ಇಬ್ಬರು ಆಟಗಾರರು ಮೊದಲ 10 ಓವರ್​​ಗಳಲ್ಲಿ ಬರೋಬ್ಬರಿ 144 ರನ್ ಕಲೆಹಾಕಿದರು. ಈ ವೇಳೆ ವೈಭವ್ ಅಜೇಯ 94 ರನ್ ಬಾರಿಸಿದರೆ, ಮತ್ತೊಬ್ಬ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 45 ರನ್​​ಗಳ ಕಾಣಿಕೆ ನೀಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:14 pm, Mon, 28 April 25