IPL 2025: ಐಪಿಎಲ್​ನಲ್ಲಿ 16 ಪಂದ್ಯನಾ ಅಥವಾ 17?

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 58ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 10.1 ಓವರ್​ಗಳಲ್ಲಿ 122 ರನ್​ಗಳಿಸಿತ್ತು. ಧರ್ಮಶಾಲಾದಲ್ಲಿ ನಡೆದಿದ್ದ ಈ ಪಂದ್ಯದ ವೇಳೆ ಯುದ್ಧ ಭೀತಿ ತಲೆದೂರಿದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.

IPL 2025: ಐಪಿಎಲ್​ನಲ್ಲಿ 16 ಪಂದ್ಯನಾ ಅಥವಾ 17?
Ipl 2025

Updated on: May 13, 2025 | 6:46 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಮತ್ತೆ ಶುರುವಾಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಮೇ 17 ರಿಂದ ಟೂರ್ನಿ ಆರಂಭಿಸಲು ಚಿಂತಿಸಲಾಗಿದ್ದು, ಅದರಂತೆ ಶನಿವಾರದಿಂದ ಮತ್ತೆ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ. ಆದರೆ ಟೂರ್ನಿ ಶುರುವಾದರೆ ಎಷ್ಟು ಪಂದ್ಯಗಳನ್ನಾಡಲಾಗುತ್ತದೆ? ಎಂಬುದೇ ಈಗ ದೊಡ್ಡ ಪ್ರಶ್ನೆ. ಏಕೆಂದರೆ ಈ ಹಿಂದೆ ಒಟ್ಟು 17 ಪಂದ್ಯಗಳ ಮೂಲಕ ಟೂರ್ನಿಯನ್ನು ಪೂರ್ಣಗೊಳಿಸಲು ಚಿಂತಿಸಲಾಗಿತ್ತು.

ಅಂದರೆ ಧರ್ಮಶಾಲಾದಲ್ಲಿ ಸ್ಥಗಿತಗೊಂಡಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಮರು ಆಯೋಜಿಸುವ ಮೂಲಕ ಟೂರ್ನಿಗೆ ಚಾಲನೆ ನೀಡಲು ಚಿಂತಿಸಲಾಗಿತ್ತು. ಆದರೀಗ ಈ ಪಂದ್ಯವನ್ನು ಕೈ ಬಿಡುವ ಬಗ್ಗೆ ಕೂಡ ಚರ್ಚಿಸಲಾಗಿದೆ. ಭಾನುವಾರ ನಡೆದ ಬಿಸಿಸಿಐ ಪದಾಧಿಕಾರಿಗಳು ಮತ್ತು ಐಪಿಎಲ್ ಆಡಳಿತ ಮಂಡಳಿಯ ಸಭೆಯಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ಬಗ್ಗೆ ಚರ್ಚಿಸಲಾಗಿದೆ.

ಈ ವೇಳೆ ಪಂದ್ಯವನ್ನು ಮರು ಆಯೋಜಿಸುವುದು ಸೂಕ್ತವಲ್ಲ. ಉಭಯ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ನೀಡುವುದು ಉತ್ತಮ ಎಂಬ ಅಭಿಪ್ರಾಯಗಳು ಕೂಡ ಕೇಳಿ ಬಂದಿದೆ. ಈ ಬಗ್ಗೆ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.

ಇದನ್ನೂ ಓದಿ
ಬೋಲ್ಡ್ ಫೋಟೋಗೆ ಬೌಲ್ಡ್ ಆಗಿ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ
IPL 2025: ಪ್ಲೇಆಫ್​ ಆಡಲಿರುವ 4 ತಂಡಗಳನ್ನು ಹೆಸರಿಸಿದ ಅಂಬಾಟಿ ರಾಯುಡು
IPL 2025: ಕರುಣ್ ನಾಯರ್ ಡಕೌಟ್: ಈ ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್?
IPL ನಲ್ಲಿ ಬದಲಾವಣೆ: ರೌಂಡ್ ರಾಬಿನ್ ಸ್ವರೂಪ, ಒಂದು ತಂಡಕ್ಕೆ 18 ಪಂದ್ಯ

ಒಂದು ವೇಳೆ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗಳು ಒಪ್ಪಿದರೆ, ತಲಾ ಒಂದೊಂದು ಅಂಕಗಳನ್ನು ನೀಡುವ ಮೂಲಕ ಈ ಪಂದ್ಯವನ್ನು ರದ್ದು ಎಂದು ಘೋಷಿಸಲಾಗುತ್ತದೆ. ಇಲ್ಲದಿದ್ದರೆ, ತಟಸ್ಥ ಸ್ಥಳದಲ್ಲಿ ಪಂದ್ಯವನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ಪಾಯಿಂಟ್ಸ್​ ಟೇಬಲ್​ನಲ್ಲಿ 11 ಪಂದ್ಯ​:

ಪ್ರಸ್ತುತ ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ತಲಾ 11 ಪಂದ್ಯಗಳನ್ನು ಆಡಲಾಗಿದೆ ಎಂದು ಮಾತ್ರ ತೋರಿಸಲಾಗಿದೆ. ಅಂದರೆ ಉಭಯ ತಂಡಗಳ ಕೊನೆಯ ಪಂದ್ಯವನ್ನು ಇಲ್ಲಿ ಗಣನೆಗೆ ತೆಗೆದುಕೊಂಡಿಲ್ಲ. ಹೀಗಾಗಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಮರು ಆಯೋಜಿಸುವ ಸಾಧ್ಯತೆಯನ್ನು ಸಹ ತಳ್ಳಿ ಹಾಕುವಂತಿಲ್ಲ.

ಹೋಮ್ ಅಡ್ವಂಟೇಜ್ ಇಲ್ಲ:

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವನ್ನು ಪಂಜಾಬ್ ಕಿಂಗ್ಸ್ ತಂಡವು ತನ್ನ ತವರು ಮೈದಾನದಲ್ಲಿ ಆಡಬೇಕಿತ್ತು. ಇದೀಗ ಪಂದ್ಯವನ್ನು ಮರು ನಿಗದಿ ಮಾಡಿದರೂ, ಪಂಜಾಬ್ ಪಾಲಿಗೆ ಹೋಮ್ ಅಡ್ವಂಟೇಜ್ ಸಿಗುವುದಿಲ್ಲ. ಏಕೆಂದರೆ ಉಳಿದ ಪಂದ್ಯಗಳನ್ನು ದಕ್ಷಿಣ ಭಾರತದ ಸ್ಟೇಡಿಯಂಗಳಲ್ಲಿ ಆಯೋಜಿಸಲು ಬಿಸಿಸಿಐ ಚಿಂತಿಸಿದೆ. ಅಲ್ಲದೆ ಧರ್ಮಶಾಲಾದಲ್ಲಿ ಪಂದ್ಯವನ್ನು ಆಯೋಜಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಟಸ್ಥ ಸ್ಥಳದಲ್ಲಿ ಕಣಕ್ಕಿಳಿಯಬೇಕಾದ ಅನಿವಾರ್ಯತೆ ಇದೆ. ಇದೇ ಕಾರಣದಿಂದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಮರು ಪಂದ್ಯವಾಡಲು ಒಪ್ಪಲಿದೆಯಾ ಅಥವಾ ರದ್ದತಿಯೊಂದಿಗೆ ತಲಾ ಒಂದು ಅಂಕಗಳನ್ನು ಹಂಚಿಕೊಳ್ಳಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಇದನ್ನೂ ಓದಿ: IPL 2025: ಮುಂದಿನ ಪಂದ್ಯಕ್ಕೆ RCB ನಾಯಕನೇ ಅಲಭ್ಯ..!

ಇದಾಗ್ಯೂ ಪ್ಲೇಆಫ್ ಮೇಲೆ ಕಣ್ಣಿಟ್ಟಿರುವ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ತಟಸ್ಥ ಸ್ಥಳದಲ್ಲಿ ಕಣಕ್ಕಿಳಿದು 2 ಅಂಕಗಳನ್ನು ಪಡೆಯಲು ಪ್ಲ್ಯಾನ್ ರೂಪಿಸಿದರೆ, ಪಂಜಾಬ್ ಕಿಂಗ್ಸ್ – ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವು ಮರು ಆಯೋಜನೆಗೊಳ್ಳುವುದು ಖಚಿತ.

17 ಪಂದ್ಯಗಳು ಬಾಕಿ:

ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮತ್ತೆ ಪಂದ್ಯವಾಡಲು ನಿರ್ಧರಿಸಿದರೆ, ಐಪಿಎಲ್ ಪುನರಾರಂಭವಾದರೆ ಒಟ್ಟು 17 ಪಂದ್ಯಗಳು ನಡೆಯಲಿದೆ. ಅದರಂತೆ 13 ಲೀಗ್​ ಪಂದ್ಯಗಳನ್ನು ಹಾಗೂ 4 ಪ್ಲೇಆಫ್ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.

 

Published On - 7:54 am, Mon, 12 May 25