
ಐಪಿಎಲ್ 2026ರ ಪಂದ್ಯಗಳ ನೇರ ಪ್ರಸಾರ ತಂಡದ ಭಾಗವಾಗಿದ್ದ ಬ್ರಿಟನ್ ಮೂಲದ ಹಿರಿಯ ಬ್ರಾಡ್ಕಾಸ್ಟ್ ಇಂಜಿನಿಯರ್ ಇಯಾನ್ ವಿಲಿಯಮ್ಸ್ ಲ್ಯಾಂಗ್‌ಫೋರ್ಡ್ (76) ಅವರು ಮೃತಪಟ್ಟಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ (MI) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (KKR) ನಡುವಣ ಪಂದ್ಯದ ಬಳಿಕ ಮುಂಬೈನ ಹೋಟೆಲ್ ಕೊಠಡಿಗೆ ಮರಳಿದ್ದ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇಯಾನ್ ವಿಲಿಯಮ್ಸ್ ಅವರು ಬಿಸಿಸಿಐ ಪರವಾಗಿ ಐಪಿಎಲ್ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಮಾರ್ಚ್ 29ರ ಭಾನುವಾರ ರಾತ್ರಿ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ಕರ್ತವ್ಯ ಮುಗಿಸಿ ಅವರು ದಕ್ಷಿಣ ಮುಂಬೈನ ನರಿಮನ್ ಪಾಯಿಂಟ್‌ನಲ್ಲಿರುವ ಟ್ರೈಡೆಂಟ್ ಹೋಟೆಲ್‌ಗೆ ಮರಳಿದ್ದರು. ಅವರು ಮಾರ್ಚ್ 24 ರಿಂದ ಇದೇ ಹೋಟೆಲ್‌ನ 2715ನೇ ಸಂಖ್ಯೆಯ ಕೊಠಡಿಯಲ್ಲಿ ತಂಗಿದ್ದರು.
ಮಾರ್ಚ್ 30ರ ಸೋಮವಾರ ಬೆಳಿಗ್ಗೆ, ಹೋಟೆಲ್ ಸಿಬ್ಬಂದಿ ಲ್ಯಾಂಗ್‌ಫೋರ್ಡ್ ಅವರ ಕೊಠಡಿಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಅನುಮಾನಗೊಂಡ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ಕೊಠಡಿಯನ್ನು ತೆರೆದಾಗ, ಅವರು ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ತಕ್ಷಣ ಹೋಟೆಲ್‌ನ ವೈದ್ಯರನ್ನು ಕರೆಯಿಸಲಾಯಿತು, ಈ ವೇಳೆ ಅವರು ಲ್ಯಾಂಗ್‌ಫೋರ್ಡ್ ಮೃತಪಟ್ಟಿರುವುದನ್ನು ಖಚಿತಪಡಿಸಿದರು. ನಂತರ ಅವರನ್ನು ಮುಂಬೈನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಅಧಿಕೃತವಾಗಿ ಘೋಷಿಸಿದರು.
ಮುಂಬೈನ ಮರೀನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಆಕಸ್ಮಿಕ ಸಾವು (ADR – Accidental Death Report) ಪ್ರಕರಣ ದಾಖಲಾಗಿದೆ.
ಇಯಾನ್ ವಿಲಿಯಮ್ಸ್ ಲ್ಯಾಂಗ್‌ಫೋರ್ಡ್ ಅವರು ದಶಕಗಳಿಂದ ಕ್ರೀಡಾ ಪ್ರಸಾರ ಕ್ಷೇತ್ರದಲ್ಲಿ ಅನುಭವ ಹೊಂದಿದ್ದ ತಂತ್ರಜ್ಞರಾಗಿದ್ದರು. ಐಪಿಎಲ್‌ನಂತಹ ಬೃಹತ್ ಟೂರ್ನಿಗಳ ತಾಂತ್ರಿಕ ಗುಣಮಟ್ಟವನ್ನು ಕಾಪಾಡುವಲ್ಲಿ ಅವರ ಪಾತ್ರ ದೊಡ್ಡದಾಗಿತ್ತು. ಇದೀಗ ಅವರ ಸಾವು ಕ್ರೀಡಾ ಪ್ರಸಾರ ಕ್ಷೇತ್ರದಲ್ಲಿ ತುಂಬಲಾರದ ನಷ್ಟ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: VIDEO: ಟಾಸ್ ಫಿಕ್ಸಿಂಗ್..? ಮುಂಬೈ ಇಂಡಿಯನ್ಸ್ ವಿರುದ್ಧ ಗಂಭೀರ ಆರೋಪ
ಇನ್ನು ಈ ಸಾವಿನ ಕುರಿತು ಪೊಲೀಸರು ಈಗಾಗಲೇ ಬ್ರಿಟಿಷ್ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದು, ಅವರ ಕುಟುಂಬದ ಸದಸ್ಯರಿಗೆ ಈ ಸಂಬಂಧ ಸಂದೇಶ ರವಾನಿಲಾಗಿದೆ.
Published On - 4:01 pm, Tue, 31 March 26