
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆದರೆ ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ ನಡೆದ ಕೆಳ ಬೆಳವಣಿಗಳು ಇದೀಗ ಚರ್ಚೆಗೆ ಕಾರಣವಾಗಿದೆ. ಫೈನಲ್ ಪಂದ್ಯಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ತಂಡ ಎದುರಿಸಿದ ಸಂಕಷ್ಟಗಳನ್ನು ಪರಿಗಣಿಸಿ “ಫೈನಲ್ ಮ್ಯಾಚ್ ಅನ್ನು ಒಂದು ದಿನಮುಂದೂಡಬೇಕಿತ್ತು” ಎಂದು ಭಾರತದ ದಿಗ್ಗಜ ಸುನಿಲ್ ಗವಾಸ್ಕರ್ ಬಿಸಿಸಿಐ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ನ್ಯೂ ಚಂಡೀಗಢ್ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ದ್ವಿತೀಯ ಕ್ವಾಲಿಫೈಯರ್ ಪಂದ್ಯವಾಡಿದ್ದ ಗುಜರಾತ್ ಟೈಟಾನ್ಸ್ ತಂಡವು ಅಹಮದಾಬಾದ್ ತಲುಪಿದ್ದು ಶನಿವಾರ ಮಧ್ಯರಾತ್ರಿ. ಅಂದರೆ ಫೈನಲ್ ಪಂದ್ಯಕ್ಕೂ ಮುನ್ನ ಜಿಟಿ ಪಡೆಗೆ ಅಭ್ಯಾಸ ನಡೆಸಲು ಯಾವುದೇ ಅವಕಾಶ ಇರಲಿಲ್ಲ.
ಹೀಗೆ ಗುಜರಾತ್ ಟೈಟಾನ್ಸ್ ತಡವಾಗಿ ಅಹಮದಾಬಾದ್ಗೆ ಬರಲು ಮುಖ್ಯ ಕಾರಣ ವಿಮಾನ ವಿಳಂಬ. ಶನಿವಾರ ರಾಜಸ್ಥಾನ್ ಸುತ್ತ ಮುತ್ತ ಸುರಿದ ಭಾರೀ ಮಳೆಯಿಂದಾಗಿ ಹಾಗೂ ಚಂಡಮಾರುತದ ಕಾರಣ ಗುಜರಾತ್ ಟೈಟಾನ್ಸ್ ತಂಡದ ಚಾರ್ಟರ್ಡ್ ವಿಮಾನ ಟೇಕ್ ಆಫ್ ಆಗಲು ವಿಳಂಬವಾಗಿತ್ತು. ಇದರಿಂದ ಆಟಗಾರರು ಮಧ್ಯಾಹ್ನದಿಂದ ವಿಮಾನ ನಿಲ್ದಾಣದಲ್ಲೇ ಕಾಯಬೇಕಾಗಿ ಬಂತು.
ಅಲ್ಲದೆ ಆಟಗಾರರು ಅಹಮದಾಬಾದ್ನ ಬಂದು ತಲುಪಿದ್ದು ತಡರಾತ್ರಿ 10.45 ಕ್ಕೆ. ಅಲ್ಲಿದೆ ಟೀಮ್ ಹೊಟೇಲ್ಗೆ ತಲುವಷ್ಟರಲ್ಲಿ ಮಧ್ಯರಾತ್ರಿ 12 ಗಂಟೆಯಾಗಿತ್ತು. ಅಂದರೆ ಫೈನಲ್ ಪಂದ್ಯಕ್ಕೂ ಕೇವಲ 20 ಗಂಟೆಗಳ ಮುಂಚಿತವಾಗಿ ಗುಜರಾತ್ ಟೈಟಾನ್ಸ್ ಆಟಗಾರರು ಆಗಮಿಸಿದ್ದರು.
ಇಷ್ಟೊಂದು ಕಡಿಮೆ ಅವಧಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ಆಟಗಾರರು ವಿಶ್ರಾಂತಿ ಪಡೆದು, ಫೈನಲ್ ಪಂದ್ಯಕ್ಕೆ ಸಜ್ಜಾಗಬೇಕಿತ್ತು.
ಅದೇ ವೇಳೆ ಆರ್ಸಿಬಿ ತಂಡವು ಮೇ 26 ರಿಂದಲೇ ಅಹಮದಾಬಾದ್ನಲ್ಲಿದ್ದರು. ಅಂದರೆ ನಾಲ್ಕು ದಿನಗಳ ಕಾಲ ಬಿಡುವು ಸಿಕ್ಕಿತ್ತು. ಇತ್ತ ಗುಜರಾತ್ ಟೈಟಾನ್ಸ್ ತಂಡಕ್ಕೆ ವಿಶ್ರಾಂತಿಗಾಗಿ ಒಂದು ದಿನದ ಅವಧಿ ಕೂಡ ಸಿಕ್ಕಿರಲಿಲ್ಲ.
ಅತ್ತ ಫೈನಲ್ ಪಂದ್ಯಕ್ಕೆ ಮೀಸಲು ದಿನ ಇದ್ದರೂ ಅದನ್ನು ಬಳಸಿಯಾದರೂ ಗುಜರಾತ್ ಟೈಟಾನ್ಸ್ ತಂಡಕ್ಕೆ ವಿಶ್ರಾಂತಿಗೆ ಅನುವು ಮಾಡಿಕೊಡಬಹುದಿತ್ತು.
ಅಂದರೆ ಸೋಮವಾರಕ್ಕೆ ಫೈನಲ್ ಪಂದ್ಯವನ್ನು ಮುಂದೂಡಿದ್ದರೆ ಗುಜರಾತ್ ಟೈಟಾನ್ಸ್ ತಂಡದ ಆಟಗಾರರು ಸಂಪೂರ್ಣ ವಿಶ್ರಾಂತಿ ಪಡೆದು ಅಂತಿಮ ಮ್ಯಾಚ್ಗೆ ಸಜ್ಜಾಗುತ್ತಿದ್ದರು.
ಇದರಿಂದ ಅಭಿಮಾನಿಗಳಿಗೆ ಮತ್ತಷ್ಟು ರೋಚಕ ಹಾಗೂ ಸಮಬಲದ ಹೋರಾಟದ ಫೈನಲ್ ಪಂದ್ಯವನ್ನು ನೋಡುವ ಅವಕಾಶ ದೊರೆಯುತ್ತಿತ್ತು.
ಆದರೆ ಬಿಸಿಸಿಐ ಗುಜರಾತ್ ಟೈಟಾನ್ಸ್ ತಂಡದ ಆಟಗಾರರ ಪ್ರಯಾಣದ ದಣಿವು ಹಾಗೂ ಮಾನಸಿಕ ಸ್ಥಿತಿಯನ್ನೇ ಪರಿಗಣಿಸಿಲ್ಲ. ಅಹಮದಾಬಾದ್ಗೆ ಬಂದ 20 ಗಂಟೆಯೊಳಗೆ ಫೈನಲ್ ಮ್ಯಾಚ್ ಆಡಿಸಿದ್ದಾರೆ. ಇದು ನಿಜಕ್ಕೂ ಅನ್ಯಾಯ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಕನಿಷ್ಠ ಪಕ್ಷ ಮೀಸಲು ದಿನಕ್ಕೆ ಫೈನಲ್ ಮ್ಯಾಚ್ ಅನ್ನು ಮುಂದೂಡಬೇಕಿತ್ತು. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡಕ್ಕೂ ಅಂತಿಮ ಪಂದ್ಯಕ್ಕೆ ಸಜ್ಜಾಗಲು ಅವಕಾಶ ಕಲ್ಪಿಸಬೇಕಿತ್ತು. ಆದರೆ ಇಲ್ಲಿ ಒಂದು ತಂಡಕ್ಕೆ 4 ದಿನಗಳ ವಿಶ್ರಾಂತಿ ಹಾಗೂ ಸಮಯ ಸಿಕ್ಕರೆ, ಒಂದು ತಂಡಕ್ಕೆ ಕೇವಲ 20 ಗಂಟೆಗಳ ಅವಧಿ ಮಾತ್ರ ಸಿಕ್ಕಿದೆ. ಇದು ಎರಡು ತಂಡಗಳ ನಡುವೆ ಅಸಮತೋಲನವನ್ನು ಉಂಟು ಮಾಡಿದೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಇದನ್ನೂ ಓದಿ: IPL 2026 Awards: ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ಸಂಪೂರ್ಣ ಪಟ್ಟಿ
ಒಟ್ಟಾರೆಯಾಗಿ ಹೇಳುವುದಾದರೆ, ಸುನಿಲ್ ಗವಾಸ್ಕರ್ ಅವರ ವಾದದಲ್ಲಿ ತಾರ್ಕಿಕ ಸತ್ಯಾಂಶವಿದ್ದರೂ, ಕ್ರೀಡಾ ಜಗತ್ತಿನಲ್ಲಿ ಇಂತಹ ಅನಿರೀಕ್ಷಿತ ಸವಾಲುಗಳು ಸಾಮಾನ್ಯ. ಇದನ್ನು ಗಂಭೀರವಾಗಿ ಪರಿಗಣಿಸಿ ಬಿಸಿಸಿಐ ಮುಂಬರುವ ಐಪಿಎಲ್ ಸೀಸನ್‌ಗಳಲ್ಲಿ ಫೈನಲ್ ಆಡುವ ಎರಡು ತಂಡಗಳಿಗೆ ಕನಿಷ್ಠ ಎರಡು ದಿನಗಳ ವಿಶ್ರಾಂತಿಗೆ ವ್ಯವಸ್ಥೆ ಮಾಡಲಿದ್ದಾರಾ ಕಾದು ನೋಡಬೇಕಿದೆ.