IPL 2026: RCB ತಂಡದ ಅತೀ ದೊಡ್ಡ ಸಮಸ್ಯೆಗೆ ಇಲ್ಲಿದೆ ಪರಿಹಾರ!

IPL 2026 RCB: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಚಂಡ ಪ್ರದರ್ಶನ ನೀಡಿದೆ. ಈ ಪ್ರದರ್ಶನದ ಹೊರತಾಗಿಯೂ ಆರ್​ಸಿಬಿ ತಂಡವು ದೊಡ್ಡ ಸಮಸ್ಯೆಯೊಂದನ್ನು ಎದುರಿಸುತ್ತಿದೆ. ಆ ಸಮಸ್ಯೆಯೇನು? ಅದಕ್ಕೆ ಪರಿಹಾರವೇನು? ಎಂಬುದರ ಮಾಹಿತಿ ಇಲ್ಲಿದೆ.

IPL 2026: RCB ತಂಡದ ಅತೀ ದೊಡ್ಡ ಸಮಸ್ಯೆಗೆ ಇಲ್ಲಿದೆ ಪರಿಹಾರ!
RCB

Updated on: May 21, 2026 | 9:33 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 67ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್​ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್​ನಲ್ಲಿ ಗೆಲ್ಲುವ ತಂಡಕ್ಕೆ ಮೊದಲ ಕ್ವಾಲಿಫೈಯರ್ ಆಡಲು ಅವಕಾಶ ಸಿಗಲಿದೆ. ಅಷ್ಟೇ ಅಲ್ಲದೆ ಪ್ಲೇಆಫ್ ಹಂತಕ್ಕೂ ಮುನ್ನ ಆರ್​ಸಿಬಿ ಕಣಕ್ಕಿಳಿಯಲಿರುವ ಕೊನೆಯ ಪಂದ್ಯ ಕೂಡ ಇದಾಗಿದೆ. ಹೀಗಾಗಿ ಈ ಮ್ಯಾಚ್​ ಮೂಲಕ ಆರ್​ಸಿಬಿ ತನ್ನೆಲ್ಲಾ ನೂನ್ಯತೆಗಳನ್ನು ಸರಿಪಡಿಸಿಕೊಳ್ಳಬೇಕಿದೆ.

ಇಲ್ಲಿ ಆರ್​ಸಿಬಿ ತಂಡದ ಪ್ರಮುಖ ನ್ಯೂನತೆ ಏನು ಎಂದು ನೋಡುವುದಾದರೆ… ಆರಂಭಿಕರ ವೈಫಲ್ಯ. ಅಂದರೆ ಕಳೆದ 7 ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭ ಪಡೆದಿಲ್ಲ. ಗಾಯಗೊಂಡು ಹೊರಗುಳಿದಿರುವ ಫಿಲ್ ಸಾಲ್ಟ್ ಬದಲಿಗೆ ಕಣಕ್ಕಿಳಿದಿರುವ ಜೇಕಬ್ ಬೆಥೆಲ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರುತ್ತಿಲ್ಲ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.

  • ಈ ಬಾರಿಯ ಐಪಿಎಲ್​ನಲ್ಲಿ ಜೇಕಬ್ ಬೆಥೆಲ್ 7 ಮ್ಯಾಚ್​ಗಳಲ್ಲಿ ಇನಿಂಗ್ಸ್ ಆರಂಭಿಸಿದ್ದಾರೆ.
  • ಈ ವೇಳೆ ಎದುರಿಸಿರುವುದು ಕೇವಲ 77 ಎಸೆತಗಳನ್ನು ಮಾತ್ರ. ಇನ್ನು ಕಲೆಹಾಕಿರುವುದು 96 ರನ್​ಗಳು.
  • ಜೇಕಬ್ ಬೆಥೆಲ್ ಪ್ರತಿ ಮ್ಯಾಚ್​ನಲ್ಲಿ ಕೆಲಹಾಕಿರುವ ರನ್​ ಸರಾಸರಿ ಕೇವಲ 13.71 
  • ಇನ್ನು 77 ಎಸೆತಗಳಲ್ಲಿ ಬಾರಿಸಿರುವುದು 3 ಸಿಕ್ಸ್ ಹಾಗೂ 12 ಫೋರ್​ಗಳು ಮಾತ್ರ.

ಅಂದರೆ ಆರಂಭಿಕನಾಗಿ ಜೇಕಬ್ ಬೆಥೆಲ್ ಅಟ್ಟರ್ ಫ್ಲಾಪ್ ಎಂದೇ ಹೇಳಬಹುದು. ಇದಕ್ಕೇನು ಪರಿಹಾರ ಎಂದು ನೋಡುವುದಾದರೆ…

ವೆಂಕಟೇಶ್ ಅಯ್ಯರ್ ಆಯ್ಕೆ: ಈ ಬಾರಿಯ ಐಪಿಎಲ್​ನಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಲಾಗುತ್ತಿದೆ. ಆದರೆ ಅಯ್ಯರ್ ಅತ್ಯುತ್ತಮ ಆರಂಭಿಕ ಆಟಗಾರ ಎಂಬುದು ಇಲ್ಲಿ ಉಲ್ಲೇಖಾರ್ಹ. ಈ ಹಿಂದೆ ಕೆಕೆಆರ್ ಪರ ಆರಂಭಿಕನಾಗಿ ಆಡಿದ್ದರು. ಅಲ್ಲದೆ ಇದೀಗ ಉತ್ತಮ ಫಾರ್ಮ್​ನಲ್ಲೂ ಇದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಜತ್ ಪಾಟಿದಾರ್ ಅನುಪಸ್ಥಿತಿಯಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ವೆಂಕಟೇಶ್ ಅಯ್ಯರ್ 40 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ ಅಜೇಯ 73 ರನ್ ಬಾರಿಸಿದ್ದರು. ಇದೀಗ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ರಜತ್ ಪಾಟಿದಾರ್ ಕಣಕ್ಕಿಳಿದರೆ ವೆಂಕಟೇಶ್ ಅಯ್ಯರ್ ಅವರನ್ನು ಆಡುವ ಬಳಗದಿಂದ ಕೈ ಬಿಡಬೇಕಾಗುತ್ತದೆ.

ಆದರೆ ಇಲ್ಲಿ ಜೇಕಬ್ ಬೆಥೆಲ್ ಅವರ ಬದಲಿಗೆ ವೆಂಕಟೇಶ್ ಅಯ್ಯರ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಿದರೆ ಆರ್​ಸಿಬಿ ತನ್ನ ಒಪನಿಂಗ್ ಸಮಸ್ಯೆಯನ್ನು ಸರಿಪಡಿಸಿಕೊಳ್ಳಬಹುದು. ಅಂದರೆ ಉತ್ತಮ ಫಾರ್ಮ್​ನಲ್ಲಿರುವ ವಿರಾಟ್ ಕೊಹ್ಲಿ ಹಾಗೂ ವೆಂಕಟೇಶ್ ಅಯ್ಯರ್ ಆರಂಭಿಕರಾಗಿ ಕಣಕ್ಕಿಳಿಯುವುದು ಆರ್​ಸಿಬಿಗೆ ಪ್ಲಸ್ ಪಾಯಿಂಟ್ ಆಗುವುದರಲ್ಲಿ ಅನುಮಾನವೇ ಇಲ್ಲ.

ಪ್ಲಸ್ ಪಾಯಿಂಟ್ ಏನು?

ಜೇಕಬ್ ಬೆಥೆಲ್ ಅವರನ್ನು ಕೈ ಬಿಟ್ಟು ವೆಂಕಟೇಶ್ ಅಯ್ಯರ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಿದರೆ, ಆರ್​ಸಿಬಿ ತಂಡವು ಮತ್ತೋರ್ವ ವಿದೇಶಿ ಆಟಗಾರನನ್ನು ಆಡಿಸಬಹುದು. ಅಂದರೆ ಇಲ್ಲಿ ವೇಗಿ ಜೇಕಬ್ ಡಫಿಯನ್ನೂ ಕೂಡ ಆಡುವ ಬಳಗದಲ್ಲಿ ಸೇರಿಸಿಕೊಳ್ಳಬಹುದು.

ಜೋಶ್ ಹೇಝಲ್​ವುಡ್, ಭುವನೇಶ್ವರ್ ಕುಮಾರ್ ಜೊತೆ ಜೇಕಬ್ ಡಫಿ ಕೂಡ ಇದ್ದರೆ ಆರ್​ಸಿಬಿ ತಂಡದ ಬೌಲಿಂಗ್ ಲೈನಪ್ ಕೂಡ ಮತ್ತಷ್ಟು ಬಲಿಷ್ಠವಾಗಲಿದೆ.

ಅಂದರೆ ಅತ್ತ ಆರಂಭಿಕ ಸಮಸ್ಯೆ ಸರಿಯಾಗುವುದರ ಜೊತೆ ಬೌಲಿಂಗ್ ವಿಭಾಗ ಕೂಡ ಬಲಿಷ್ಠವಾಗಲಿದೆ. ಹೀಗಾಗಿ ಆರ್​ಸಿಬಿ ತಂಡವು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ವೆಂಕಟೇಶ್ ಅಯ್ಯರ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವುದು ಉತ್ತಮ.

ಇದನ್ನೂ ಓದಿ: IPL​ ಆಡಲು ಮೊಹಮ್ಮದ್ ಅಮಿರ್​ಗೆ ‘ಗ್ರೀನ್ ಸಿಗ್ನಲ್’

ಇನ್ನು ವೆಂಕಿಯನ್ನು ಆರಂಭಿಕನಾಗಿ ಅಲ್ಲದೆ, ಮಧ್ಯಮ ಕ್ರಮಾಂಕದಲ್ಲಿ ಮುಂದುವರೆಸಲು ಬಯಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ದೇವದತ್ ಪಡಿಕ್ಕಲ್ ಅವರನ್ನು ಓಪನರ್ ಆಗಿ ಬಳಸಿಕೊಳ್ಳಬಹುದು. ಈ ಮೂಲಕ ಕೂಡ ಆರಂಭಿಕ ಸಮಸ್ಯೆಯನ್ನು ಸರಿಪಡಿಸಿ ಆರ್​ಸಿಬಿ ಬಲಿಷ್ಠ ಪಡೆಯನ್ನು ಕಣಕ್ಕಿಳಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆರಂಭಿಕ ಸಮಸ್ಯೆಯನ್ನು ಸರಿದೂಗಿಸಲು ಇಬ್ಬರು ಎಡಗೈ ದಾಂಡಿಗರ ಉತ್ತಮ ಆಯ್ಕೆ ಇದೆ. ಈ ಆಯ್ಕೆಗಳೊಂದಿಗೆ ಆರ್​ಸಿಬಿ ಪ್ಲೇಆಫ್ ಪಂದ್ಯಕ್ಕೂ ಮುನ್ನ ತನ್ನ ಓಪನಿಂಗ್ ಜೋಡಿಯನ್ನು ಬದಲಿಸಲಿದೆಯಾ ಕಾದು ನೋಡಬೇಕಿದೆ.

 

Follow Us