
ಐಪಿಎಲ್ 2026 (IPL 2026) ರ 37 ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ (CSK vs GT) ತಂಡಗಳು MA ಚಿದಂಬರಂ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಸಿಎಸ್‌ಕೆ ತನ್ನ ತವರು ಮೈದಾನದಲ್ಲಿ ಈ ಪಂದ್ಯವನ್ನು ಆಡುತ್ತಿದ್ದರಿಂದ ತವರಿನ ಲಾಭ ಪಡೆದು ಈ ಪಂದ್ಯವನ್ನು ಗೆಲ್ಲಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಸಿಎಸ್‌ಕೆ ಲೆಕ್ಕಾಚಾರವನ್ನು ಪಂದ್ಯದ ಆರಂಭದಲ್ಲೇ ಗುಜರಾತ್ ತಂಡ ಬುಡಮೇಲು ಮಾಡಿತು. ಈ ಪಂದ್ಯದಲ್ಲಿ ಟಾಸ್ ಸೋತ ಸಿಎಸ್‌ಕೆ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಆದರೆ ತಂಡದ ಕಳಪೆ ಬ್ಯಾಟಿಂಗ್ನಿಂದಾಗಿ ಕೇವಲ 158 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು. ಈ ಗೆಲುವಿನೊಂದಿಗೆ ಗುಜರಾತ್ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದರೆ, ಸಿಎಸ್‌ಕೆ 6ನೇ ಸ್ಥಾನಕ್ಕೆ ಜಾರಿದೆ.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇನ್ನಿಂಗ್ಸ್ ಪವರ್‌ಪ್ಲೇನಲ್ಲಿ ಎಡವಿ ಕೇವಲ 28 ರನ್ ಗಳಿಸಿ 3 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದು ತಂಡದ ಮೇಲೆ ಒತ್ತಡವನ್ನು ಹೆಚ್ಚಿಸಿತು. ಸಂಜು ಸ್ಯಾಮ್ಸನ್, ಉರ್ವಿಲ್ ಪಟೇಲ್, ಸರ್ಫರಾಜ್ ಖಾನ್ ಮತ್ತು ಡೆವೋಲ್ಡ್ ಬ್ರೆವಿಸ್ ಬೇಗನೇ ಔಟಾದರು. ತಂಡ ಸಂಕಷ್ಟದಲ್ಲಿದ್ದಾಗ, ನಾಯಕ ರುತುರಾಜ್ ಗಾಯಕ್ವಾಡ್ ಮತ್ತು ಶಿವಂ ದುಬೆ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿ ಐದನೇ ವಿಕೆಟ್‌ಗೆ 43 ಎಸೆತಗಳಲ್ಲಿ 59 ರನ್‌ಗಳ ಜೊತೆಯಾಟ ನಡೆಸಿದರು.
ಆದರೆ ಶಿವಂ ದುಬೆ 17 ಎಸೆತಗಳಲ್ಲಿ 22 ರನ್ ಗಳಿಸಿ ಔಟಾಗುವ ಮೂಲಕ ಈ ಜೊತೆಯಾಟ ಮುರಿದುಬಿತ್ತು. ಕಾರ್ತಿಕ್ ಶರ್ಮಾ 9 ಎಸೆತಗಳಲ್ಲಿ 15 ರನ್ಗಳಿಗೆ ಸುಸ್ತಾದರೆ, ಜೇಮಿ ಓವರ್ಟನ್ 6 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. ನಾಯಕ ರುತುರಾಜ್ ಗಾಯಕ್ವಾಡ್ ಕೊನೆಯವರೆಗೂ ಹೋರಾಡಿ 60 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ ಅಜೇಯ 74 ರನ್ ಗಳಿಸಿದರು.
CSK vs GT IPL 2026 Highlights: ಸಿಎಸ್‌ಕೆ ವಿರುದ್ಧ ಗುಜರಾತ್ಗೆ ಸುಲಭ ಜಯ
ಈ ಗುರಿ ಬೆನ್ನಟ್ಟಿದ ಗುಜರಾತ್ ಪರ ಸಾಯಿ ಸುದರ್ಶನ್ ಮತ್ತು ಶುಭಮನ್ ಗಿಲ್ ಪವರ್ ಪ್ಲೇನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 58 ರನ್‌ಗಳ ಜೊತೆಯಾಟವಾಡಿದರು. 23 ಎಸೆತಗಳಲ್ಲಿ 33 ರನ್ ಗಳಿಸಿ ಶುಭ್ಮನ್ ಗಿಲ್ ಔಟಾಗುವ ಮೂಲಕ ಈ ಜೊತೆಯಾಟ ಮುರಿದುಬಿತ್ತು. ಆ ಬಳಿಕ ಜೊತೆಯಾದ ಜೋಸ್ ಬಟ್ಲರ್ ಹಾಗೂ ಸಾಯಿ ಸುದರ್ಶನ್ ತಂಡದ ಗೆಲುವನ್ನು ಖಚಿತಪಡಿಸಿದರು. ಸಾಯಿ ಸುದರ್ಶನ್ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಅವರು 46 ಎಸೆತಗಳಲ್ಲಿ 4 ಬೌಂಡರಿ ಮತ್ತು 7 ಸಿಕ್ಸರ್ ಗಳೊಂದಿಗೆ 87 ರನ್ ಗಳಿಸಿದರೆ, ಜೋಸ್ ಬಟ್ಲರ್ 39 ರನ್ ಗಳಿಸಿ ಅಜೇಯರಾಗಿ ಉಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:09 pm, Sun, 26 April 26