RCB vs GT
Image Credit source: Starsports
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ಗೆ ಎಂಟ್ರಿ ಕೊಡಲಿದೆ. ಆದರೆ ಹೀಗೆ ಫೈನಲ್ಗೆ ಎಂಟ್ರಿ ಕೊಡುವುದು ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ಈ ಬಾರಿ ಮುಖಾಮುಖಿಯಾಗುತ್ತಿರುವುದು ಎರಡು ಬಲಿಷ್ಠ ತಂಡಗಳು.
ಈ ಬಲಿಷ್ಠತೆಯ ನಡುವೆ ನಾಲ್ಕು ಅಂಶಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯವನ್ನು ಮತ್ತಷ್ಟು ರೋಮಾಂಚನಗೊಳಿಸಲಿವೆ. ಅಂದರೆ ಈ ಹಿಂದಿನ ಅಂಕಿ ಅಂಶಗಳನ್ನು ಗಮನಿಸಿದರೆ ಇಂದಿನ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡು ಬರುವುದು ದಿಟ. ಏಕೆಂದರೆ…
- ಗುಜರಾತ್ ಟೈಟಾನ್ಸ್ ತಂಡಕ್ಕೆ ಧರ್ಮಶಾಲಾದ ಮೈದಾನದ ಪರಿಚಯವಿಲ್ಲ. 2022 ರಲ್ಲಿ ಐಪಿಎಲ್‌ಗೆ ಪ್ರವೇಶಿಸಿದ ಗುಜರಾತ್ ಟೈಟಾನ್ಸ್ ಧರ್ಮಶಾಲಾದಲ್ಲಿ ಈವರೆಗೆ ಒಂದೇ ಒಂದು ಪಂದ್ಯವಾಡಿಲ್ಲ. ಅಂದರೆ ಇದೇ ಮೊದಲ ಬಾರಿಗೆ ಹೆಚ್ಪಿಸಿಎ ಮೈದಾನದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಏತನ್ಮಧ್ಯೆ, ಆರ್‌ಸಿಬಿ ಈಗಾಗಲೇ ಐಪಿಎಲ್ 2026 ರಲ್ಲಿ ಇಲ್ಲಿ ಒಂದು ಪಂದ್ಯವನ್ನು ಆಡಿದ್ದು, ಆ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅನ್ನು 23 ರನ್‌ಗಳಿಂದ ಸೋಲಿಸಿ ಭರ್ಜರಿ ಜಯ ಸಾಧಿಸಿತ್ತು.
- ಮೊದಲ ಕ್ವಾಲಿಫೈಯರ್ ಪಂದ್ಯದ ಬಗ್ಗೆ ಕುತೂಹಲ ಹೆಚ್ಚಿಸಿರುವ ಮತ್ತೊಂದು ಅಂಶವೆಂದರೆ ಆರ್‌ಸಿಬಿ ಮತ್ತು ಜಿಟಿ ಮೊದಲ ಬಾರಿಗೆ ಪ್ಲೇಆಫ್‌ನಲ್ಲಿ ಎದುರಾಗುತ್ತಿರುವುದು. ಈ ಎರಡೂ ತಂಡಗಳು ಐಪಿಎಲ್‌ನಲ್ಲಿ ಎಂಟು ಬಾರಿ ಮುಖಾಮುಖಿಯಾಗಿದ್ದು, ಎರಡೂ ತಂಡಗಳು ತಲಾ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆದಾಗ್ಯೂ, ಉಭಯ ತಂಡಗಳು ಪ್ಲೇಆಫ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿರಲಿಲ್ಲ.
- ಕಳೆದ ಮೂರು ಸೀಸನ್ಗಳಲ್ಲಿ ಎರಡೂ ತಂಡಗಳ ಅಂಕಿಅಂಶಗಳನ್ನು ಗಣನೆಗೆ ತೆಗೆದುಕೊಂಡರೆ, ಇಂದಿನ ಮ್ಯಾಚ್ನಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಏಕೆಂದರೆ 2023 ರಿಂದ, ಆರ್‌ಸಿಬಿ ಮತ್ತು ಜಿಟಿ ಐಪಿಎಲ್‌ನಲ್ಲಿ ಎರಡು ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿದೆ. ಗಮನಾರ್ಹ ವಿಷಯವೆಂದರೆ ಈ ಅವಧಿಯಲ್ಲಿ, ಎರಡೂ ತಂಡಗಳ ಗೆಲುವು-ಸೋಲಿನ ದಾಖಲೆ ಒಂದೇ ಆಗಿದೆ. ಅಂದರೆ ಆರ್‌ಸಿಬಿ ಮತ್ತು ಜಿಟಿ ಎರಡೂ 34 ಪಂದ್ಯಗಳನ್ನು ಗೆದ್ದಿವೆ. ಹಾಗೆಯೇ 24 ಪಂದ್ಯಗಳನ್ನು ಸೋತಿವೆ.
- ಮೊದಲ ಕ್ವಾಲಿಫೈಯರ್ ಪಂದ್ಯದ ಮತ್ತೊಂದು ಕುತೂಹಲಕಾರಿ ವಿಷಯವೆಂದರೆ ಕ್ವಾಲಿಫೈಯರ್ 1 ರ ವಿಜೇತರು ಕಳೆದ ಎಂಟು ಸತತ ಸೀಸನ್‌ಗಳನ್ನು ಒಳಗೊಂಡಂತೆ 12 ಬಾರಿ ಐಪಿಎಲ್ ಚಾಂಪಿಯನ್ ಆಗಿದ್ದಾರೆ. ಈ ಅಂಕಿಅಂಶವು ಆರ್‌ಸಿಬಿ vs ಜಿಟಿ ಸುತ್ತಲಿನ ಉತ್ಸಾಹವನ್ನು ಹೆಚ್ಚಿಸಿದ್ದು, ಹೀಗಾಗಿ ಇಂದಿನ ಮ್ಯಾಚ್ನಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
ಇದನ್ನೂ ಓದಿ: ಟ್ರೋಲ್ ಮಾಡಿದವರಿಗೆ ಶ್ರೇಷ್ಠಾ ಅಯ್ಯರ್ ತಿರುಗೇಟು!
ಅಂದಹಾಗೆ ಇಂದಿನ ಪಂದ್ಯದಲ್ಲಿ ಸೋಲುವ ತಂಡ ಐಪಿಎಲ್ನಿಂದ ಹೊರಬೀಳುವುದಿಲ್ಲ. ಬದಲಾಗಿ ದ್ವಿತೀಯ ಕ್ವಾಲಿಫೈಯರ್ ಪಂದ್ಯವಾಡಬೇಕಾಗುತ್ತದೆ. ಅಂದರೆ ಮೊದಲ ಕ್ವಾಲಿಫೈಯರ್ನಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ಗೇರಿದರೆ, ಸೋತ ತಂಡ ಎಲಿಮೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದ ವಿರುದ್ಧ ಮುಖಾಮುಖಿಯಾಗಲಿದೆ. ಈ ಮೂಲಕ ದ್ವಿತೀಯ ಕ್ವಾಲಿಫೈಯರ್ ಪಂದ್ಯದ ಮೂಲಕ ಫೈನಲ್ಗೇರುವ ಅವಕಾಶ ಪಡೆಯಲಿದೆ.