
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನು ಉಳಿದಿರುವುದು ದಿನಗಳು ಮಾತ್ರ. ಇತ್ತ ಎಲ್ಲಾ ಫ್ರಾಂಚೈಸಿಗಳು ಪ್ರೀ ಸೀಸನ್ ಕ್ಯಾಂಪ್ ಶುರು ಮಾಡಿದೆ. ಈ ಕ್ಯಾಂಪ್ಗೆ ಸೇರುವ ಮುನ್ನವೇ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ಗೆ ಹೊಸ ಕಂಡೀಷನ್ ಹಾಕಿದ್ದಾರೆ ಎಂದು ವರದಿಯಾಗಿದೆ. ಆ ಕಂಡೀಷನ್ ಏನೆಂದರೆ ‘ ನೋ ಇಂಪ್ಯಾಕ್ಟ್ ಪ್ಲೇಯರ್’.
ಅಂದರೆ ಐಪಿಎಲ್ 2026 ರಲ್ಲಿ ‘ಇಂಪ್ಯಾಕ್ಟ್ ಪ್ಲೇಯರ್’ ಆಗಿ ಆಡಲು ರೋಹಿತ್ ಶರ್ಮಾ ನಿರಾಕರಿಸಿದ್ದಾರೆ. ಈ ಬಗ್ಗೆ ಅವರು ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್‌ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ವರದಿಯಾಗಿದೆ.
ಮುಂಬರುವ ಐಪಿಎಲ್ನಲ್ಲಿ ಕೇವಲ ಬ್ಯಾಟಿಂಗ್‌ಗೆ ಸೀಮಿತವಾಗದೆ, ಫೀಲ್ಡಿಂಗ್ ಒಳಗೊಂಡಂತೆ ಪೂರ್ಣ 40 ಓವರ್‌ಗಳ ಕಾಲ ಮೈದಾನದಲ್ಲಿ ಇರಲು ಬಯಸುವುದಾಗಿ ರೋಹಿತ್ ಶರ್ಮಾ ತಿಳಿಸಿದ್ದಾರೆ. ಐಪಿಎಲ್ 2025 ರಲ್ಲಿ ಹಿಟ್ಮ್ಯಾನ್ ಅವರನ್ನು ಹೆಚ್ಚಾಗಿ ಸಬ್‌ಸ್ಟಿಟ್ಯೂಟ್ ಆಗಿ ಬಳಸಲಾಗಿತ್ತು, ಇದು ಅವರಿಗೆ ಸರಿ ಎನಿಸಿಲ್ಲ ಎನ್ನಲಾಗಿದೆ.
ಈ ಸೀಸನ್‌ಗಾಗಿ ರೋಹಿತ್ ಶರ್ಮಾ ಸುಮಾರು 11 ಕೆಜಿ ತೂಕ ಇಳಿಸಿಕೊಂಡು ಅತ್ಯಂತ ಫಿಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಪೂರ್ಣ ಪಂದ್ಯ ಆಡುವ ಸಾಮರ್ಥ್ಯ ನನಗಿದೆ ಎಂದು ಅವರು ಈ ಮೂಲಕ ಸಾಬೀತುಪಡಿಸಿದ್ದಾರೆ. ಹೀಗಾಗಿ ಟೂರ್ನಿ ಆರಂಭಕ್ಕೂ ಮುನ್ನ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸದಂತೆ ತಿಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಮೈದಾನದಲ್ಲಿ ಹಿರಿಯ ಆಟಗಾರನಾಗಿ ಸಲಹೆ ನೀಡಲು ರೋಹಿತ್ ಪೂರ್ಣ ಸಮಯ ಮೈದಾನದಲ್ಲಿ ಇರುವುದು ತಂಡಕ್ಕೆ ಪ್ಲಸ್ ಆಗಲಿದೆ ಎಂದು ಹರ್ಭಜನ್ ಸಿಂಗ್ ಅವರಂತಹ ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಇತ್ತ ರೋಹಿತ್ ಶರ್ಮಾ ಕೇವಲ ಬ್ಯಾಟರ್. ಅವರ ವಯಸ್ಸು 38 ವರ್ಷ. ಹೀಗಾಗಿಯೇ ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಂಡಿತ್ತು. ಇದೀಗ ಹಿಟ್ಮ್ಯಾನ್ ತಾನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲು ಇಚ್ಛಿಸುತ್ತಿಲ್ಲ ಎಂದಿರುವುದು ಮುಂಬೈ ಇಂಡಿಯನ್ಸ್ ತಂಡದ ಚಿಂತೆಗೆ ಕಾರಣವಾಗಿದೆ.
ಏಕೆಂದರೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಬಹುತೇಕ ಆಲ್ರೌಂಡರ್ಗಳಿದ್ದಾರೆ. ಇಲ್ಲಾ ಯಂಗ್ ಸ್ಟರ್ ಪ್ಲೇಯರ್ ಗಳಿದ್ದಾರೆ. ಇದೀಗ ರೋಹಿತ್ ಶರ್ಮಾ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳಲು ಸಾಧ್ಯವಾಗದೇ ಇದ್ದರೆ, ಇತರೆ ಆಯ್ಕೆಗಳತ್ತ ಮುಖ ಮಾಡಬೇಕಾಗುತ್ತದೆ. ಇದರಿಂದ ಯುವ ಆಟಗಾರರನ್ನು ಕೈ ಬಿಡಬೇಕಾದ ಅನಿವಾರ್ಯತೆ ಮುಂಬೈ ಇಂಡಿಯನ್ಸ್ಗೆ ಎದುರಾಗಲಿದೆ.
ರೋಹಿತ್ ಶರ್ಮಾ ಮೊದಲಿನಿಂದಲೂ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮವನ್ನು ವಿರೋಧಿಸುತ್ತಾ ಬಂದಿದ್ದಾರೆ. ಈ ನಿಯಮದಿಂದಾಗಿ ಭಾರತೀಯ ಆಲ್‌ರೌಂಡರ್‌ಗಳ ಬೆಳವಣಿಗೆಗೆ ಹಿನ್ನಡೆಯಾಗುತ್ತದೆ ಎಂಬುದು ಅವರ ವಾದ. ಇದಾಗ್ಯೂ ಅವರ ಮೇಲೆಯೇ ಕಳೆದ ಸೀಸನ್ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯನ್ನು ಬಳಸಲಾಗಿತ್ತು.
ಇದನ್ನೂ ಓದಿ: ಟೀಮ್ ಇಂಡಿಯಾ ಆಟಗಾರರಿಗೆ ಈ ವಿಷಯದಲ್ಲಿ ‘ಹೊಟ್ಟೆಕಿಚ್ಚು’ ಇದೆ!
ಇದೀಗ ಟೂರ್ನಿ ಆರಂಭಕ್ಕೂ ಮುನ್ನವೇ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್‌ಗೆ ಸ್ಪಷ್ಟ ಸಂದೇಶ ರವಾನಿಸಿದ್ದು, ಈ ಮೂಲಕ ಕೇವಲ ಬ್ಯಾಟರ್ ಆಗಿ ಮಾತ್ರವಲ್ಲದೆ, ಒಬ್ಬ ಸಂಪೂರ್ಣ ಆಟಗಾರನಾಗಿ ಕಣಕ್ಕಿಳಿಯಲು ಸಜ್ಜಾಗಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಮುಂಬೈ ಇಂಡಿಯನ್ಸ್ ಈ ಬಾರಿ ಯಾರ ಮೇಲೆ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆ ಬಳಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.