IPL 2026: ತಂಡದ ನಾಯಕನನ್ನು ಘೋಷಿಸಿದ SRH
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಆವೃತ್ತಿಯ ಮಿನಿ ಹರಾಜಿಗೂ ಮುನ್ನ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಒಟ್ಟು 15 ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಅಲ್ಲದೆ 7 ಆಟಗಾರರನ್ನು ರಿಲೀಸ್ ಮಾಡಿರುವ ಎಸ್ಆರ್ಹೆಚ್ ಮೊಹಮ್ಮದ್ ಶಮಿ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮಾರಾಟ ಮಾಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಸೀಸನ್-19 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸುವವರು ಯಾರು? ಇಂತಹದೊಂದು ಪ್ರಶ್ನೆ ಮೂಡಲು ಮುಖ್ಯ ಕಾರಣ ಪ್ಯಾಟ್ ಕಮಿನ್ಸ್ ಅವರ ಗಾಯದ ಸಮಸ್ಯೆ. ಸೊಂಟದ ಮೂಳೆಯ ನೋವಿನ ಸಮಸ್ಯೆಗೀಡಾಗಿರುವ ಕಮಿನ್ಸ್ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಅಷ್ಟೇ ಅಲ್ಲದೆ ಆ್ಯಶಸ್ ಸರಣಿಯ ಬಳಿಕ ಅವರು ಹೆಚ್ಚಿನ ಸಮಯ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿತ್ತು.
ಹೀಗಾಗಿಯೇ ಐಪಿಎಲ್ 2026 ರಲ್ಲಿ ಸನ್ರೈಸರ್ಸ್ ಹೈದಾರಾಬಾದ್ ಪರ ಕಮಿನ್ಸ್ ಕಾಣಿಸಿಕೊಳ್ಳುವುದು ಕೂಡ ಅನುಮಾನ ಎನ್ನಲಾಗಿತ್ತು. ಅಲ್ಲದೆ ಹೆನ್ರಿಕ್ ಕ್ಲಾಸೆನ್ ಅಥವಾ ಟ್ರಾವಿಸ್ ಹೆಡ್ ಎಸ್ಆರ್ಹೆಚ್ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.
ಆದರೀಗ ಎಲ್ಲಾ ವದಂತಿಗಳಿಗೆ ಖುದ್ದು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತೆರೆ ಎಳೆದಿದೆ. ಐಪಿಎಲ್ 2026 ರಲ್ಲೂ ಪ್ಯಾಟ್ ಕಮಿನ್ಸ್ ಅವರೇ ಎಸ್ಆರ್ಹೆಚ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿಸಿದೆ. ಇದರೊಂದಿಗೆ ಐಪಿಎಲ್ ಸೀಸನ್-19 ರಲ್ಲಿ ಆಸ್ಟ್ರೇಲಿಯನ್ ಆಲ್ರೌಂಡರ್ ಕಾಣಿಸಿಕೊಳ್ಳುವುದು ಖಚಿತವಾಗಿದೆ.
ಪ್ಯಾಟ್ ಕಮಿನ್ಸ್ ಐಪಿಎಲ್ 2024 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು. ಅಲ್ಲದೆ ಚೊಚ್ಚಲ ಸೀಸನ್ನಲ್ಲೇ ಎಸ್ಆರ್ಹೆಚ್ ಪಡೆಯನ್ನು ಫೈನಲ್ಗೆ ಕೊಂಡೊಯ್ದಿದ್ದರು. ಆದರೆ ಕಳೆದ ಸೀಸನ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.
ಇದಾಗ್ಯೂ ಬಹುತೇಕ ಆಟಗಾರರನ್ನು ರಿಟೈನ್ ಮಾಡಿಕೊಂಡಿರುವ ಸನ್ರೈಸರ್ಸ್ ಹೈದರಾಬಾದ್ ಐಪಿಎಲ್ 2026 ರಲ್ಲಿ ಮತ್ತೊಂದು ಪರೀಕ್ಷೆ ನಡೆಸಲು ಮುಂದಾಗಿದೆ. ಅದರಂತೆ ಈ ಬಾರಿ ಕೂಡ ಪ್ಯಾಟ್ ಕಮಿನ್ಸ್ ಸಾರಥ್ಯದಲ್ಲೇ ಎಸ್ಆರ್ಹೆಚ್ ಪಡೆಯನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
ಸನ್ರೈಸರ್ಸ್ ಹೈದರಾಬಾದ್ ಉಳಿಸಿಕೊಂಡಿರುವ ಆಟಗಾರರು: ಪ್ಯಾಟ್ ಕಮ್ಮಿನ್ಸ್ (ನಾಯಕ), ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಅನಿಕೇತ್ ವರ್ಮಾ, ಸ್ಮರಣ್ ರವಿಚಂದ್ರನ್, ಇಶಾನ್ ಕಿಶನ್, ಹೆನ್ರಿಕ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಕಮಿಂದು ಮೆಂಡಿಸ್, ಹರ್ಷಲ್ ಪಟೇಲ್, ಬ್ರೈಡನ್ ಕಾರ್ಸೆ, ಜಯದೇವ್ ಉನದ್ಕತ್, ಎಶಾನ್ ಮಾಲಿಂಗ, ಝೀಶಾನ್ ಅನ್ಸಾರಿ.
ಇದನ್ನೂ ಓದಿ: IPL 2026: ಮೂವರು ಭಾರತೀಯರು: 10 ತಂಡಗಳ ಕೋಚ್ ಫೈನಲ್
ಸನ್ರೈಸರ್ಸ್ ಹೈದರಾಬಾದ್ ರಿಲೀಸ್ ಮಾಡಿದ ಆಟಗಾರರು: ಮೊಹಮ್ಮದ್ ಶಮಿ (ಲಕ್ನೋ ಸೂಪರ್ ಜೈಂಟ್ಸ್‌ಗೆ ಟ್ರೇಡ್), ಆ್ಯಡಂ ಝಂಪಾ, ರಾಹುಲ್ ಚಹರ್, ವಿಯಾನ್ ಮುಲ್ಡರ್, ಅಭಿನವ್ ಮನೋಹರ್, ಅಥರ್ವ ಟೈಡೆ, ಸಚಿನ್ ಬೇಬಿ, ಸಿಮರ್ಜೀತ್ ಸಿಂಗ್.
