AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಬ್ಬನಲ್ಲೂ ಧೈರ್ಯವೇ ಇಲ್ಲ… ಭಾರತ ತಂಡವನ್ನು ಹಾಗೆ ಮಾಡಿಟ್ಟಿದ್ದಾರೆ..!

India vs South Africa Test: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ ಮುಗಿದಿದೆ. ಕೊಲ್ಕತ್ತಾದಲ್ಲಿ ನಡೆದ ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ 30 ರನ್​ಗಳ ಜಯ ಸಾಧಿಸಿದೆ. ಇನ್ನು ದ್ವಿತೀಯ ಪಂದ್ಯವು ನವೆಂಬರ್ 22 ರಿಂದ ಶುರುವಾಗಲಿದ್ದು, ಈ ಪಂದ್ಯಕ್ಕೆ ಗುವಾಹಟಿಯ ಬರ್ಸಪಾರ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಒಬ್ಬನಲ್ಲೂ ಧೈರ್ಯವೇ ಇಲ್ಲ... ಭಾರತ ತಂಡವನ್ನು ಹಾಗೆ ಮಾಡಿಟ್ಟಿದ್ದಾರೆ..!
Team India
ಝಾಹಿರ್ ಯೂಸುಫ್
|

Updated on: Nov 18, 2025 | 2:08 PM

Share

ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲನುಭವಿಸಿತ್ತು. ಅದರಲ್ಲೂ 124 ರನ್​ಗಳ ಗುರಿ ಬೆನ್ನತ್ತಲಾಗದೇ ಸೋತು ಟೀಮ್ ಇಂಡಿಯಾ ಭಾರೀ ಮುಖಭಂಗ ಅನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳೆದ್ದಿವೆ. ಇದನ್ನೇ ಈಗ ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಕೂಡ ಪ್ರಶ್ನಿಸಿದ್ದಾರೆ.

ಸೌತ್ ಆಫ್ರಿಕಾ ವಿರುದ್ಧದ ಸೋಲನನ್ನು ಪರಾಮರ್ಶಿಸಿದ ಮೊಹಮ್ಮದ್ ಕೈಫ್, ಭಾರತ ತಂಡದಲ್ಲಿ ಭಯ  ಮತ್ತು ಅಭದ್ರತೆಯ ವಾತಾವರಣ ನಿರ್ಮಾಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಕಾರಣದಿಂದಾಗಿ ಟೀಮ್ ಇಂಡಿಯಾ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ ಎಂದಿದ್ದಾರೆ.

ಸರ್ಫರಾಝ್​ ಖಾನ್​ನಂತಹ ಆಟಗಾರ ಶತಕ ಬಾರಿಸಿದರೂ ಆತನನ್ನು ಭಾರತ ತಂಡದಿಂದ ಕೈ ಬಿಡಲಾಯಿತು. 87 ರನ್ ಗಳಿಸಿದ್ದರೂ ಸಾಯಿ ಸುದರ್ಶನ್ ಅವರಿಗೆ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್​ನಲ್ಲಿ ಸ್ಥಾನ ನೀಡಲಾಗಿಲ್ಲ. ಇವೆಲ್ಲವೂ ಇತರೆ ಆಟಗಾರರ ಮೇಲೂ ಪ್ರಭಾವ ಬೀರುತ್ತದೆ. ಇಂತಹ ನಿರ್ಧಾರಗಳು ಆಟಗಾರರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತವೆ ಎಂದು ಕೈಫ್ ಹೇಳಿದ್ದಾರೆ.

ಚೆನ್ನಾಗಿ ಆಡಿದ ಮೇಲೂ ತಂಡದಿಂದ ಕೈ ಬಿಡುವುದಾದರೆ, ಉತ್ತಮವಾಗಿ ಆಡಿದ ಆಟಗಾರರನಿಗೂ ತನ್ನ ಸ್ಥಾನ ಖಾಯಂ ಎಂಬ ಭಾವನೆ ಬರುವುದಿಲ್ಲ. ಇಲ್ಲ, ನನ್ನ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ವಿಶ್ವಾಸವೇ ಇರುವುದಿಲ್ಲ.  ಟೀಮ್ ಇಂಡಿಯಾ ಆಟಗಾರರಲ್ಲಿ ಇಂತಹ ಆತ್ಮ ವಿಶ್ವಾಸದ ಕೊರತೆಯಿದೆ. ಇದೇ ಕಾರಣದಿಂದಾಗಿ ಭಾರತೀಯ ಆಟಗಾರರು ಭಯದಿಂದ ಆಡುತ್ತಿದ್ದಾರೆ ಎಂದು ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.

100 ರನ್ ಗಳಿಸಿದ ಬಳಿಕ ಕೂಡ ಸರ್ಫರಾಝ್ ಖಾನ್​ಗೆ ಭಾರತದಲ್ಲಿ ಸ್ಥಾನ ಸಿಕ್ಕಿಲ್ಲ. ಶತಕ ಬಾರಿಸಿದ ನಂತರವೂ ಅವರು ಮತ್ತೆ ತಂಡಕ್ಕೆ ಮರಳಲು ಸಾಧ್ಯವಾಗುವುದಿಲ್ಲ. ಸಾಯಿ ಸುದರ್ಶನ್ ಕಳೆದ ಮ್ಯಾಚ್​ನಲ್ಲಿ 87 ರನ್ ಬಾರಿಸಿದ್ದರು. ಇದಾಗ್ಯೂ ಅವರನ್ನು ಕೊಲ್ಕತ್ತಾ ಟೆಸ್ಟ್​ನಿಂದ  ಕೈ ಬಿಡಲಾಯಿತು. ಇಂತಹ ನಡೆಗಳಿಂದ ಆಟಗಾರರಲ್ಲಿ ಅಭದ್ರತೆ ಕಾಡುತ್ತದೆ.  ಇದೇ ಕಾರಣದಿಂದ ಆಗಿ ಕೊಲ್ಕತ್ತಾದ ಟರ್ನಿಂಗ್ ಟ್ರ್ಯಾಕ್​ನಲ್ಲಿ ಟೀಮ್ ಇಂಡಿಯಾ ಬ್ಯಾಟರ್​ಗಳು ವಿಫಲರಾಗಿದ್ದಾರೆ ಎಂಬುದು ನನ್ನ ಅನಿಸಿಕೆ.

ವಾಷಿಂಗ್ಟನ್ ಸುಂದರ್ ಅವರು ಚೆನ್ನೈ ಮೂಲದ ಆಟಗಾರ. ಅಲ್ಲಿನ ಟರ್ನಿಂಗ್​ ಪಿಚ್​ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಇದೇ ಕಾರಣದಿಂದ ಅವರು ಸೌತ್ ಆಫ್ರಿಕಾ ವಿರುದ್ಧ ತುಸು ಯಶಸ್ವಿಯಾಗಿದ್ದರು. ಆದರೆ ನೀವು ಅದೇ ಚೆನ್ನೈ ಪಿಚ್​ನಲ್ಲಿ ಆಡಿದ ಬೆಳೆದ ಸಾಯಿ ಸುದರ್ಶನ್ ಅವರನ್ನು ಕೈ ಬಿಟ್ಟಿದ್ದಾರೆ. ಅವರನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದ್ದರೆ ಟೀಮ್ ಇಂಡಿಯಾಗೆ ಗೆಲ್ಲುವ ಚಾನ್ಸ್ ಇರುತ್ತಿತ್ತು.

ಆದರೆ ಪ್ರಸ್ತುತ ತಂಡದಲ್ಲಿ ಆಗಾಗ್ಗೆ ಬದಲಾವಣೆ ಮಾಡಲಾಗುತ್ತಿದೆ. ಆಟಗಾರರ ನೈಸರ್ಗಿಕ ಆಟಗಳನ್ನು ದುರ್ಬಲಗೊಳಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದರಿಂದ ಟೀಮ್ ಇಂಡಿಯಾ ಆಟಗಾರರ ಧೈರ್ಯವೇ ಕುಗ್ಗಿ ಹೋಗುತ್ತಿದೆ ಎಂದು ಮೊಹಮ್ಮದ್ ಕೈಫ್ ಟೀಕಿಸಿದ್ದಾರೆ.

ಒಟ್ಟಿನಲ್ಲಿ ಕಳೆದ 15 ವರ್ಷಗಳಿಂದ ಭಾರತದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯ ಗೆಲ್ಲಲಾಗದೆ ಒದ್ದಾಡುತ್ತಿದ್ದ ಸೌತ್ ಆಫ್ರಿಕಾ ತಂಡವು ಟೀಮ್ ಇಂಡಿಯಾವನ್ನು 30 ರನ್​ಗಳಿಂದ ಸೋಲಿಸಿ ಸ್ಮರಣೀಯ ಗೆಲುವು ದಾಖಲಿಸಿದೆ.

ಇದನ್ನೂ ಓದಿ: IPL 2026: ಮೂವರು ಭಾರತೀಯರು: 10 ತಂಡಗಳ ಕೋಚ್ ಫೈನಲ್

ಈ ಸರಣಿಯ ದ್ವಿತೀಯ ಪಂದ್ಯವು ನವೆಂಬರ್ 22 ರಿಂದ ಶುರುವಾಗಲಿದ್ದು, ಈ ಮ್ಯಾಚ್​ನಲ್ಲಿ ಗೆದ್ದರೆ ಮಾತ್ರ ಭಾರತ ತಂಡ ಸರಣಿ ಸೋಲನ್ನು ತಪ್ಪಿಸಿಕೊಳ್ಳಬಹುದು. ಈ ನಿರ್ಣಾಯಕ ಪಂದ್ಯದಲ್ಲೂ ಗೌತಮ್ ಗಂಭೀರ್ ಪ್ರಯೋಗ ನಡೆಸಲಿದ್ದಾರಾ ಕಾದು ನೋಡಬೇಕಿದೆ.