
ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (GT vs RR) ನಡುವೆ ನಡೆಯುತ್ತಿರುವ ಐಪಿಎಲ್ 2026 (IPL 2026) ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಎಡಗೈ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ (Vaibhav Sooryavanshi) ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಎರಡೆರಡು ದಾಖಲೆಗಳನ್ನು ನಿರ್ಮಿಸಿದ್ದಾರೆ. ಗುಜರಾತ್ ವಿರುದ್ಧದ ಈ ಪಂದ್ಯದಲ್ಲಿ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್, ಈ ಅರ್ಧಶತಕದ ಇನ್ನಿಂಗ್ಸ್ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ 700 ರನ್‌ಗಳ ಗಡಿ ದಾಟಿದರು. ಇದರ ಜೊತೆಗೆ ಪ್ಲೇಆಫ್‌ನಲ್ಲಿ 500 ರನ್ ಪೂರೈಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಪವರ್‌ಪ್ಲೇನಲ್ಲಿ 500 ರನ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.
ವೈಭವ್ ಸೂರ್ಯವಂಶಿ ಈ ಆವೃತ್ತಿಯ ಐಪಿಎಲ್‌ನಲ್ಲಿ 700 ರನ್‌ಗಳನ್ನು ಪೂರೈಸಿದ್ದಾರೆ. ಈ ಮೂಲಕ ಒಂದು ಆವೃತ್ತಿಯಲ್ಲಿ 700 ರನ್ ಬಾರಿಸಿದ ಮೊದಲ ಅನ್‌ಕ್ಯಾಪ್ಡ್ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ವೈಭವ್ಗೂ ಮುನ್ನ ಯಶಸ್ವಿ ಜೈಸ್ವಾಲ್ 2023 ರ ಐಪಿಎಲ್ಲ್ಲಿ 625 ರನ್ ಗಳಿಸಿದ್ದರು. ಇದೀಗ ಆ ದಾಖಲೆ ವೈಭವ್ ಪಾಲಾಗಿದೆ.
ಈ ಎಲ್ಲಾ ದಾಖಲೆಗಳ ನಡುವೆ ವೈಭವ್, ಗುಜರಾತ್ ಟೈಟಾನ್ಸ್ ವಿರುದ್ಧ ಬರೋಬ್ಬರಿ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಸೂರ್ಯವಂಶಿ ಅವರ ವೃತ್ತಿಜೀವನದ ಅತ್ಯಂತ ನಿಧಾನಗತಿಯ ಅರ್ಧಶತಕವಾಗಿದೆ. ಇದಕ್ಕೂ ಮೊದಲು, ಕಳೆದ ಆವೃತ್ತಿಯಲ್ಲಿ ಚೆನ್ನೈ ವಿರುದ್ಧ ಸೂರ್ಯವಂಶಿ 27 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇದು ಈ ಆವೃತ್ತಿಯಲ್ಲಿ ವೈಭವ್ ಅವರ ಆರನೇ 50+ ರನ್ ಆಗಿದೆ.
IPL 2026 GT vs RR Qualifier-2 Live Score: ಮತ್ತೆ ಶತಕದಂಚಿನಲ್ಲಿ ಎಡವಿದ ವೈಭವ್
ಇನ್ನು ಈ ಪಂದ್ಯದಲ್ಲೂ ಶತಕ ವಂಚಿತರಾದ ವೈಭವ್ ಸೂರ್ಯವಂಶಿ 96 ರನ್ ಬಾರಿಸಿ ಔಟಾದರು. ತಮ್ಮ ಇನ್ನಿಂಗ್ಸ್ನಲ್ಲಿ 47 ಎಸೆತಗಳನ್ನು ಎದುರಿಸಿದ ವೈಭವ್ 8 ಬೌಂಡರಿ ಹಾಗೂ 6 ಸಿಕ್ಸರ್ಗಳನ್ನು ಬಾರಿಸಿದರು. ಈ ಮೂಲಕ ವೈಭವ್ ಐಪಿಎಲ್‌ನಲ್ಲಿ 1000 ರನ್‌ಗಳನ್ನು ಪೂರ್ಣಗೊಳಿಸಿದರು. ಸೂರ್ಯವಂಶಿ ಕೇವಲ 23 ಇನ್ನಿಂಗ್ಸ್‌ಗಳಲ್ಲಿ 1000 ರನ್‌ಗಳನ್ನು ಪೂರೈಸಿದ್ದು, ಐಪಿಎಲ್‌ನಲ್ಲಿ ವೇಗವಾಗಿ 1000 ರನ್ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:11 pm, Fri, 29 May 26