ಬರೋಬ್ಬರಿ 1,220 ಆಟಗಾರರು: IPL 2027 ಹರಾಜಿಗೆ ಮೊದಲ ಪಟ್ಟಿ ರೆಡಿ!

IPL 2027 Mini Auction: ಬಹುನಿರೀಕ್ಷಿತ 2027ರ ಐಪಿಎಲ್ ಮಿನಿ ಹರಾಜಿನ ಆರಂಭಿಕ ಹಂತಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಒಟ್ಟು 1,220 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಬಿಸಿಸಿಐ ಈ ಪಟ್ಟಿಯನ್ನು ಎಲ್ಲಾ 10 ತಂಡಗಳಿಗೆ ಹಸ್ತಾಂತರಿಸಿದ್ದು, ತಂಡಗಳ ಬಲವರ್ಧನೆಗೆ ಲೆಕ್ಕಾಚಾರಗಳು ಶುರುವಾಗಿವೆ. 

ಬರೋಬ್ಬರಿ 1,220 ಆಟಗಾರರು: IPL 2027 ಹರಾಜಿಗೆ ಮೊದಲ ಪಟ್ಟಿ ರೆಡಿ!
Ipl 2027
Image Credit source: IPL

Updated on: Nov 25, 2026 | 10:58 AM

ಇಂಡಿಯನ್ ಪ್ರೀಮಿಯರ್ ಲೀಗ್​ 2027ರ ಆವೃತ್ತಿಯ ಮಿನಿ ಹರಾಜಿಗೆ ವೇದಿಕೆ ಸಿದ್ಧವಾಗಿದೆ. 2026ರ ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿರುವ ಈ ಹರಾಜು ಪ್ರಕ್ರಿಯೆಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 1,220 ಆಟಗಾರರ ಆರಂಭಿಕ ನೋಂದಣಿ ಪಟ್ಟಿಯನ್ನು ಎಲ್ಲಾ 10 ಫ್ರಾಂಚೈಸಿಗಳಿಗೆ ಹಂಚಿಕೊಂಡಿದೆ.

ಒಟ್ಟು 1,220 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದರೂ, ಎಲ್ಲಾ ತಂಡಗಳಲ್ಲಿ ಖಾಲಿ ಇರುವುದು ಕೇವಲ 66 ಸ್ಥಾನಗಳು ಮಾತ್ರ. ಇದರಲ್ಲಿ 25 ವಿದೇಶಿ ಆಟಗಾರರ ಸ್ಥಾನಗಳೂ ಸೇರಿವೆ. ಅಂದರೆ, ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದ ಗರಿಷ್ಠ 25 ಆಟಗಾರರ ಮಿತಿಯನ್ನು ಪೂರ್ಣವಾಗಿ ಭರ್ತಿ ಮಾಡಿದರೆ, ಕೇವಲ 66 ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ.

Loading...

ಬರೋಬ್ಬರಿ 1220 ಆಟಗಾರರು:

ಈ ಬಾರಿಯ ಹರಾಜು ಪಟ್ಟಿಯಲ್ಲಿ 939 ಭಾರತೀಯರು ಹಾಗೂ 281 ವಿದೇಶಿ ಆಟಗಾರರು ಸ್ಥಾನ ಪಡೆದಿದ್ದಾರೆ. ವಿಭಾಗವಾರು ಅಂಕಿಅಂಶಗಳು ಹೀಗಿವೆ.

  • ಅಂತಾರಾಷ್ಟ್ರೀಯ ಪಂದ್ಯ ಆಡದ ಭಾರತೀಯರು: 925 ಆಟಗಾರರು (ಇದರಲ್ಲಿ ಈ ಹಿಂದಿನ ಐಪಿಎಲ್ ಆವೃತ್ತಿಗಳಲ್ಲಿ ಆಡಿದ 127 ಆಟಗಾರರು ಸೇರಿದ್ದಾರೆ)
  • ಅಂತಾರಾಷ್ಟ್ರೀಯ ಅನುಭವವಿರುವ ವಿದೇಶಿ ಆಟಗಾರರು: 170 ಆಟಗಾರರು
  •  ಅಂತಾರಾಷ್ಟ್ರೀಯ ಪಂದ್ಯ ಆಡದ ವಿದೇಶಿ ಆಟಗಾರರು: 69 ಆಟಗಾರರು
  • ಅಸೋಸಿಯೇಟ್ ರಾಷ್ಟ್ರಗಳ ಆಟಗಾರರು: 42 ಆಟಗಾರರು
  • ಅಂತಾರಾಷ್ಟ್ರೀಯ ಅನುಭವವಿರುವ ಭಾರತೀಯರು: 14 ಆಟಗಾರರು

ವಿದೇಶಿ ಸ್ಟಾರ್ ಆಟಗಾರರು:

ವಿದೇಶಿ ಆಟಗಾರರ ವಿಭಾಗದಲ್ಲಿ ಇಂಗ್ಲೆಂಡ್‌ನ ತಾರಾ ಆಲ್‌ರೌಂಡರ್ ಬೆನ್ ಸ್ಟೋಕ್ಸ್ , ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮತ್ತು ನ್ಯೂಝಿಲೆಂಡ್‌ನ ಟ್ರೆಂಟ್ ಬೌಲ್ಟ್ ಸೇರಿದಂತೆ 28 ವಿದೇಶಿ ಆಟಗಾರರು ಗರಿಷ್ಠ ₹2 ಕೋಟಿ ಮೂಲ ಬೆಲೆಯಲ್ಲಿ ಹೆಸರು ನೋಂದಾಯಿಸಿದ್ದಾರೆ. ಬಾಂಗ್ಲಾದೇಶದ 12 ಆಟಗಾರರು ಪಟ್ಟಿಯಲ್ಲಿದ್ದರೆ, ಮುಸ್ತಫಿಝುರ್ ರೆಹಮಾನ್ ಮತ್ತು ಶಕೀಬ್ ಅಲ್ ಹಸನ್ ಹರಾಜಿನಿಂದ ದೂರ ಉಳಿದಿದ್ದಾರೆ. ಇನ್ನು ಅಸೋಸಿಯೇಟ್ ವಿಭಾಗದಲ್ಲಿ ಜಪಾನ್‌ನ ಬೆಂಜಮಿನ್ ಇಟೊ ಡೇವಿಸ್ ಕೂಡ ಹರಾಜು ಪಟ್ಟಿಯಲ್ಲಿದ್ದಾರೆ.

ಶಾರ್ಟ್ ಲಿಸ್ಟ್​:

ಹೆಸರು ನೋಂದಾಯಿಸಿಕೊಂಡಿರುವ ಎಲ್ಲಾ 1,220 ಆಟಗಾರರು ನೇರವಾಗಿ ಹರಾಜು ಕಣಕ್ಕೆ ಇಳಿಯುವುದಿಲ್ಲ. ಬದಲಾಗಿ ಅವರನ್ನು ಪರಿಶೀಲಿಸಿ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಎಲ್ಲಾ 10 ತಂಡಗಳು ತಮಗೆ ಅಗತ್ಯವಿರುವ ಆಟಗಾರರ ಆದ್ಯತಾ ಪಟ್ಟಿಯನ್ನು ಡಿಸೆಂಬರ್ 1ರ ಒಳಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಸಲ್ಲಿಸಬೇಕಿದೆ. ಫ್ರಾಂಚೈಸಿಗಳು ನೀಡುವ ಅಭಿಪ್ರಾಯದ ಆಧಾರದ ಮೇಲೆ 1,220 ಆಟಗಾರರ ಪಟ್ಟಿಯನ್ನು ಕಡಿತಗೊಳಿಸಿ, ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯುವ ಅಂತಿಮ ಹರಾಜಿನಲ್ಲಿ ಪಾಲ್ಗೊಳ್ಳುವ ಆಟಗಾರರ ಹೆಸರನ್ನು ಪ್ರಕಟಿಸಲಾಗುತ್ತದೆ.

ಇದನ್ನೂ ಓದಿ: IPL 2027: ಐಪಿಎಲ್​ ಹರಾಜಿಗೆ ಹೆಸರು ನೀಡಿದ ಅಪ್ಪ-ಮಗ!

ಒಟ್ಟಾರೆಯಾಗಿ, 1,220 ಆಟಗಾರರ ಈ ಬೃಹತ್ ಪಟ್ಟಿಯಿಂದ ಅಂತಿಮವಾಗಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಇರುವ ಕೇವಲ 66 ಸ್ಥಾನಗಳಿಗಾಗಿ ಘಟಾನುಘಟಿ ವಿದೇಶಿ ತಾರೆಯರು ಮತ್ತು ಯುವ ಪ್ರತಿಭೆಗಳ ನಡುವೆ ಭಾರಿ ಪೈಪೋಟಿ ಏರ್ಪಡುವುದು ಖಚಿತ. ಡಿಸೆಂಬರ್ 1ರಂದು ಹೊರಬೀಳಲಿರುವ ಅಂತಿಮ ಆಯ್ಕೆ ಪಟ್ಟಿ ಹಾಗೂ ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯು ಮುಂಬರುವ 2027ರ ಐಪಿಎಲ್ ಆವೃತ್ತಿಯ ಬಲಾಬಲವನ್ನು ನಿರ್ಧರಿಸಲಿದೆ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us