IPL 2027 ಟ್ರೇಡ್ ವಿಂಡೋ ಓಪನ್: ಹೀಗಿವೆ ಹೊಸ ನಿಯಮಗಳು

IPL 2027: ಇಂಡಿಯನ್ ಪ್ರೀಮಿಯರ್ ಲೀಗ್ ಮಹಾಸಂಗ್ರಾಮಕ್ಕೆ ಈಗಿನಿಂದಲೇ ವೇದಿಕೆ ಸಜ್ಜಾಗುತ್ತಿದೆ. ನವೆಂಬರ್ 17ರ ಆಟಗಾರರ ರೀಟೆನ್ಷನ್ ಗಡುವು ಮುಗಿದ ಬೆನ್ನಲ್ಲೇ, ಈಗ ಎಲ್ಲಾ 10 ಫ್ರಾಂಚೈಸಿಗಳ ಕಣ್ಣು 'ಟ್ರೇಡ್ ವಿಂಡೋ' ಮೇಲಿದೆ. ಹರಾಜಿಗೂ ಮುನ್ನವೇ ತಂಡದ ಸಮತೋಲನ ಕಾಯ್ದುಕೊಳ್ಳಲು ಇದು ಕೊನೆಯ ಅವಕಾಶವಾಗಿದ್ದು, ಆಟಗಾರರ ಖರೀದಿ ಮತ್ತು ವಿನಿಮಯಕ್ಕೆ ಬಿಸಿಸಿಐ ರೂಪಿಸಿರುವ ಪ್ರಮುಖ ನಿಯಮಗಳು ಹಾಗೂ ಕೊನೆಯ ದಿನಾಂಕದ ಸಂಪೂರ್ಣ ವಿವರ ಇಲ್ಲಿದೆ.

IPL 2027 ಟ್ರೇಡ್ ವಿಂಡೋ ಓಪನ್: ಹೀಗಿವೆ ಹೊಸ ನಿಯಮಗಳು
Ipl 2027
Image Credit source: IPL

Updated on: Nov 20, 2026 | 9:53 AM

ಇಂಡಿಯನ್ ಪ್ರೀಮಿಯರ್ ಲೀಗ್ 2027ರ ಆವೃತ್ತಿಗಾಗಿ ಎಲ್ಲಾ 10 ಫ್ರಾಂಚೈಸಿಗಳು ಬಲಿಷ್ಠ ತಂಡ ಕಟ್ಟುವ ಕಸರತ್ತಿನಲ್ಲಿ ತೊಡಗಿವೆ. ನವೆಂಬರ್ 17ರಂದು ಆಟಗಾರರ ರೀಟೆನ್ಷನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದರೂ, ತಂಡಗಳ ನಡುವೆ ಆಟಗಾರರ ವಿನಿಮಯಕ್ಕೆ ಇನ್ನೂ ಅವಕಾಶವಿದೆ. ಅಂದರೆ, ಐಪಿಎಲ್ ಟ್ರೇಡ್ ವಿಂಡೋ ಓಪನ್ ಆಗಿದ್ದು, ಈ ಮೂಲಕ ಫ್ರಾಂಚೈಸಿಗಳು ಆಟಗಾರರನ್ನು ಖರೀದಿಸಬಹುದು ಅಥವಾ ಪರಸ್ಪರ ವಿನಿಮಯ ಮಾಡಿಕೊಳ್ಳಬಹುದು.

ಟ್ರೇಡ್ ವಿಂಡೋ ಎಂದರೇನು?

ಟ್ರೇಡ್ ವಿಂಡೋ ಎನ್ನುವುದು ಹರಾಜು ಪ್ರಕ್ರಿಯೆಯನ್ನು ಹೊರತುಪಡಿಸಿ, ಎರಡು ಐಪಿಎಲ್ ಫ್ರಾಂಚೈಸಿಗಳು ಪರಸ್ಪರ ಒಪ್ಪಂದದ ಮೂಲಕ ಆಟಗಾರರನ್ನು ವರ್ಗಾವಣೆ ಮಾಡಿಕೊಳ್ಳುವ ಅಧಿಕೃತ ಅವಧಿಯಾಗಿದೆ. ತಂಡದ ಸಮತೋಲನ ಕಾಪಾಡಿಕೊಳ್ಳಲು ಮತ್ತು ಅಗತ್ಯವಿರುವ ಸ್ಥಾನಗಳಿಗೆ ಸೂಕ್ತ ಆಟಗಾರರನ್ನು ಪಡೆಯಲು ಇದು ತಂಡಗಳಿಗೆ ನೆರವಾಗುತ್ತದೆ.

Loading...

ಟ್ರೇಡ್ ವಿಂಡೋ ದಿನಾಂಕಗಳು:

  • ಮೊದಲ ಟ್ರೇಡ್ ವಿಂಡೋ ಮುಕ್ತಾಯ: ಡಿಸೆಂಬರ್ 9, 2026. (ಮಿನಿ ಹರಾಜಿಗೂ ಸರಿಯಾಗಿ ಒಂದು ವಾರ ಮುಂಚೆ ಈ ವಿಂಡೋ ಮುಚ್ಚಲ್ಪಡುತ್ತದೆ).
  •  ಐಪಿಎಲ್ 2027 ಮಿನಿ ಹರಾಜು: ಡಿಸೆಂಬರ್ 16, 2026 (ಗೋವಾದಲ್ಲಿ ನಡೆಯಲಿದೆ).
  •  ಎರಡನೇ ಟ್ರೇಡ್ ವಿಂಡೋ ಆರಂಭ: ಡಿಸೆಂಬರ್ 17, 2026 (ಹರಾಜು ಮುಗಿದ ಮರುದಿನದಿಂದಲೇ ಮತ್ತೆ ಟ್ರೇಡ್ ಆರಂಭವಾಗುತ್ತದೆ).
  • ಎರಡನೇ ಟ್ರೇಡ್ ವಿಂಡೋ ಮುಕ್ತಾಯ: ಐಪಿಎಲ್ 2027 ಟೂರ್ನಿ ಆರಂಭವಾಗುವ 30 ದಿನಗಳ ಮೊದಲು.

ಟ್ರೇಡ್ ಮಾಡುವ ಎರಡು ವಿಧಾನಗಳು:

ಟ್ರೇಡ್ ವಿಂಡೋ ಆಯ್ಕೆಯ ಮೂಲಕ ಫ್ರಾಂಚೈಸಿಗಳು ಎರಡು ರೀತಿಯಲ್ಲಿ ಆಟಗಾರರನ್ನು ಖರೀದಿಸಬಹುದು ಅಥವಾ ವಿನಿಯಮ ಮಾಡಿಕೊಳ್ಳಬಹುದು.

  1. ಆಲ್-ಕ್ಯಾಶ್ ಡೀಲ್: ಈ ಆಯ್ಕೆಯ ಮೂಲಕ ಒಂದು ತಂಡವು ಮತ್ತೊಂದು ತಂಡದ ಆಟಗಾರನನ್ನು ಕೇವಲ ಹಣ ನೀಡಿ ಖರೀದಿಸುತ್ತದೆ. ಇಲ್ಲಿ ಯಾವುದೇ ಆಟಗಾರರ ವಿನಿಮಯ ಇರುವುದಿಲ್ಲ. ಆಟಗಾರನ ಹಾಲಿ ವೇತನದ ಮೊತ್ತವನ್ನು ಖರೀದಿಸುವ ತಂಡವು ಮಾರಾಟ ಮಾಡುವ ತಂಡಕ್ಕೆ ಪಾವತಿಸುತ್ತದೆ.
  2.  ಪ್ಲೇಯರ್ ಸ್ವಾಪ್: ಈ ಆಯ್ಕೆಯ ಮೂಲಕ ಎರಡು ತಂಡಗಳು ತಮ್ಮ ಆಟಗಾರರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತವೆ (ಉದಾಹರಣೆಗೆ: ಒಬ್ಬ ಬ್ಯಾಟರ್ ಬದಲಿಗೆ ಒಬ್ಬ ಬೌಲರ್). ಒಂದಕ್ಕಿಂತ ಹೆಚ್ಚು ಆಟಗಾರರನ್ನು ಸಹ ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ.

ಟ್ರೇಡ್ ವಿಂಡೋ ನಿಯಮಗಳು:

  • ಆಟಗಾರನ ಒಪ್ಪಿಗೆ ಕಡ್ಡಾಯ: ಯಾವುದೇ ಫ್ರಾಂಚೈಸಿಯು ತನ್ನಿಷ್ಟಕ್ಕೆ ತಕ್ಕಂತೆ ಆಟಗಾರನನ್ನು ಬೇರೆ ತಂಡಕ್ಕೆ ಮಾರಾಟ ಮಾಡುವಂತಿಲ್ಲ. ಟ್ರೇಡ್ ಪ್ರಕ್ರಿಯೆ ನಡೆಯಬೇಕಾದರೆ ಸಂಬಂಧಪಟ್ಟ ಆಟಗಾರನ ಲಿಖಿತ ಒಪ್ಪಿಗೆ  ಕಡ್ಡಾಯವಾಗಿರುತ್ತದೆ.
  •  ವೇತನ ವ್ಯತ್ಯಾಸ: ಪ್ಲೇಯರ್ ಸ್ವಾಪ್ ವೇಳೆ ಇಬ್ಬರು ಆಟಗಾರರ ಸಂಭಾವನೆಯಲ್ಲಿ ವ್ಯತ್ಯಾಸವಿದ್ದರೆ, ಹೆಚ್ಚಿನ ಮೌಲ್ಯದ ಆಟಗಾರನನ್ನು ಪಡೆದುಕೊಳ್ಳುವ ತಂಡವು ಆ ವ್ಯತ್ಯಾಸದ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಬೇಕು. ಉದಾಹರಣೆಗೆ, ₹10 ಕೋಟಿ ಮೌಲ್ಯದ ಆಟಗಾರನ ಬದಲಿಗೆ ₹12 ಕೋಟಿ ಮೌಲ್ಯದ ಆಟಗಾರನನ್ನು ಪಡೆದರೆ, ಉಳಿದ ₹2 ಕೋಟಿಯನ್ನು ಆ ತಂಡ ನೀಡಬೇಕಾಗುತ್ತದೆ.
  • ಹರಾಜು ಪರ್ಸ್ ಮಿತಿ: ಆಲ್-ಕ್ಯಾಶ್ ಡೀಲ್ ಮೂಲಕ ಆಟಗಾರನನ್ನು ಖರೀದಿಸುವ ತಂಡದ ಬಳಿ, ಆ ಆಟಗಾರನ ವೇತನಕ್ಕೆ ಸಮನಾದ ಮೊತ್ತವು ಹರಾಜು ಪರ್ಸ್‌ನಲ್ಲಿ ಉಳಿದಿರಬೇಕು. ಹಾಗೆಯೇ, ಆಟಗಾರನನ್ನು ಬಿಟ್ಟುಕೊಟ್ಟ ತಂಡದ ಪರ್ಸ್‌ಗೆ ಆ ಮೊತ್ತವು ಜಮೆಯಾಗುತ್ತದೆ.
  • ಮಿನಿ ಹರಾಜಿನ ಆಟಗಾರರಿಗೆ ನಿರ್ಬಂಧ: ಡಿಸೆಂಬರ್ 17ರಿಂದ ಆರಂಭವಾಗುವ ಎರಡನೇ ಟ್ರೇಡ್ ವಿಂಡೋದಲ್ಲಿ ಕೇವಲ ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಂಡಿದ್ದ ಆಟಗಾರರನ್ನು ಮಾತ್ರ ಟ್ರೇಡ್ ಮಾಡಬಹುದು. ಡಿಸೆಂಬರ್ 16ರ ಮಿನಿ ಹರಾಜಿನಲ್ಲಿ ಖರೀದಿಸಿದ ಹೊಸ ಆಟಗಾರರನ್ನು 2027ರ ಆವೃತ್ತಿಯಲ್ಲಿ ಟ್ರೇಡ್ ಮಾಡಲು ಅವಕಾಶವಿರುವುದಿಲ್ಲ.
  • ಅಂತಿಮ ನಿರ್ಧಾರ ಬಿಸಿಸಿಐನದ್ದು: ಎರಡು ತಂಡಗಳು ಮತ್ತು ಆಟಗಾರ ಒಪ್ಪಿಗೆ ಸೂಚಿಸಿದ ನಂತರವೂ, ಐಪಿಎಲ್ ಆಡಳಿತ ಮಂಡಳಿ (BCCI) ಈ ಒಪ್ಪಂದವನ್ನು ಪರಿಶೀಲಿಸಿ ಅಧಿಕೃತ ಅನುಮೋದನೆ ನೀಡಿದ ನಂತರವೇ ಟ್ರೇಡ್ ಪೂರ್ಣಗೊಳ್ಳುತ್ತದೆ. ಒಂದೇ ಆಟಗಾರನಿಗೆ ಹಲವು ತಂಡಗಳು ಆಸಕ್ತಿ ತೋರಿಸಿದರೆ, ಆಟಗಾರ ಯಾವ ತಂಡಕ್ಕೆ ಹೋಗಬೇಕೆಂದು ನಿರ್ಧರಿಸುವ ಹಕ್ಕನ್ನು ಹೊಂದಿರುತ್ತಾನೆ.

ಇದನ್ನೂ ಓದಿ: ಸೆಂಚುರಿ, ಶತಕ, ಹಂಡ್ರೆಡ್… ಟೀಮ್ ಇಂಡಿಯಾ ವಿರುದ್ಧ ಗ್ಲೆನ್ ಫಿಲಿಪ್ಸ್ ಭರ್ಜರಿ ದಾಖಲೆ

ಒಟ್ಟಾರೆಯಾಗಿ, ಡಿಸೆಂಬರ್ 16ರ ಮಿನಿ ಹರಾಜಿಗೂ ಮುನ್ನವೇ ತಮ್ಮ ತಂಡದ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳಲು ಎಲ್ಲಾ 10 ಫ್ರಾಂಚೈಸಿಗಳಿಗೆ ಈ ಟ್ರೇಡ್ ವಿಂಡೋ ಸುವರ್ಣಾವಕಾಶವಾಗಿದೆ. ಡಿಸೆಂಬರ್ 9ರ ಒಳಗೆ ಯಾವ ಸ್ಟಾರ್ ಆಟಗಾರರು ತಮ್ಮ ತಂಡವನ್ನು ಬದಲಾಯಿಸಲಿದ್ದಾರೆ ಎಂಬುದೇ ಸದ್ಯದ ಕುತೂಹಲ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us