
ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ ಬೌಲರ್‌ಗಳ ನೆಮ್ಮದಿ ಕೆಡಿಸಿದ್ದ ‘ಕಿಂಗ್ ಕೊಹ್ಲಿ’ ಆಟಕ್ಕೆ ಬ್ರೇಕ್ ಹಾಕುವಲ್ಲಿ ಕಿವೀಸ್ ವೇಗಿ ಜೇಕಬ್ ಡಫಿ ಕೊನೆಗೂ ಯಶಸ್ವಿಯಾಗಿದ್ದಾರೆ. ಐಪಿಎಲ್‌ನಲ್ಲಿ ಜೊತೆಯಾಗಿ ಆಡಿದ ಅನುಭವವಿದ್ದರೂ, ಮೊದಲ ಮ್ಯಾಚ್‌ನಲ್ಲಿ ಕೊಹ್ಲಿ ಬ್ಯಾಟಿಂಗ್ ತಮಗೆ ತೀವ್ರ ‘ಕಿರಿಕಿರಿ’ ತಂದಿತ್ತು ಮತ್ತು ತಮ್ಮ ಯಾವುದೇ ಐಪಿಎಲ್ ಪ್ಲ್ಯಾನ್‌ಗಳು ವರ್ಕ್ ಆಗಿರಲಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದ ಡಫಿ, ಇಂದಿನ ಎರಡನೇ ಏಕದಿನ ಪಂದ್ಯದಲ್ಲಿ ಕೇವಲ 7 ರನ್‌ಗಳಿಗೆ ಕೊಹ್ಲಿ ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದ ಜೇಕಬ್ ಡಫಿಗೆ, ಕೊಹ್ಲಿ ಅವರ ಬ್ಯಾಟಿಂಗ್ ಶೈಲಿ ಮತ್ತು ನೆಟ್ಸ್ ಪ್ರಾಕ್ಟೀಸ್ ರಹಸ್ಯಗಳು ಚೆನ್ನಾಗಿಯೇ ಗೊತ್ತಿದ್ದವು. ಆದರೆ ಬುಧವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಕೇವಲ 51 ಎಸೆತಗಳಲ್ಲಿ 74 ರನ್ ಸಿಡಿಸಿ ನ್ಯೂಝಿಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದರು.
ಆ ಪಂದ್ಯದ ಬಳಿಕ ಮಾತನಾಡಿದ್ದ ಜೇಕಬ್ ಡಫಿ, “ಐಪಿಎಲ್‌ನಲ್ಲಿ ಕೊಹ್ಲಿ ಜೊತೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದ ಅನುಭವದ ಆಧಾರದ ಮೇಲೆ ಕೆಲವು ಪ್ಲ್ಯಾನ್‌ಗಳನ್ನು ಮಾಡಿಕೊಂಡಿದ್ದೆ. ಆದರೆ ನನ್ನ ಯಾವುದೇ ಐಪಿಎಲ್ ಪ್ಲ್ಯಾನ್ ವರ್ಕ್ ಆಗಲಿಲ್ಲ. ಅವರು ಕ್ರೀಸ್‌ಗೆ ಬಂದು ಅಷ್ಟು ವೇಗವಾಗಿ ರನ್ ಗಳಿಸಲು ಆರಂಭಿಸಿದರೆ ಬೌಲರ್‌ಗಳಿಗೆ ತುಂಬಾ ‘ಕಿರಿಕಿರಿ’ ಎನಿಸುತ್ತದೆ. ಅವರ ಬ್ಯಾಟಿಂಗ್‌ನಲ್ಲಿ ತಪ್ಪುಗಳನ್ನು ಹುಡುಕುವುದು ಅಸಾಧ್ಯ” ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದರು.
ಮೊದಲ ಪಂದ್ಯದಲ್ಲಿ ವಿಕೆಟ್ ಸಿಗದೆ ನಿರಾಸೆ ಅನುಭವಿಸಿದ್ದ ಜೇಕಬ್ ಡಫಿ, ಎರಡನೇ ಏಕದಿನ ಪಂದ್ಯದಲ್ಲಿ ಸರಿಯಾದ ಹೋಮ್‌ವರ್ಕ್‌ನೊಂದಿಗೆ ಕಣಕ್ಕಿಳಿದಿದ್ದರು. ಅದಕ್ಕೆ ತಕ್ಕಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ (0) ಅವರನ್ನು ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟ್ ಮಾಡಿದ ಡಫಿ, ಆ ಬಳಿಕ ವಿರಾಟ್ ಕೊಹ್ಲಿಯನ್ನು ಟಾರ್ಗೆಟ್ ಮಾಡಿದ್ದರು.
ಈ ಪ್ಲ್ಯಾನ್‌ನಂತೆಯೇ ದಾಳಿ ಮುಂದುವರಿಸಿದ ಜೇಕಬ್ ಡಫಿ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ವಿರಾಟ್ ಕೊಹ್ಲಿ (7), ಫ್ರಂಟ್ ಫೀಲ್ಡರ್‌ಗೆ ಸುಲಭ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಮೊದಲ ಪಂದ್ಯದಲ್ಲಿ ತಮಗೆ ತಲೆನೋವಾಗಿದ್ದ ಬ್ಯಾಟರ್‌ಗಳನ್ನು ಆರಂಭದಲ್ಲೇ ಪೆವಿಲಿಯನ್‌ಗೆ ಅಟ್ಟುವಲ್ಲಿ ಡಫಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: CSK ಎಡವಟ್ಟು…? ಬ್ಯಾಟಿಂಗ್ ಜೋಶ್.. ಬೌಲಿಂಗ್ ಖಾಲಿ ಬಾಕ್ಸ್!
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಝಿಲೆಂಡ್ ತಂಡ, ಭಾರತೀಯ ಬೌಲರ್‌ಗಳ ನಿಖರ ದಾಳಿಗೆ ತತ್ತರಿಸಿ 41 ಓವರ್‌ಗಳಲ್ಲಿ ಕೇವಲ 134 ರನ್‌ಗಳಿಗೆ ಆಲೌಟ್ ಆಯಿತು. ಮಳೆ ಹಾಗೂ ಮೈದಾನದ ಸಮಸ್ಯೆಯಿಂದಾಗಿ ಪಂದ್ಯವನ್ನು ನಿಗದಿತ 47 ಓವರ್‌ಗಳಿಗೆ ಸೀಮಿತಗೊಳಿಸಲಾಗಿದ್ದು, ಟೀಮ್ ಇಂಡಿಯಾ ಗೆಲುವಿಗೆ 135 ರನ್‌ಗಳ ಸುಲಭ ಗುರಿ ಪಡೆದಿದೆ. ಈ ಸಾಧಾರಣ ಮೊತ್ತವನ್ನು ಬೆನ್ನಟ್ಟುತ್ತಿರುವ ಭಾರತ, 2 ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ಮುಂದುವರಿಸಿದೆ.