
ವಿರಾಟ್ ಕೊಹ್ಲಿಯ (Virat Kohli) ಬಹುಕಾಲದ ಕನಸು ಕೊನೆಗೂ ಈಡೇರಿದೆ. ಅದು ಕೂಡ ತನ್ನ ಜೆರ್ಸಿ ಸಂಖ್ಯೆಯ 18ನೇ ವರ್ಷದಲ್ಲಿ ಎಂಬುದು ವಿಶೇಷ. ಕಳೆದ 17 ಸೀಸನ್ಗಳಲ್ಲಿ ಕೊಹ್ಲಿ ಪಾಲಿಗೆ ಮರೀಚಿಕೆಯಾಗಿದ್ದ ಐಪಿಎಲ್ ಟ್ರೋಫಿಯನ್ನು ಈ ಬಾರಿ ಎತ್ತಿ ಹಿಡಿಯುವಲ್ಲಿ ಸಫಲರಾಗಿದ್ದಾರೆ. ಈ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಆಡಿದ ಪ್ರತಿಯೊಂದು ಮಾತುಗಳು ಅಣಿಮುತ್ತುಗಳು ಎಂದರೆ ತಪ್ಪಾಗಲಾರದು. ಅದರಲ್ಲೂ ಐಪಿಎಲ್ ಗುಂಗಿನಲ್ಲಿರುವ ಯುವ ಆಟಗಾರರಿಗೆ ಕಿಂಗ್ ಕೊಹ್ಲಿ ಕಿವಿಮಾತೊಂದನ್ನು ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಈ ಗೆಲುವು ತಂಡಕ್ಕೂ ಅಭಿಮಾನಿಗಳಿಗೂ ಸಮಾನ. ಏಕೆಂದರೆ ಇಂತಹದೊಂದು ಕ್ಷಣಕ್ಕಾಗಿ ನಾವು 18 ವರ್ಷಗಳಿಂದ ಕಾದಿದ್ದೇವೆ. ನಾನು ನನ್ನ ಯೌವನ, ಶ್ರೇಷ್ಠತೆ ಮತ್ತು ಅನುಭವವನ್ನು ಈ ತಂಡಕ್ಕೆ ನೀಡಿದ್ದೇನೆ. ನಾನು ಪ್ರತಿ ಸೀಸನ್ನಲ್ಲೂ ಈ ಟ್ರೋಫಿಯನ್ನು ಗೆಲ್ಲಲು ಪ್ರಯತ್ನಿಸಿದ್ದೇನೆ. ನನ್ನಲ್ಲಿರುವ ಎಲ್ಲವನ್ನೂ ನೀಡಿದ್ದೇನೆ. ಅಂತಿಮವಾಗಿ ಈ ಟ್ರೋಫಿ ದಕ್ಕಿರುವುದು ಅದ್ಭುತ ಭಾವನೆ. ಇಂತಹದೊಂದು ದಿನ ಬರುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಹೀಗಾಗಿಯೇ ಕೊನೆಯ ಎಸೆತ ಎಸೆದ ನಂತರ ನಾನು ಭಾವುಕನಾದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಅದೇ ಸಮಯದಲ್ಲಿ, ನಿಮ್ಮ ವೃತ್ತಿಜೀವನದ ಸ್ಮರಣೀಯ ಕ್ಷಣಗಳಲ್ಲಿ ಐಪಿಎಲ್ ಟ್ರೋಫಿಯನ್ನು ನೀವು ಎಲ್ಲಿ ಇರಿಸುತ್ತೀರಿ ಎಂದು ಪ್ರಶ್ನಿಸಲಾಯಿತು. ಈ ಪ್ರಶ್ನೆಗೆ ಉತರಿಸಿದ ಕೊಹ್ಲಿ ‘ನಾನು ಹೇಳಿದಂತೆ, ಕಳೆದ 18 ವರ್ಷಗಳಲ್ಲಿ ನಾನು ನನ್ನೆಲ್ಲವನ್ನೂ ನೀಡಿದ್ದೇನೆ. ಏನೇ ಆಗಲಿ, ನಾನು ಈ ತಂಡಕ್ಕೆ ನಿಷ್ಠನಾಗಿದ್ದೇನೆ. ನಾನು ಯೋಚಿಸಿದ ಕ್ಷಣಗಳು ನನ್ನಲ್ಲಿದ್ದವು, ಆದರೆ ನಾನು ಈ ತಂಡಕ್ಕೆ ಅಂಟಿಕೊಂಡೆ. ನಾನು ಅವರ ಹಿಂದೆ ನಿಂತಿದ್ದೆ, ಅವರು ನನ್ನ ಹಿಂದೆ ನಿಂತರು. ಮತ್ತು ನಾನು ಯಾವಾಗಲೂ ಆರ್ಸಿಬಿಯೊಂದಿಗೆ ಟ್ರೋಫಿ ಗೆಲ್ಲುವ ಕನಸು ಕಂಡಿದ್ದೆ. ಇದು ಬೇರೆಯವರೊಂದಿಗೆ ಗೆಲ್ಲುವುದಕ್ಕಿಂತ ಹೆಚ್ಚು ವಿಶೇಷವಾಗಿದೆ. ಏಕೆಂದರೆ ನನ್ನ ಹೃದಯ ಬೆಂಗಳೂರಿನೊಂದಿಗಿದೆ, ನನ್ನ ಆತ್ಮ ಬೆಂಗಳೂರಿನೊಂದಿಗಿದೆ ಎಂದರು.
ಐಪಿಎಲ್ ಟ್ರೋಫಿ ಗೆದ್ದ ಖುಷಿಯಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ನ ಮಹತ್ವವನ್ನು ಸಹ ಎತ್ತಿ ಹಿಡಿದರು. ಈ ಬಗ್ಗೆ ಮಾತನಾಡಿದ ಕೊಹ್ಲಿ, ನಿಮಗೆ ಗೊತ್ತಾ, ಈ ಕ್ಷಣ ನನ್ನ ವೃತ್ತಿಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದಾಗಿದೆ. ಆದರೆ ಇದು ಟೆಸ್ಟ್ ಕ್ರಿಕೆಟ್‌ಗಿಂತ ಐದು ಹಂತಗಳಿಗಿಂತ ಕಡಿಮೆ. ನಾನು ಈಗಲೂ ಟೆಸ್ಟ್ ಕ್ರಿಕೆಟ್ ಅನ್ನು ಗೌರವಿಸುತ್ತೇನೆ. ಮತ್ತು ನನಗೆ ಟೆಸ್ಟ್ ಕ್ರಿಕೆಟ್ ಇಷ್ಟ.
ಆದ್ದರಿಂದ ಮುಂಬರುವ ಯುವಕರು ಆ ಸ್ವರೂಪವನ್ನು ಗೌರವದಿಂದ ತೆಗೆದುಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ. ಏಕೆಂದರೆ ನೀವು ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರದರ್ಶನ ನೀಡಿದರೆ, ನೀವು ಜಗತ್ತಿನ ಎಲ್ಲೇ ಹೋದರೂ, ಜನರು ನಿಮ್ಮನ್ನು ಗೌರವಿಸುತ್ತಾರೆ. ನಿಮ್ಮೊಂದಿಗೆ ಕೈಕುಲುಕುತ್ತಾರೆ. ಅಲ್ಲದೆ ಚೆನ್ನಾಗಿ ಆಡಿದ್ದೀರಿ ಎಂದು ಪ್ರಶಂಸಿಸುತ್ತಾರೆ.
ಹೀಗಾಗಿ ನೀವು ವಿಶ್ವ ಕ್ರಿಕೆಟ್‌ನಲ್ಲಿ ಎಲ್ಲೆಡೆ ಗೌರವವನ್ನು ಗಳಿಸಲು ಬಯಸಿದರೆ, ಟೆಸ್ಟ್ ಕ್ರಿಕೆಟ್ ಅನ್ನು ಚೆನ್ನಾಗಿ ಆಡಿ. ಆ ಸ್ವರೂಪವನ್ನು ನಿಮ್ಮ ಹೃದಯ ಮತ್ತು ಆತ್ಮದಲ್ಲಿ ಇರಿಸಿಕೊಳ್ಳಿ. ಈ ಮೂಲಕ ಟೆಸ್ಟ್ ಕ್ರಿಕೆಟ್ ಅನ್ನು ಗೌರವಿಸಿ, ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಬೇಕೆಂದು ವಿರಾಟ್ ಕೊಹ್ಲಿ ಯುವ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ: ದಾಖಲೆ ಭರ್ಜರಿ ದಾಖಲೆ… ಈ ರೀತಿಯಾಗಿ ಟ್ರೋಫಿ ಎತ್ತಿಹಿಡಿದ ಏಕೈಕ ತಂಡ RCB
ಅಂದಹಾಗೆ ವಿರಾಟ್ ಕೊಹ್ಲಿ ಕೆಲ ದಿನಗಳ ಹಿಂದೆಯಷ್ಟೇ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ದೀರ್ಘಾವಧಿ ಸ್ವರೂಪವನ್ನು ಗೌರವಿಸುವಂತೆ, ಟೆಸ್ಟ್ ಕ್ರಿಕೆಟ್ ಅನ್ನು ಮತ್ತೊಂದು ಮಜಲಿನತ್ತ ಕೊಂಡೊಯ್ಯಬೇಕೆಂದು ಕರೆ ನೀಡಿರುವುದು ವಿಶೇಷ.