T20 World Cup 2021 ಚುಟುಕು ಕ್ರಿಕೆಟ್ ಕದನ ಶುರುವಾಗಿದೆ. ಮೊದಲಾರ್ಧದಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿದೆ. ಈ ಸುತ್ತಿನಲ್ಲಿ 2 ಗುಂಪುಗಳಿದ್ದು, ಈ ಎರಡು ಗ್ರೂಪ್ಗಳಲ್ಲಿ ಅಗ್ರಸ್ಥಾನ ಪಡೆಯುವ 4 ತಂಡಗಳು ಸೂಪರ್ 12ಗೆ ಎಂಟ್ರಿ ಕೊಡಲಿದೆ. ಗ್ರೂಪ್ ಎ ನಲ್ಲಿ ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್, ನಮೀಬಿಯಾ ತಂಡಗಳಿದ್ದರೆ, ಗ್ರೂಪ್ ಬಿನಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂಗಿನಿಯಾ, ಓಮಾನ್ ತಂಡಗಳಿವೆ. ಇಲ್ಲಿ ಮೇಲ್ನೋಟಕ್ಕೆ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಬಲಿಷ್ಠವಾಗಿ ಕಂಡರೂ, ಈ ಇಬ್ಬರಿಗೂ ಸವಾಲೆಸುವ ಸಾಮರ್ಥ್ಯ ಹೊಂದಿರುವ ತಂಡಗಳಾಗಿ ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್ ತಂಡಗಳಿವೆ. ಹೀಗಾಗಿ ಕ್ರಿಕೆಟ್ ಅಂಗಳದ ಶಿಶು ಎನಿಸಿಕೊಂಡಿರುವ ಸ್ಕಾಟ್ಲೆಂಟ್ ಹಾಗೂ ಐರ್ಲೆಂಡ್ ಈ ಬಾರಿ ಸೂಪರ್ 12 ಹಂತಕ್ಕೇರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನು ಪುಷ್ಠೀಕರಿಸುವಂತೆ ಮೊದಲ ಪಂದ್ಯದಲ್ಲೇ ಸ್ಕಾಟ್ಲೆಂಡ್ ಬಲಿಷ್ಠ ಬಾಂಗ್ಲಾದೇಶ ತಂಡಕ್ಕೆ ಸೋಲುಣಿಸಿದೆ. ಇತ್ತೀಚೆಗಷ್ಟೇ ತವರಿನಲ್ಲಿ ನಡೆದ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ದ ಸರಣಿ ಗೆದ್ದು ಬೀಗಿದ್ದ ಬಾಂಗ್ಲಾ ಆಟಗಾರರಿಗೆ ಮೊದಲ ಪಂದ್ಯದಲ್ಲೇ ಸ್ಕಾಟ್ಲೆಂಟ್ ಶಾಕ್ ನೀಡಿದೆ. ಕೇವಲ 140 ರನ್ಗಳಿಸಿದರೂ, ಶಕೀಬ್ ಅಲ್ ಹಸನ್, ಮುಷ್ಫಿಕುರ್ ರೆಹಮಾನ್, ಮಹದುಲ್ಲಾ ರಂತಹ ಸ್ಟಾರ್ ಆಟಗಾರರನ್ನೇ ಕಟ್ಟಿಹಾಕಿ ಸ್ಕಾಟ್ಲೆಂಡ್ 6 ರನ್ಗಳ ರೋಚಕ ಜಯ ಸಾಧಿಸಿದೆ.
ಅಭ್ಯಾಸ ಪಂದ್ಯಗಳಿಂದಲೇ ಪ್ರದರ್ಶನ ನೀಡುತ್ತಾ ಬಂದಿರುವ ಸ್ಕಾಟ್ಲೆಂಡ್, ನೆದರ್‌ಲ್ಯಾಂಡ್ಸ್ ಮತ್ತು ನಮೀಬಿಯಾ ವಿರುದ್ಧ ಸತತ ಗೆಲುವಿನೊಂದಿಗೆ ಇದೀಗ ಟಿ20 ವಿಶ್ವಕಪ್ ಆರಂಭಿಸಿತ್ತು. ಇದೀಗ ಬಾಂಗ್ಲಾ ತಂಡಕ್ಕೆ ಸೋಲುಣಿಸಿ ಟಿ20 ವಿಶ್ವಕಪ್ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ಅದರಲ್ಲೂ ತಂಡದ ಆರಂಭಿಕ ಬ್ಯಾಟ್ಸ್ಮನ್ 28 ವರ್ಷದ ಜಾರ್ಜ್ ಮುನ್ಸಿ ಕಳೆದ 5 ಇನಿಂಗ್ಸ್ಗಳಲ್ಲಿ ಮೂರು ಅರ್ಧ ಶತಕ ಬಾರಿಸಿದ್ದಾರೆ. ಹಾಗೆಯೇ ಪ್ರಸ್ತುತ ಟಿ20 ರ್ಯಾಕಿಂಗ್ನಲ್ಲಿ ಮುನ್ಸಿ 22ನೇ ಸ್ಥಾನ ಅಲಂಕರಿಸಿದ್ದಾರೆ. ಇನ್ನು ತಂಡದಲ್ಲಿ ಆರು ಬೌಲರುಗಳಿರುವುದು ಸ್ಕಾಟ್ಲೆಂಟ್ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠವಾಗಿಸಿದೆ. ಇದೇ ಕಾರಣದಿಂದ ಬಾಂಗ್ಲಾ ಬ್ಯಾಟ್ಸ್ಮನ್ಗಳು ರನ್ಗಳಿಸಲು ಪರದಾಡಿದ್ದರು.
ಇನ್ನು ಐರ್ಲೆಂಡ್ ವಿಷಯಕ್ಕೆ ಬಂದರೆ, ಎಲ್ಲರಿಗೂ ತಿಳಿದಿರುವಂತೆ ಇದೊಂದು ಫಿನಿಕ್ಸ್ ತಂಡ. ಯಾವಾಗ ಬೇಕಿದ್ದರೂ ಯಾವುದೇ ಪಂದ್ಯವನ್ನು ಗೆಲ್ಲಬಲ್ಲ ಸಾಮರ್ಥ್ಯ ಹೊಂದಿರುವ ತಂಡ. ಇದಕ್ಕೆ ಸಾಕ್ಷಿಯೇ ಈ ತಂಡವು ಇಂಗ್ಲೆಂಡ್ ಸೋಲುಣಿಸಿರುವುದು. 2011 ರ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 327 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಐರ್ಲೆಂಡ್ 49.1 ಓವರ್ನಲ್ಲಿ 329 ರನ್ಗಳಿಸಿ ಭರ್ಜರಿ ಜಯ ಸಾಧಿಸಿತು.
ಇದಾಗಿ ದಶಕಗಳು ಕಳೆದರೂ, ತಂಡವು ಸಾಂಘಿಕ ಪ್ರದರ್ಶನವನ್ನೇ ನಂಬಿದೆ ಎಂಬುದಕ್ಕೆ ಮತ್ತೊಮ್ಮೆ ಇಂಗ್ಲೆಂಡ್ಗೆ ಸೋಲುಣಿಸಿರುವುದೇ ಸಾಕ್ಷಿ. ಕಳೆದ ವರ್ಷ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 328 ರನ್ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಐರ್ಲೆಂಡ್ ತಂಡವು ಕೇವಲ 3 ವಿಕೆಟ್ ನಷ್ಟಕ್ಕೆ 329 ಬಾರಿಸಿ ಭರ್ಜರಿ ಜಯ ತನ್ನದಾಗಿಸಿಕೊಂಡಿತು. ಅಷ್ಟೇ ಅಲ್ಲದೆ ಕಳೆದ ಕೆಲ ವರ್ಷಗಳಿಂದ ಐರ್ಲೆಂಡ್ ತಂಡವು ವೆಸ್ಟ್ ಇಂಡೀಸ್, ಇಂಗ್ಲೆಂಡ್, ಅಫ್ಘಾನಿಸ್ತಾನ್ನಂತಹ ಬಲಿಷ್ಠ ತಂಡಗಳ ವಿರುದ್ದವೇ ಏಕದಿನ ಕ್ರಿಕೆಟ್ನಲ್ಲಿ 300 ಅಧಿಕ ರನ್ ಬಾರಿಸಿ ಅಬ್ಬರಿಸಿದೆ.
ಅದರಲ್ಲೂ ತಂಡದ ಚೇಸ್ ಮಾಸ್ಟರ್ ಎನಿಸಿಕೊಂಡಿರುವ ಪಾಲ್ ಸ್ಟರ್ಲಿಂಗ್, ಡೇವಿಡ್ ವಿಲ್ಲೆ ಈ ಬಾರಿ ಕೂಡ ಐರ್ಲೆಂಡ್ ಬಳಗದಲ್ಲಿದ್ದಾರೆ. ಇನ್ನು 15 ಸದಸ್ಯ ತಂಡದಲ್ಲಿ ಎಂಟು ಮಂದಿ 21 ರಿಂದ 25 ವಯಸ್ಸಿನವರು ಎಂಬುದು ವಿಶೇಷ. ಹಾಗೆಯೇ ಪ್ರಸ್ತುತ ಟಿ20 ರ್ಯಾಕಿಂಗ್ನಲ್ಲಿ ಪಾಲ್ ಸ್ಟರ್ಲಿಂಗ್ 15ನೇ ಸ್ಥಾನ ಅಲಂಕರಿಸಿದ್ದಾರೆ. ಅಂದರೆ ಟಿ20 ರ್ಯಾಕಿಂಗ್ನಲ್ಲಿ ಮೊದಲ ಐವತ್ತು ಸ್ಥಾನಗಳಲ್ಲಿ ಪ್ರಸ್ತುತ ಟೀಮ್ ಇಂಡಿಯಾದ 5 ಆಟಗಾರರು ಸ್ಥಾನ ಪಡೆದಿದ್ದರೆ, ಐರ್ಲೆಂಡ್ನ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ಅದೇ ರೀತಿ ಟಾಪ್ 50 ನಲ್ಲಿ ಸ್ಕಾಟ್ಲೆಂಡ್ನ 5 ಆಟಗಾರರು ಸ್ಥಾನ ಕಾಣಿಸಿಕೊಂಡಿದ್ದಾರೆ. ಅಂದರೆ ಟಿ20 ಕ್ರಿಕೆಟ್ನಲ್ಲಿ ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್ ಆಟಗಾರರು ವಿಶ್ವದ ಟಾಪ್ ತಂಡಗಳ ಆಟಗಾರರಿಗೆ ಸವಾಲೆಸುವಂತೆ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಈ ಎರಡು ತಂಡಗಳು ಸೂಪರ್-12 ಗೆ ಎಂಟ್ರಿ ಕೊಟ್ಟರೆ ಬಲಿಷ್ಠರು ಎನಿಸಿಕೊಂಡ ತಂಡಗಳಿಗೆ ದೊಡ್ಡ ಸವಾಲಾಗುವುದರಲ್ಲಿ ಡೌಟೇ ಇಲ್ಲ. ಏಕೆಂದರೆ ಈ ಎರಡು ತಂಡಗಳಿಗೆ ಸೋಲಿನ ಆತಂಕ ಇಲ್ಲ…ಹೇಗಾದ್ರೂ ಮಾಡಿ ಗೆಲ್ಲುದೊಂದೇ ಅವರ ಮಂತ್ರ.
ಇದನ್ನೂ ಓದಿ: 1985 ರಿಂದ 2021: 25 ಕ್ಕೂ ಹೆಚ್ಚು ಬಾರಿ ಬದಲಾದ ಟೀಮ್ ಇಂಡಿಯಾ ಜೆರ್ಸಿ
ಇದನ್ನೂ ಓದಿ: IPL 2021: ಈ ಬಾರಿಯ ಐಪಿಎಲ್ನಲ್ಲಿ ಕಾರು ಸಿಕ್ಕಿದ್ದು ಯಾರಿಗೆ ಗೊತ್ತಾ?
ಇದನ್ನೂ ಓದಿ: IPL 2021 award winners: ಯಾರಿಗೆ ಯಾವ ಪ್ರಶಸ್ತಿ: ಇಲ್ಲಿದೆ ಸಂಪೂರ್ಣ ಪಟ್ಟಿ
Published On - 3:23 pm, Mon, 18 October 21