IND vs IRE: ಐರ್ಲೆಂಡ್ ಐತಿಹಾಸಿಕ ಸಾಧನೆ; ಟೀಂ ಇಂಡಿಯಾಕ್ಕೆ ವೈಟ್ ವಾಶ್ ಮುಖಭಂಗ

India vs Ireland T20: ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸ ಮಾಡಿದ್ದ ಟೀಂ ಇಂಡಿಯಾ 2-0 ಅಂತರದಿಂದ ಸರಣಿ ಗೆಲ್ಲಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, 'ಕ್ರಿಕೆಟ್ ಶಿಶು' ಐರ್ಲೆಂಡ್, ಭಾರತಕ್ಕೆ ಮರ್ಮಾಘಾತ ನೀಡಿದೆ. ಮೊದಲ ಹಾಗೂ ಎರಡನೇ ಪಂದ್ಯಗಳನ್ನು ಗೆದ್ದು, ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ವಿರುದ್ಧ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಅಚ್ಚರಿ ಮೂಡಿಸಿದೆ. ವಿಶ್ವ ಚಾಂಪಿಯನ್ ಅಹಂಕಾರ ಭಾರತಕ್ಕೆ ಸೋಲಿನ ರುಚಿ ತೋರಿಸಿದೆ.

IND vs IRE: ಐರ್ಲೆಂಡ್ ಐತಿಹಾಸಿಕ ಸಾಧನೆ; ಟೀಂ ಇಂಡಿಯಾಕ್ಕೆ ವೈಟ್ ವಾಶ್ ಮುಖಭಂಗ
Ireland Team

Updated on: Jun 28, 2026 | 11:08 PM

ಎರಡು ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸ ಮಾಡಿದ್ದ ಟೀಂ ಇಂಡಿಯಾ (India vs Ireland), ಎರಡು ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆದ್ದು ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಳ್ಳಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅಲ್ಲಿ ನಡೆದಿದ್ದ ಬೇರೆ. ವಿಶ್ವ ಚಾಂಪಿಯನ್​ಗಳೆಂಬ ಅಹಂಕಾರವನ್ನು ಮೈದುಂಬಿಸಿಕೊಂಡಿದ್ದ ಟೀಂ ಇಂಡಿಯಾಕ್ಕೆ ಕ್ರಿಕೆಟ್ ಶಿಶು ಐರ್ಲೆಂಡ್ ಎಂದಿಗೂ ಮರೆಯದ ಮರ್ಮಾಘಾತ ನೀಡಿದೆ. ಮೊದಲ ಟಿ20 ಪಂದ್ಯವನ್ನು 34 ರನ್​ಗಳಿಂದ ಗೆದ್ದುಕೊಂಡಿದ್ದ ಐರ್ಲೆಂಡ್ ಎರಡನೇ ಪಂದ್ಯವನ್ನು ಕೇವಲ 1 ರನ್ನಿಂದ ಗೆದ್ದುಕೊಳ್ಳುವ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಟೀಂ ಇಂಡಿಯಾ ವಿರುದ್ಧ ಟಿ20 ಸರಣಿಯನ್ನು ಗೆದ್ದುಕೊಂಡಿದ್ದಲ್ಲದೆ ಕ್ಲೀನ್ ಸ್ವೀಪ್ ಮಾಡಿದ ದಾಖಲೆಯನ್ನು ನಿರ್ಮಿಸಿತು.

ಸರಣಿ ಕ್ಲೀನ್ ಸ್ವೀಪ್

ಎರಡು ದಿನಗಳ ಹಿಂದೆ ಇದೇ ಬೆಲ್‌ಫಾಸ್ಟ್‌ನಲ್ಲಿ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ ಐರ್ಲೆಂಡ್ ತಂಡವು ಯಾವುದೇ ಸ್ವರೂಪದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಸೋಲಿಸಿದ ಸಾಧನೆ ಮಾಡಿತ್ತು. ಅದಕ್ಕೂ ಮೊದಲು, ಐರಿಶ್ ತಂಡವು ಸತತ 11 ಪಂದ್ಯಗಳಲ್ಲಿ ಸೋಲುಗಳನ್ನು ಅನುಭವಿಸಿತ್ತು. ಆದರೆ ಟೀಂ ಇಂಡಿಯಾ ವಿರುದ್ಧ ಐರ್ಲೆಂಡ್ ಬೇರೆಯದ್ದೇ ಕಥೆ ಬರೆಯಿತು. ಐರಿಶ್ ತಂಡವು ಭಾರತವನ್ನು ಮೊದಲ ಬಾರಿಗೆ ಸೋಲಿಸಿದ್ದಲ್ಲದೆ, ಎರಡು ಬಾರಿಯ ಹಾಲಿ ಟಿ20 ವಿಶ್ವ ಚಾಂಪಿಯನ್‌ಗಳನ್ನು ಸತತ ಪಂದ್ಯಗಳಲ್ಲಿ ಸೋಲಿಸಿ, 2-0 ಅಂತರದಲ್ಲಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತು.

ಕಾಕತಾಳೀಯ ಸೋಲು

ಭಾರತ ಟಿ20 ತಂಡದ ನೂತನ ನಾಯಕ ಶ್ರೇಯಸ್ ಅಯ್ಯರ್​ ಹಾಗೂ ಗೌತಮ್ ಗಂಭೀರ್ ಜೋಡಿಗೆ ಈ ಸರಣಿ ಸೋಲು ಜೀವನ ಪರ್ಯಂತ ನೆನಪಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ ಟೀಂ ಇಂಡಿಯಾ 1,050 ದಿನಗಳ ನಂತರ ದ್ವಿಪಕ್ಷೀಯ ಟಿ20ಸರಣಿಯನ್ನು ಸೋತಿದೆ. ಭಾರತದ ಕೊನೆಯ ಬಾರಿಗೆ 2023 ರ ಆರಂಭದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ ಸೋತಿತ್ತು. ಆದರೆ ಅದೇ ವರ್ಷ, ಐರ್ಲೆಂಡ್ ಪ್ರವಾಸ ಮಾಡಿದ್ದ ಭಾರತ ತಂಡ ಸರಣಿಯನ್ನು 2-0 ಅಂತರದಿಂದ ಗೆಲ್ಲುವ ಮೂಲಕ ತನ್ನ ಗೆಲುವಿನ ಹಾದಿಯನ್ನು ಪ್ರಾರಂಭಿಸಿತು. ಮುಂದಿನ ಮೂರು ವರ್ಷಗಳಲ್ಲಿ, ಟೀಂ ಇಂಡಿಯಾ ಸತತ 16 ಸರಣಿಗಳು ಮತ್ತು ಪಂದ್ಯಾವಳಿಗಳಲ್ಲಿ (ಎರಡು ಟಿ20 ವಿಶ್ವಕಪ್‌ಗಳು, ಏಷ್ಯಾಕಪ್ ಮತ್ತು ಏಷ್ಯನ್ ಗೇಮ್ಸ್) ಅಜೇಯವಾಗಿ ಉಳಿದಿತ್ತು. ಕಾಕತಾಳೀಯವಾಗಿ, ಈ ಪ್ರಯಾಣವು ಐರ್ಲೆಂಡ್‌ನಲ್ಲಿ ಕೊನೆಗೊಂಡಿದೆ.

154 ರನ್ ಕಲೆಹಾಕಿದ ಐರ್ಲೆಂಡ್

ಇನ್ನು ಎರಡನೇ ಟಿ20 ಪಂದ್ಯದ ಬಗ್ಗೆ ಹೇಳುವುದಾದರೆ, ಈ ಪಂದ್ಯದಲ್ಲೂ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡಕ್ಕೆ ಮತ್ತೊಮ್ಮೆ ಉತ್ತಮ ಆರಂಭ ಸಿಗಲಿಲ್ಲ. ಎಂಟನೇ ಓವರ್ ವೇಳೆಗೆ ಕೇವಲ 48 ರನ್‌ ಕಲೆಹಾಕಿ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಆದಾಗ್ಯೂ, ಹ್ಯಾರಿ ಟೆಕ್ಟರ್ ಮತ್ತು ಬೆನ್ ಕ್ಯಾಲಿಟ್ಜ್ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ತಂಡವನ್ನು 100 ರನ್​ಗಳ ಗಡಿ ದಾಟಿಸಿದರು. ಟೆಕ್ಟರ್ ಎಂಟು ಇನ್ನಿಂಗ್ಸ್‌ಗಳಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಬಾರಿಸಿದರೆ ಜಾರ್ಜ್ ಡಾಕ್ರೆಲ್ ಕೂಡ ಅಲ್ಪ ಕಾಣಿಕೆ ನೀಡುವ ಮೂಲಕ ತಂಡವನ್ನು 154 ರನ್‌ಗಳಿಗೆ ಕೊಂಡೊಯ್ದರು. ಟೀಂ ಇಂಡಿಯಾ ಪರ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯವನ್ನಾಡಿದ ಬೌಲರ್ ಪ್ರಿನ್ಸ್ ಯಾದವ್ ಮೂರು ವಿಕೆಟ್‌ಗಳನ್ನು ಪಡೆದರು.

ಸೊನ್ನೆ ಸುತ್ತಿದ ಆರಂಭಿಕರು

ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಆರಂಭ ಹೀನಾಯವಾಗಿತ್ತು. ಹಿಂದಿನ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಭಾರತೀಯ ಮೂಲದ ವೇಗಿ ಜೇ ಮುಂಧ್ರಾ, ಮೊದಲ ಎಸೆತದಲ್ಲೇ ಸಂಜು ಸ್ಯಾಮ್ಸನ್ ಮತ್ತು ಅದೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡಿದರು. ಇಬ್ಬರಿಗೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ತಮ್ಮ ಮುಂದಿನ ಓವರ್‌ನಲ್ಲಿ, ಮುಂಧ್ರಾ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡಿದರು. ಐದನೇ ಓವರ್‌ನಲ್ಲಿ ಇಶಾನ್ ಕಿಶನ್ ಕೂಡ ರನೌಟ್ ಆದರು. ಈ ಹೊತ್ತಿಗೆ, ಸ್ಕೋರ್ ಕೇವಲ 35 ರನ್‌ಗಳಾಗಿತ್ತು.

IND vs IRE: ಸೋಲಿನ ಆಘಾತದ ನಡುವೆ ಕೊನೆಯ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ರೆಡಿ

ಭಾರತಕ್ಕೆ 1 ರನ್ ಸೋಲು

ಹೀಗಾಗಿ ಈ ಪಂದ್ಯದಲ್ಲೂ ಟೀಂ ಇಂಡಿಯಾದ ಸೋಲು ಖಚಿತ ಎಂಬುದು ಆರಂಭದಲ್ಲೇ ಕಾಡಲಾರಂಭಿಸಿತು. ಆದರೆ ತಿಲಕ್ ವರ್ಮಾ ಮತ್ತು ಅಕ್ಷರ್ ಪಟೇಲ್ ಉತ್ತಮ ಜೊತೆಯಾಟ ನಿರ್ಮಿಸುತ್ತಿದ್ದಂತೆ ಗೆಲುವಿನ ಭರವಸೆ ಮೂಡಿತು. ಆದಾಗ್ಯೂ ಇವರಿಬ್ಬರ ಆಮೆಗತಿಯ ಜೊತೆಯಾಟ 12 ನೇ ಓವರ್‌ನಲ್ಲಿ ಕೊನೆಗೊಂಡಿತು. ನಂತರ ಬಂದ ಶಿವಂ ದುಬೆ ಬಂದು ಸ್ವಲ್ಪ ಆಕ್ರಮಣಕಾರಿಯಾಗಿ ಆಡಿದರಾದರೂ ನಿರ್ಣಾಯಕ ಹಂತದಲ್ಲಿ ಅಂದರೆ 17 ನೇ ಓವರ್‌ನಲ್ಲಿ ಔಟಾದರು. ಇನ್ನು ಅರ್ಧಶತಕದ ಇನ್ನಿಂಗ್ಸ್ ಆಡಿದ ತಿಲಕ್ ವರ್ಮಾ ಕೂಡ 18 ನೇ ಓವರ್‌ನಲ್ಲಿ ಔಟಾದರು. ಕೊನೆಯ ಓವರ್‌ನಲ್ಲಿ ಗೆಲುವಿಗೆ 20 ರನ್‌ಗಳು ಬೇಕಾಗಿದ್ದವು. ಯುವ ಆಲ್​ರೌಂಡರ್ ಹರ್ಷಿತ್ ರಾಣಾ ತಂಡದ ಗೆಲುವಿಗೆ ಪ್ರಯತ್ನ ಮಾಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾದರು. ಕೊನೆಯ ಎಸೆತದಲ್ಲಿ ಪ್ರಿನ್ಸ್ ಯಾದವ್ ಸಿಕ್ಸ್ ಬಾರಿಸಿದರೂ, ತಂಡವು ಒಂದು ರನ್‌ನಿಂದ ಸೋತಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:21 pm, Sun, 28 June 26

Follow Us