Ishan Kishan: ಭಾವುಕ ವಿಡಿಯೋ ಮೂಲಕ ಮುಂಬೈ ತಂಡಕ್ಕೆ ಧನ್ಯವಾದ ಹೇಳಿದ ಇಶಾನ್ ಕಿಶನ್

IPL 2025: ಏಳು ವರ್ಷಗಳ ಕಾಲ ಮುಂಬೈ ಇಂಡಿಯನ್ಸ್‌ನಲ್ಲಿ ಆಡಿದ್ದ ಇಶಾನ್ ಕಿಶನ್ ಇದೀಗ ಮುಂದಿನ ಆವೃತ್ತಿಯಿಂದ ಸನ್‌ರೈಸರ್ಸ್ ಹೈದರಾಬಾದ್‌ ಪರ ಆಡಲಿದ್ದಾರೆ. ಈ ಫ್ರಾಂಚೈಸಿ 11.25 ಕೋಟಿ ರೂಪಾಯಿಗೆ ಕಿಶನ್​ರನ್ನು ಖರೀದಿ ಮಾಡಿದೆ. ಹೀಗಾಗಿ ಮುಂಬೈಗೆ ಭಾವನಾತ್ಮಕ ವಿದಾಯ ಹೇಳಿರುವ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಧನ್ಯವಾದ ತಿಳಿಸಿದ್ದಾರೆ. ಹೊಸ ತಂಡದೊಂದಿಗೆ ಉತ್ತಮ ಪ್ರದರ್ಶನ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.

Ishan Kishan: ಭಾವುಕ ವಿಡಿಯೋ ಮೂಲಕ ಮುಂಬೈ ತಂಡಕ್ಕೆ ಧನ್ಯವಾದ ಹೇಳಿದ ಇಶಾನ್ ಕಿಶನ್
ಇಶಾನ್ ಕಿಶನ್

Updated on: Dec 01, 2024 | 7:08 PM

ಕಳೆದ 7 ವರ್ಷಗಳಿಂದ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್, ಮುಂದಿನ ಆವೃತ್ತಿಯಿಂದ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಪರ ಆಡಲಿದ್ದಾರೆ. ಈ ಸ್ಫೋಟಕ ಬ್ಯಾಟರ್​ನನ್ನು ಮೆಗಾ ಹರಾಜಿನಲ್ಲಿ ಎಸ್​​ಆರ್​ಹೆಚ್ ಫ್ರಾಂಚೈಸಿ 11.25 ಕೋಟಿ ರೂಪಾಯಿಗೆ ಖರೀದಿಸಿದೆ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಹೊಸ ತಂಡದ ಪರ ಕಣಕ್ಕಿಳಿಯುವುದಕ್ಕೂ ಮುನ್ನ ತನ್ನ ಹಳೆಯ ತಂಡಕ್ಕೆ ಭಾವಾನಾತ್ಮಕ ವಿದಾಯ ಹೇಳಿರುವ ಇಶಾನ್ ಕಿಶನ್, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಗೆ ಧನ್ಯವಾದ ತಿಳಿಸಿದ್ದಾರೆ.

ವಿದಾಯ ಹೇಳುತ್ತಿದ್ದೇನೆ

ಇಶಾನ್ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು ಮುಂಬೈ ಇಂಡಿಯನ್ಸ್‌ ತಂಡದೊಂದಿಗೆ ಕಳೆದ ಸುಮಧುರ ಕ್ಷಣಗಳನ್ನು ಕಾಣಬಹುದಾಗಿದೆ. ಈ ವಿಡಿಯೋ ಜೊತೆಗೆ ತಂಡಕ್ಕೆ ಧನ್ಯವಾದ ತಿಳಿಸಿರುವ ಕಿಶನ್, ತಂಡದ ಕೋಚ್ ಮತ್ತು ಸಹ ಆಟಗಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಬಗ್ಗೆ ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿರುವ ಕಿಶನ್, ನಿಮ್ಮೆಲ್ಲರೊಂದಿಗಿನ ಅನೇಕ ನೆನಪುಗಳು ಯಾವಾಗಲೂ ನನ್ನ ಹೃದಯದಲ್ಲಿರುತ್ತವೆ. ನಿಮ್ಮೊಂದಿಗೆ ನಾನು ಒಬ್ಬ ವ್ಯಕ್ತಿ ಮತ್ತು ಆಟಗಾರನಾಗಿ ಬೆಳೆದಿದ್ದೇನೆ. ನನ್ನ ಜೀವನದುದ್ದಕ್ಕೂ ನನ್ನೊಂದಿಗೆ ಉಳಿಯುವ ನೆನಪುಗಳೊಂದಿಗೆ ನಾನು ವಿದಾಯ ಹೇಳುತ್ತಿದ್ದೇನೆ. ತಂಡದ ನಿರ್ವಹಣೆ, ತರಬೇತುದಾರರು ಮತ್ತು ಆಟಗಾರರಿಗೆ ಧನ್ಯವಾದಗಳು. ಇದಲ್ಲದೇ ನನ್ನನ್ನು ಸದಾ ಬೆಂಬಲಿಸುತ್ತಿರುವ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಹೈದರಾಬಾದ್‌ಗೆ ಕೃತಜ್ಞತೆ ಸಲ್ಲಿಸಿದ ಕಿಶನ್

ಇದಕ್ಕೂ ಮೊದಲು, ಮೆಗಾ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಖರೀದಿಸಿದ ನಂತರ, ಇಶಾನ್ ಫ್ರಾಂಚೈಸಿಗೆ ಧನ್ಯವಾದ ಹೇಳಿದ್ದರು. ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಲು ಮತ್ತು ಈ ಅದ್ಭುತ ಫ್ರಾಂಚೈಸಿಯ ಭಾಗವಾಗಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಬರೆದು ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದರು.

ಕಿಶನ್ ವೃತ್ತಿಜೀವನ

ಈ ಎಡಗೈ ಬ್ಯಾಟ್ಸ್‌ಮನ್ 2016 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಆರಂಭದಲ್ಲಿ ಗುಜರಾತ್ ಲಯನ್ಸ್ ಪರ ಕಣಕ್ಕಿಳಿದಿದ್ದ ಕಿಶನ್ ಆ ನಂತರ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದರು. ಇದುವರೆಗೆ ಐಪಿಎಲ್ 105 ಪಂದ್ಯಗಳನ್ನಾಡಿರುವ ಕಿಶನ್ 2644 ರನ್ ಗಳಿಸಿದ್ದಾರೆ. 135.87 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿರುವ ಕಿಶನ್ ಈ ಟೂರ್ನಿಯಲ್ಲಿ 16 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಇನ್ನು ಮುಂಬೈ ತಂಡದ ಪರ 89 ಪಂದ್ಯಗಳನ್ನು ಆಡಿರುವ ಕಿಶನ್ ಇದರಲ್ಲಿ 15 ಅರ್ಧಶತಕಗಳ ಸಹಾಯದಿಂದ 2325 ರನ್ ಗಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ