‘ವಿಸಿಲ್ ಹೊಡೆದು ಮನೆಗೆ ಹೋಗಿ’; ವೈಲ್ಡ್ ಸೆಲೆಬ್ರೇಷನ್ ಮಾಡಿದ ಇಶಾನ್ ಕಿಶನ್

ಚೆನ್ನೈನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಪ್ಲೇಆಫ್‌ಗೆ ಲಗ್ಗೆ ಇಟ್ಟಿದೆ. ಇಶಾನ್ ಕಿಶನ್ 70 ರನ್ ಗಳಿಸಿ ಗೆಲುವಿಗೆ ಕಾರಣರಾದರು. ಈ ಸೋಲಿನಿಂದ ಸಿಎಸ್‌ಕೆ ಪ್ಲೇಆಫ್ ಕನಸು ಬಹುತೇಕ ಅಂತ್ಯವಾಗಿದೆ. ಇಶಾನ್ ಕಿಶನ್ 'ವಿಸಿಲ್ ಪೋಡು' ಘೋಷವಾಕ್ಯ ಅನುಕರಿಸಿ ಮಾಡಿದ ವೈಲ್ಡ್ ಸೆಲೆಬ್ರೇಷನ್ ಸದ್ಯ ವೈರಲ್ ಆಗಿದ್ದು, ಸಿಎಸ್‌ಕೆ ಅಭಿಮಾನಿಗಳಲ್ಲಿ ಆಕ್ರೋಶ ಮೂಡಿಸಿದೆ.

‘ವಿಸಿಲ್ ಹೊಡೆದು ಮನೆಗೆ ಹೋಗಿ’; ವೈಲ್ಡ್ ಸೆಲೆಬ್ರೇಷನ್ ಮಾಡಿದ ಇಶಾನ್ ಕಿಶನ್
ಇಶನ್

Updated on: May 19, 2026 | 8:47 AM

ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ (ಮೇ 18) ನಡೆದ ಪ್ರಮುಖ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಸೋಲಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಆಫ್ ಹಾದಿ ಬಹುತೇಕ ಮುಚ್ಚಲ್ಪಟ್ಟಿದ್ದು, ಟೂರ್ನಿಯಿಂದ ಹೊರಬೀಳುವುದು ಖಚಿತವಾಗಿದೆ. ಮತ್ತೊಂದೆಡೆ ಎಸ್‌ಆರ್‌ಎಚ್ ತಂಡವು ಅಧಿಕೃತವಾಗಿ ಪ್ಲೇಆಫ್‌ಗೆ ಲಗ್ಗೆ ಇಟ್ಟಿದೆ.

ಚೆಪಾಕ್‌ನ ನಿಧಾನಗತಿಯ ಪಿಚ್‌ನಲ್ಲಿ ಸಿಎಸ್‌ಕೆ ನೀಡಿದ್ದ 181 ರನ್‌ಗಳ ಸವಾಲನ್ನು ಬೆನ್ನಟ್ಟಿದ ಹೈದರಾಬಾದ್ ತಂಡಕ್ಕೆ ಇಶಾನ್ ಕಿಶನ್ ಆಸರೆಯಾದರು. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಕಿಶನ್ 47 ಎಸೆತಗಳಲ್ಲಿ 70 ರನ್ ಚಚ್ಚಿದರು. ಹೆನ್ರಿಚ್ ಕ್ಲಾಸೆನ್ ಅವರೊಂದಿಗೆ ಮೂರನೇ ವಿಕೆಟ್‌ಗೆ 75 ರನ್‌ಗಳ ಮಹತ್ವದ ಜೊತೆಯಾಟವಾಡಿದ ಇಶಾನ್, ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು. ಹೈದರಾಬಾದ್ ಇನ್ನೊಂದು ಓವರ್ ಬಾಕಿ ಇರುವಂತೆಯೇ ಗುರಿ ತಲುಪಿತು.

ಪಂದ್ಯ ಮುಗಿದ ಬಳಿಕ ಇಶಾನ್ ಕಿಶನ್ ಮಾಡಿದ ಸೆಲೆಬ್ರೇಷನ್ ಸದ್ಯ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕೃತ ಘೋಷವಾಕ್ಯ ‘ವಿಸಿಲ್ ಪೋಡು’ನ ಅನುಕರಿಸಿದರು. ಇಶಾನ್ ಕಿಶನ್ ಮೈದಾನದಲ್ಲೇ ನಿಂತು ಚೆಪಾಕ್ ಪ್ರೇಕ್ಷಕರನ್ನು ನೋಡಿ ಬಾಯಿಗೆ ಕೈಯಿಟ್ಟು ಸೀಟಿ ಊದುವಂತೆ ಸನ್ನೆ ಮಾಡಿದರು. ಅಷ್ಟೇ ಅಲ್ಲದೆ, ಮನೆಯನ್ನು ತೋರಿಸಿದರು. ನೀವು ಮನೆಗೆ ಹೋದಿರಿ ಎಂಬಂತೆ ಇತ್ತು. ಸಿಎಸ್‌ಕೆ ತಂಡವನ್ನು ಅವರದೇ ತವರು ಮೈದಾನದಲ್ಲಿ ಮಣಿಸಿದ ಜೋಶ್‌ನಲ್ಲಿ ಇಶಾನ್ ಕಿಶನ್ ಈ ರೀತಿ ಸಂಭ್ರಮಿಸಿದ್ದು, ಚೆನ್ನೈ ಅಭಿಮಾನಿಗಳಿಗೆ ಕೊಂಚ ಸಿಟ್ಟು ತರಿಸಿದೆ.

ಇದನ್ನೂ ಓದಿ: ಸಿಎಸ್​ಕೆ ಪ್ಲೇಆಫ್‌ ಕನಸಿಗೆ ಕೊಳ್ಳಿ ಇಟ್ಟ ಸನ್‌ರೈಸರ್ಸ್ ಹೈದರಾಬಾದ್

ಈ ಗೆಲುವಿನೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ 16 ಅಂಕಗಳೊಂದಿಗೆ ಪ್ಲೇಆಫ್ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇದರ ಜೊತೆಗೆ ಗುಜರಾತ್ ಟೈಟನ್ಸ್ ಹಾಗೂ ಈಗಾಗಲೇ 18 ಅಂಕ ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಅಧಿಕೃತವಾಗಿ ನಾಕೌಟ್ ಹಂತ ತಲುಪಿವೆ. 13 ಪಂದ್ಯಗಳಿಂದ ಕೇವಲ 12 ಅಂಕ ಗಳಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಆಫ್ ಕನಸು ಸದ್ಯ ತಾಂತ್ರಿಕವಾಗಿ ಮಾತ್ರ ಜೀವಂತವಾಗಿದ್ದು, ಈ ಸೀಸನ್‌ನಿಂದ ಹೊರಬೀಳುವುದು ಬಹುತೇಕ ಖಚಿತವಾಗಿದೆ.

ಇನ್ನಷ್ಟು  ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us