
T20 World Cup 2026: ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 255 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ 159 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 96 ರನ್ಗಳ ಅಮೋಘ ಗೆಲುವು ದಾಖಲಿಸಿದೆ.
ಈ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ದಾಂಡಿಗ ಇಶಾನ್ ಕಿಶನ್, ತಮ್ಮ ಜೀವನದ ಅತ್ಯಂತ ಕಠಿಣ ಕ್ಷಣವೊಂದನ್ನು ಹಂಚಿಕೊಂಡಿದ್ದಾರೆ. ಅದು ಸಾವಿನ ಸುದ್ದಿಯೊಂದಿಗೆ..!
ಫೈನಲ್ ಮ್ಯಾಚ್ಗೂ ಮುನ್ನ ನನ್ನ ಸಹೋದರಿ ತೀರಿಕೊಂಡಿದ್ದಾರೆ. ಅವಳಿಗೆ ನಾನು ವಿಶ್ವಕಪ್ ಗೆಲ್ಲಬೇಕೆಂಬ ತುಂಬಾ ಆಸೆಯಿತ್ತು. ಆದರೆ ಇದೀಗ ಅವಳಿಲ್ಲ. ಈ ವಿಶ್ವಕಪ್ ನಾನು ಅವಳಿಗಾಗಿ ಅರ್ಪಿಸುತ್ತೇನೆ ಎಂದು ಇಶಾನ್ ಕಿಶನ್ ಸಂತಸದ ಕ್ಷಣಗಳ ನಡುವೆ ನೋವನ್ನು ಹಂಚಿಕೊಂಡಿದ್ದಾರೆ.
ಮಾರ್ಚ್ 7 ರಂದು ಪಶ್ಚಿಮ ಬಂಗಾಳದ ರಾಷ್ಟ್ರೀಯ ಹೆದ್ದಾರಿ 27 ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಶಾನ್ ಕಿಶನ್ ಅವರ ಕಸಿನ್ ಸಿಸ್ಟರ್ ವೈಷ್ಣವಿ ಸಿಂಗ್ ಮತ್ತು ಅವರ ಪತಿ ಮೃತಪಟ್ಟಿದ್ದರು,
ಅಪಘಾತದ ಸಮಯದಲ್ಲಿ ಕಾರಿನಲ್ಲಿದ್ದ ಈ ದಂಪತಿಯ ಆರು ತಿಂಗಳು ಮತ್ತು ಮೂರು ವರ್ಷದ ಇಬ್ಬರು ಪುಟ್ಟ ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುಟುಂಬದಲ್ಲಿ ಇಂತಹ ದೊಡ್ಡ ದುರಂತ ಸಂಭವಿಸಿದರೂ, ಇಶಾನ್ ಕಿಶನ್ ತಂಡದ ಹಿತದೃಷ್ಟಿಯಿಂದ ಫೈನಲ್ ಪಂದ್ಯವನ್ನು ಆಡಲು ನಿರ್ಧರಿಸಿದರು. ತಮ್ಮ ಸಹ ಆಟಗಾರ ಹಾರ್ದಿಕ್ ಪಾಂಡ್ಯ ಅವರು ನೀಡಿದ ಧೈರ್ಯದಿಂದಾಗಿ ಅವರು ಮೈದಾನಕ್ಕಿಳಿದರು.
ವೈಯಕ್ತಿಕ ದುಃಖದ ನಡುವೆಯೂ ಇಶಾನ್ ಕಿಶನ್ ಸ್ಫೋಟಕವಾಗಿ ಬ್ಯಾಟ್ ಬೀಸಿ 25 ಎಸೆತಗಳಲ್ಲಿ 54 ರನ್ (4 ಬೌಂಡರಿ, 4 ಸಿಕ್ಸರ್) ಗಳಿಸಿದರು. ಅಲ್ಲದೆ ಫೀಲ್ಡಿಂಗ್‌ನಲ್ಲಿ ಮೂರು ಅದ್ಭುತ ಕ್ಯಾಚ್‌ಗಳನ್ನು ಹಿಡಿದರು. ಈ ಮೂಲಕ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ಚಾಂಪಿಯನ್ ಪಟ್ಟದ ಬೆನ್ನಲ್ಲೇ ತನ್ನ ನೋವನ್ನು ಹಂಚಿಕೊಂಡ ಇಶಾನ್ ಕಿಶನ್, “ಈ ಗೆಲುವನ್ನು ನನ್ನ ಸಹೋದರಿಗೆ ಅರ್ಪಿಸುತ್ತೇನೆ. ಅವಳು ನನ್ನ ಈ ಐತಿಹಾಸಿಕ ಕ್ಷಣಗಳನ್ನು ನೋಡಬೇಕೆಂದು ಬಯಸಿದ್ದಳು. ಹೀಗಾಗಿ ಈ ಟ್ರೋಫಿಯನ್ನು ನಾನು ಸಹೋದರಿಗೆ ಅರ್ಪಿಸುವುದಾಗಿ ಇಶಾನ್ ಕಿಶನ್ ಭಾವುಕರಾದರು.
ಇದನ್ನೂ ಓದಿ: Sanju Samson: ನನ್ನ ಈ ಪ್ರದರ್ಶನಕ್ಕೆ ‘ಅವರೇ’ ಕಾರಣ..!
ಇದೀಗ ತನ್ನ ವೃತ್ತಿಜೀವನದ ಅತಿದೊಡ್ಡ ಪ್ರೋತ್ಸಾಹಕರಲ್ಲಿ ಒಬ್ಬರಾಗಿದ್ದ ಸಹೋದರಿಯ ಸಾವಿನ ದುಃಖದ ನಡುವೆಯೂ ಪ್ರಚಂಡ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾ ಗೆಲುವಿನಲ್ಲಿ ತನ್ನದೇಯಾದ ಕೊಡುಗೆ ನೀಡಿದ ಇಶಾನ್ ಕಿಶನ್ ಅವರ ಬಗ್ಗೆ ಅಭಿಮಾನಿಗಳು ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.