Jake Fraser-McGurk: ಆಸ್ಟ್ರೇಲಿಯಾ ಟಿ20 ತಂಡಕ್ಕೆ ಜೇಕ್ ಫ್ರೇಸರ್ ಎಂಟ್ರಿ..!
T20 World Cup 2024: ಈ ಬಾರಿ ಟಿ20 ವಿಶ್ವಕಪ್ ಜೂನ್ 2 ರಿಂದ ಆರಂಭವಾಗಲಿದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಜಂಟಿಯಾಗಿ ಆಯೋಜಿಸುತ್ತಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಕೆನಡಾ ಹಾಗೂ ಯುಎಸ್ಎ ತಂಡಗಳು ಕಣಕ್ಕಿಳಿಯಲಿದೆ. ಇನ್ನು ಭಾರತ ತಂಡವು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

ಈ ಬಾರಿಯ ಐಪಿಎಲ್ನಲ್ಲಿ (IPL 2024) ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದ ಯುವ ದಾಂಡಿಗ ಜೇಕ್ ಫ್ರೇಸರ್ ಮೆಕ್ಗುರ್ಕ್ ಅವರನ್ನು ಆಸ್ಟ್ರೇಲಿಯಾ ಟಿ20 ವಿಶ್ವಕಪ್ ತಂಡಕ್ಕೆ ಮೀಸಲು ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ಪ್ರಕಟಿಸಲಾದ ತಂಡದಲ್ಲಿ ಜೇಕ್ಗೆ ಸ್ಥಾನ ನೀಡಿರಲಿಲ್ಲ. ಇದೀಗ ಹೆಚ್ಚುವರಿ ಆಟಗಾರನಾಗಿ ಜೇಕ್ ಫ್ರೇಸರ್ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ಇನ್ನು ಜೇಕ್ ಜೊತೆಗೆ ಮ್ಯಾಟ್ ಶಾರ್ಟ್ ಕೂಡ ಮೀಸಲು ಆಟಗಾರನಾಗಿ ಆಸೀಸ್ ಬಳಗದೊಂದಿಗೆ ಪ್ರಯಾಣಿಸಲಿದ್ದಾರೆ.
ಒಂದು ವೇಳೆ ಟಿ20 ವಿಶ್ವಕಪ್ನಿಂದ ಆಸ್ಟ್ರೇಲಿಯಾ ಬ್ಯಾಟರ್ ಹೊರಗುಳಿದರೆ ಜೇಕ್ ಫ್ರೇಸರ್ಗೆ ಚಾನ್ಸ್ ಸಿಗುವುದು ಖಚಿತ. ಅದರಲ್ಲೂ ಕೊನೆಯ ಬಾರಿಗೆ ಟಿ20 ವಿಶ್ವಕಪ್ ಆಡುತ್ತಿರುವ ಡೇವಿಡ್ ವಾರ್ನರ್ ಅವರ ಉತ್ತರಾಧಿಕಾರಿಯಾಗಿ ಮುಂಬರುವ ದಿನಗಳಲ್ಲಿ ಜೇಕ್ ಕಾಣಿಸಿಕೊಳ್ಳಲಿದ್ದಾರೆ.
ಏಕೆಂದರೆ 22 ವರ್ಷದ ಜೇಕ್ ಫ್ರೇಸರ್ ಮೆಕ್ಗುರ್ಕ್ ಈಗಾಗಲೇ ವೈಟ್ ಬಾಲ್ ಕ್ರಿಕೆಟ್ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಅದರಲ್ಲೂ ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಾಣಿಸಿಕೊಂಡಿದ್ದ ಯುವ ದಾಂಡಿಗ ಸಿಡಿಲಬ್ಬರದ ಬ್ಯಾಟಿಂಗ್ನೊಂದಿಗೆ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.
ಐಪಿಎಲ್ನಲ್ಲಿ ಸಿಡಿಲಬ್ಬರ:
ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆರಂಭಿಕನಾಗಿ 9 ಇನಿಂಗ್ಸ್ ಆಡಿದ್ದ ಜೇಕ್ ಫ್ರೇಸರ್ 4 ಸ್ಪೋಟಕ ಅರ್ಧಶತಕಗಳೊಂದಿಗೆ ಒಟ್ಟು 330 ರನ್ ಕಲೆಹಾಕಿದ್ದಾರೆ. ಅದು ಕೂಡ 234.04 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸುವ ಮೂಲಕ ಎಂಬುದು ವಿಶೇಷ.
29 ಎಸೆತಗಳಲ್ಲಿ ಸ್ಪೋಟಕ ಸೆಂಚುರಿ:
ಆಸ್ಟ್ರೇಲಿಯಾದಲ್ಲಿ ನಡೆದ ಮಾರ್ಷ್ ಕಪ್ನಲ್ಲಿ ವೆಸ್ಟ್ ಎಂಡ್ ರೆಡ್‌ಬ್ಯಾಕ್ಸ್ ಪರ ಕಣಕ್ಕಿಳಿದಿದ್ದ ಜೇಕ್ ಫ್ರೇಸರ್ ಟಾಸ್ಮೇನಿಯಾ ವಿರುದ್ಧ ಕೇವಲ 29 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವ ದಾಖಲೆ ಬರೆದಿದ್ದರು. ಈ ಸ್ಪೋಟಕ ಸೆಂಚುರಿಯೊಂದಿಗೆ ಐಪಿಎಲ್ನಲ್ಲಿ ಅವಕಾಶ ಪಡೆದ ಯುವ ಆಟಗಾರ ಇದೀಗ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆಸ್ಟ್ರೇಲಿಯಾ ಟಿ20 ವಿಶ್ವಕಪ್ ತಂಡ:
ಮಿಚೆಲ್ ಮಾರ್ಷ್ (ನಾಯಕ), ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್ , ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್ , ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್ , ಮ್ಯಾಥ್ಯೂ ವೇಡ್, ಆ್ಯಡಂ ಝಂಪಾ.
ಮೀಸಲು ಆಟಗಾರರು: ಜೇಕ್ ಫ್ರೇಸರ್ ಮೆಕ್ಗುರ್ಕ್, ಮ್ಯಾಟ್ ಶಾರ್ಟ್.
ಇದನ್ನೂ ಓದಿ: VIDEO: ಬಾರ್ನಲ್ಲಿ ಕಾಣಿಸಿಕೊಂಡ ಮಹೇಂದ್ರ ಸಿಂಗ್ ಧೋನಿ: ವಿಡಿಯೋ ವೈರಲ್
ಟಿ20 ವಿಶ್ವಕಪ್ ಯಾವಾಗ ಶುರು?
ಈ ಬಾರಿ ಟಿ20 ವಿಶ್ವಕಪ್ ಜೂನ್ 2 ರಿಂದ ಆರಂಭವಾಗಲಿದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಜಂಟಿಯಾಗಿ ಆಯೋಜಿಸುತ್ತಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಕೆನಡಾ ಹಾಗೂ ಯುಎಸ್ಎ ತಂಡಗಳು ಕಣಕ್ಕಿಳಿಯಲಿದೆ. ಇನ್ನು ಭಾರತ ತಂಡವು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಮೊದಲ ಪಂದ್ಯವಾಡಿದರೆ, ಆಸ್ಟ್ರೇಲಿಯಾ ತಂಡ ಜೂನ್ 6 ರಂದು ಒಮಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ.