Jasprit Bumrah: ನೋ ಬಾಲ್ ಎಸೆದು 2 ವಿಕೆಟ್ ಉರುಳಿಸಿದ ಜಸ್​ಪ್ರೀತ್ ಬುಮ್ರಾ

| Updated By: ಝಾಹಿರ್ ಯೂಸುಫ್

Updated on: Jul 03, 2022 | 12:49 PM

Jasprit Bumrah: ಟೀಮ್ ಇಂಡಿಯಾ ಪರ ಜಸ್​ಪ್ರೀತ್ ಬುಮ್ರಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ ತಲಾ ಒಂದೊಂದು ವಿಕೆಟ್ ಕಬಳಿಸಿದ್ದಾರೆ.

Jasprit Bumrah: ನೋ ಬಾಲ್ ಎಸೆದು 2 ವಿಕೆಟ್ ಉರುಳಿಸಿದ ಜಸ್​ಪ್ರೀತ್ ಬುಮ್ರಾ
Jasprit Bumrah
Follow us on

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ (India vs England 5th Test) ನಡುವಣ 5ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಟೀಮ್ ಇಂಡಿಯಾ (Team India) ಮೇಲುಗೈ ಸಾಧಿಸಿದೆ. ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಪರ ರಿಷಭ್ ಪಂತ್ (146) ಶತಕ ಸಿಡಿಸಿದರೆ, 2ನೇ ದಿನದಾಟದಲ್ಲಿ ರವೀಂದ್ರ ಜಡೇಜಾ (104) ಶತಕ ಬಾರಿಸಿ ಅಬ್ಬರಿಸಿದರು. ಇನ್ನು ಅಂತಿಮ ಅಂತದಲ್ಲಿ ಓಂದೇ ಓವರ್​ನಲ್ಲಿ 35 ರನ್​ ಕಲೆಹಾಕುವ ಮೂಲಕ ಜಸ್​ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಮೊತ್ತವನ್ನು 416 ಕ್ಕೆ ತಂದು ನಿಲ್ಲಿಸಿದ್ದರು. ಮೊದಲ ಇನಿಂಗ್ಸ್​ನಲ್ಲಿ 416 ರನ್​ಗಳ ಟಾರ್ಗೆಟ್ ನೀಡಿ ಬೌಲಿಂಗ್ ಆರಂಭಿಸಿದ ಟೀಮ್ ಇಂಡಿಯಾ ಪರ ನಾಯಕ ಬುಮ್ರಾ (Jasprit Bumrah) ಆರಂಭದಲ್ಲೇ ಕರಾರುವಾಕ್ ದಾಳಿ ಸಂಘಟಿಸಿದರು. ಪರಿಣಾಮ ತಂಡದ 100 ರನ್ ಆಗುವುದರೊಳಗೆ ಇಂಗ್ಲೆಂಡ್ ತಂಡವು 5 ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡಿದೆ.

ಇನ್ನು ಈ ಐದು ವಿಕೆಟ್​ಗಳಲ್ಲಿ ಮೂರು ವಿಕೆಟ್​ಗಳನ್ನು ಬುಮ್ರಾ ಉರುಳಿಸಿದ್ದಾರೆ. ಅದರಲ್ಲಿ 2 ವಿಕೆಟ್ ಲಭಿಸಿರುವುದು ನೋ ಬಾಲ್ ಮೂಲಕ ಎಂಬುದು ವಿಶೇಷ. ಅಂದರೆ ಬುಮ್ರಾ ಈ ಪಂದ್ಯದಲ್ಲಿ 2 ಓವರ್​ಗಳಲ್ಲಿ ನೋ ಬಾಲ್ ಎಸೆದಿದ್ದರು. ಈ ಹೆಚ್ಚುವರಿ ಎಸೆತಗಳಲ್ಲೇ ವಿಕೆಟ್ ಕೂಡ ಲಭಿಸಿದೆ. ಮೂರನೇ ಓವರ್‌ನ ಆರನೇ ಎಸೆತದಲ್ಲಿ ಅಲೆಕ್ಸ್ ಲೀಸ್ 2 ರನ್ ಗಳಿಸಿದ್ದರು. ಆದರೆ ಅದು ನೋಬಾಲ್ ಆಗಿದ್ದ ಕಾರಣ ಬುಮ್ರಾ ಹೆಚ್ಚುವರಿ ಎಸೆತ ಎಸೆಯಬೇಕಾಯಿತು. ಈ ಹೆಚ್ಚುವರಿ ಎಸೆತದಲ್ಲಿ ಲೀಸ್ (6) ಅವರನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡಿದರು.

ಇದಾದ ಬಳಿಕ ಬುಮ್ರಾ ಅವರ 11ನೇ ಓವರ್‌ನ ಕೊನೆಯ ಎಸೆತ ನೋಬಾಲ್ ಆಗಿತ್ತು. ಈ ವೇಳೆ ಓಲಿ ಪೋಪ್​ ಕ್ರೀಸ್​ನಲ್ಲಿದ್ದರು. ನೋಬಾಲ್​ನಿಂದ ಸಿಕ್ಕ ಹೆಚ್ಚುವರಿ ಎಸೆತವನ್ನು ಡ್ರೈವ್ ಮಾಡಲು ಹೋದ ಪೋಪ್​ ಸ್ಲಿಪ್‌ನಲ್ಲಿದ್ದ ಶ್ರೇಯಸ್‌ ಅಯ್ಯರ್‌ಗೆ ಕ್ಯಾಚ್‌ ನೀಡಿದರು. ಈ ಮೂಲಕ ಎರಡು ಓವರ್​ಗಳಲ್ಲಿ 7 ಎಸೆತಗಳನ್ನು ಎಸೆಯುವ ಮೂಲಕ ಬುಮ್ರಾ 2 ವಿಕೆಟ್ ಉರುಳಿಸಿದರು.

ಸದ್ಯ 2ನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದ್ದು, ಇಂಗ್ಲೆಂಡ್ ತಂಡವು ಕೇವಲ 84 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡಿದೆ. ಟೀಮ್ ಇಂಡಿಯಾ ಪರ ಜಸ್​ಪ್ರೀತ್ ಬುಮ್ರಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ ತಲಾ ಒಂದೊಂದು ವಿಕೆಟ್ ಕಬಳಿಸಿದ್ದಾರೆ.