IND vs ENG: ಸಿರಾಜ್, ಶಮಿ, ಬುಮ್ರಾ ಬೆಂಕಿ ಬೌಲಿಂಗ್: ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ದಾಖಲೆ
IND vs ENG: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ಗಳ ಪಟ್ಟಿಯಲ್ಲಿ ಮೊಹಮ್ಮದ್ ಶಮಿ 31 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನ ಅಲಂಕರಿಸಿದ್ದಾರೆ.
ಕ್ರಿಕೆಟ್ ಅಂಗಳದಲ್ಲಿ ಬ್ಯಾಟ್ಸ್ಮನ್ಗಳ ಅಬ್ಬರದ ನಡುವೆ ಟೀಮ್ ಇಂಡಿಯಾ (Team India) ಬೌಲರ್‌ಗಳು ಪರಾಕ್ರಮ ಮೆರೆಯುತ್ತಿದ್ದಾರೆ. ಅದರಲ್ಲೂ ಟೆಸ್ಟ್ ಕ್ರಿಕೆಟ್ನಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸುವ ಮೂಲಕ ಭಾರತೀಯ ವೇಗದ ಬೌಲರ್‌ಗಳು (Indian Pacers) ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಅದು ಕೂಡ ತಮ್ಮದೇ 4 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದು ಎಂಬುದು ವಿಶೇಷ. ಭಾರತ ತಂಡದ ವೇಗದ ಬೌಲರ್‌ಗಳು ಟೆಸ್ಟ್ ಸರಣಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದಿದ್ದು 2018 ರಲ್ಲಿ. ಅಂದು ಇಂಗ್ಲೆಂಡ್ ವಿರುದ್ದ ಸರಣಿ ಆಡಿದ್ದ ಟೀಮ್ ಇಂಡಿಯಾದ ವೇಗಿಗಳು ಬರೋಬ್ಬರಿ 61 ವಿಕೆಟ್ ಕಬಳಿಸಿ ಮಿಂಚಿದ್ದರು. ಇದೀಗ ಈ ದಾಖಲೆಯನ್ನು ಮುರಿದಿದ್ದಾರೆ. ಅದು ಕೂಡ ಇಂಗ್ಲೆಂಡ್ ವಿರುದ್ದ, ಆಂಗ್ಲರ ನೆಲದಲ್ಲಿ ಎಂಬುದು ಮತ್ತೊಂದು ವಿಶೇಷ.
ಇಂಗ್ಲೆಂಡ್ ವಿರುದ್ಧದ ಎಡ್ಜ್‌ಬಾಸ್ಟನ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತೀಯ ವೇಗದ ಬೌಲರ್‌ಗಳು ಪರಾಕ್ರಮ ಮರೆದಿದ್ದಾರೆ. ಕೇವಲ 84 ರನ್ಗಳಿಗೆ ಇಂಗ್ಲೆಂಡ್ ತಂಡದ ಐದು ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ 2018 ರಲ್ಲಿನ ಸರಣಿಯಲ್ಲಿ ಭಾರತದ ವೇಗದ ಬೌಲರ್‌ಗಳು ಒಟ್ಟಾಗಿ 61 ವಿಕೆಟ್‌ಗಳನ್ನು ಪಡೆದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಅಂದರೆ ಇಂಗ್ಲೆಂಡ್ ವಿರುದ್ದ ನಡೆದ ಈ ಬಾರಿಯ 5 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾದ ವೇಗ ಬೌಲರ್‌ಗಳು ಇದುವರೆಗೆ 67 ಉರುಳಿಸಿದ್ದಾರೆ. ಈ ಮೂಲಕ ಹೊಸ ಇತಿಹಾಸ ನಿರ್ಮಿಸಿ ಮಿಂಚಿದ್ದಾರೆ.
ಈ ದಾಖಲೆಯಲ್ಲಿ ಟೀಮ್ ಇಂಡಿಯಾ ಪರ ಮಿಂಚಿದ್ದು ಜಸ್ಪ್ರೀತ್ ಬುಮ್ರಾ. ಏಕೆಂದರೆ ಬುಮ್ರಾ 5 ಟೆಸ್ಟ್ ಪಂದ್ಯಗಳ 8 ಇನ್ನಿಂಗ್ಸ್‌ಗಳಲ್ಲಿ ಒಟ್ಟು 21 ವಿಕೆಟ್‌ಗಳನ್ನು ಪಡೆದಿದ್ದಾರೆ. ಮತ್ತೊಂದೆಡೆ, ಮೊಹಮ್ಮದ್ ಸಿರಾಜ್ ಇದುವರೆಗೆ 15 ವಿಕೆಟ್‌ಗಳನ್ನು ಪಡೆದು ಎರಡನೇ ಯಶಸ್ವಿ ಭಾರತೀಯ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಇನ್ನು ಮೊಹಮ್ಮದ್ ಶಮಿ 12 ವಿಕೆಟ್ ಕಬಳಿಸಿದ್ದಾರೆ. ಇವರಲ್ಲದೆ ಶಾರ್ದೂಲ್ ಠಾಕೂರ್ 7 ವಿಕೆಟ್, ಉಮೇಶ್ ಯಾದವ್ 6 ವಿಕೆಟ್ ಹಾಗೂ ಇಶಾಂತ್ ಶರ್ಮಾ 5 ವಿಕೆಟ್ ಪಡೆದು ಈ ದಾಖಲೆ ನಿರ್ಮಿಸಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲೂ ಬೂಮ್ ಬೂಮ್ ಬುಮ್ರಾ: ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 43 ವಿಕೆಟ್ ಕಬಳಿಸಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿ ಇಂಗ್ಲೆಂಡ್ನ ಜೇಮ್ಸ್ ಅ್ಯಂಡರ್ಸ್ ಇದ್ದು, ಇದುವರೆಗೆ 39 ವಿಕೆಟ್ ಪಡೆದಿದ್ದಾರೆ. ಇನ್ನು ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ಗಳ ಪಟ್ಟಿಯಲ್ಲಿ ಮೊಹಮ್ಮದ್ ಶಮಿ 31 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನ ಅಲಂಕರಿಸಿದ್ದಾರೆ. ಇವರ ಜೊತೆಗೆ 21 ವಿಕೆಟ್ ಕಬಳಿಸಿರುವ ಮೊಹಮ್ಮದ್ ಸಿರಾಜ್ ಮೂರನೇ ಸ್ಥಾನದಲ್ಲಿದ್ದಾರೆ.