AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಸಕ್ತ ವಿಶ್ವ ಕ್ರಿಕೆಟ್​ನ ನಾಲ್ವರು ಉತ್ಕೃಷ್ಟ ಬೌಲರ್​ಗಳಲ್ಲಿ ಜಸ್ಪ್ರೀತ್ ಬುಮ್ರಾ ಒಬ್ಬರು: ಸ್ಟೀವ್ ಸ್ಮಿತ್

ಹಾಗೆ ನೋಡಿದರೆ, ಬಹಳಷ್ಟು ಬೌಲರ್​ಗಳು ಅವರಿಗೆ ಚೆಂಡೆಸೆಯುವುದು ಇಷ್ಟಪಡುವುದಿಲ್ಲ. ಆದರೆ, ಖುದ್ದು ಸ್ಮಿತ್ ಅವರೇ ತನಗೆ ಸವಾಲೊಡ್ಡಿರುವ ಕೆಲ ಬೌಲರ್ಗಳಿದ್ದಾರೆ ಎಂದು ಹೇಳಿದ್ದಾರೆಂದರೆ, ಈ ಬೌಲರ್ಗಳು ನಿಸ್ಸಂದೇಹವಾಗಿ ಅಪ್ರತಿಮರಾಗಿರುತ್ತಾರೆ.

ಪ್ರಸಕ್ತ ವಿಶ್ವ ಕ್ರಿಕೆಟ್​ನ ನಾಲ್ವರು ಉತ್ಕೃಷ್ಟ ಬೌಲರ್​ಗಳಲ್ಲಿ ಜಸ್ಪ್ರೀತ್ ಬುಮ್ರಾ ಒಬ್ಬರು: ಸ್ಟೀವ್ ಸ್ಮಿತ್
ಸ್ಟೀವ್ ಸ್ಮಿತ್
TV9 Web
| Edited By: |

Updated on: Aug 10, 2021 | 1:03 AM

Share

ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಸ್ಟೀವ್ ಸ್ಮಿತ್ ನಿಸ್ಸಂದೇಹವಾಗಿ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದಾರೆ. ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ಅವರಂತೆ ಕ್ರಿಕೆಟ್​ನ ಎಲ್ಲ ಫಾರ್ಮಾಟ್​ಗಳಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಜೋ ರೂಟ್ ಸಹ ಇದೇ ಸಾಲಿನಲ್ಲಿ ನಿಲ್ಲುತ್ತಾರಾದರೂ ಈಸಿಬಿ ಅವರನ್ನು ಟಿ20 ಕ್ರಿಕೆಟ್ಗೆ ಪರಿಗಣಿಸುವುದಿಲ್ಲ. ಸ್ಮಿತ್ ಎಲ್ಲ ಕ್ರಿಕೆಟಿಂಗ್ ರಾಷ್ಟ್ರಗಳ ವಿರುದ್ಧ ಮತ್ತು ಆ ದೇಶಗಳಲ್ಲಿ ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅವರ ಸಾಧನೆ ಸಮಕಾಲೀನ ಕ್ರಿಕೆಟ್​ನ ಎಲ್ಲ ಶ್ರೇಷ್ಠರಿಗಿಂತ ಚೆನ್ನಾಗಿದೆ. ಕ್ರೀಡೆಯ ಸಾಂಪ್ರದಾಯಿಕ ಅವೃತ್ತಿಯಲ್ಲಿ ಅತಿ ವೇಗವಾಗಿ 7,000 ರನ್ ಪೂರೈಸಿರುವ ಖ್ಯಾತಿಯ ಸ್ಮಿತ್ 62 ರನ್ ಸರಾಸರಿ ಹೊಂದಿದ್ದಾರೆ. ಆಂದರೆ ಪ್ರತಿ ಇನ್ನಿಂಗ್ಸ್ನಲ್ಲಿ ಅವರು ಕೊಹ್ಲಿಗಿಂತ 10, ವಿಲಿಯಮ್ಸನ್ಗಿಂತ 8 ಮತ್ತು ರೂಟ್ ಗಿಂತ 13 ರನ್​ಗಳನ್ನು ಹೆಚ್ಚು ಬಾರಿಸುತ್ತಾರೆ. ಪ್ರತಿ ದೇಶದ ಎಲ್ಲ ಪ್ರಮುಖ ಬೌಲರ್​ಗಳನ್ನು ಅವರು ಗೋಳು ಹೊಯ್ದುಕೊಂಡಿದ್ದಾರೆ.

ಹಾಗೆ ನೋಡಿದರೆ, ಬಹಳಷ್ಟು ಬೌಲರ್​ಗಳು ಅವರಿಗೆ ಚೆಂಡೆಸೆಯುವುದು ಇಷ್ಟಪಡುವುದಿಲ್ಲ. ಆದರೆ, ಖುದ್ದು ಸ್ಮಿತ್ ಅವರೇ ತನಗೆ ಸವಾಲೊಡ್ಡಿರುವ ಕೆಲ ಬೌಲರ್ಗಳಿದ್ದಾರೆ ಎಂದು ಹೇಳಿದ್ದಾರೆಂದರೆ, ಈ ಬೌಲರ್ಗಳು ನಿಸ್ಸಂದೇಹವಾಗಿ ಅಪ್ರತಿಮರಾಗಿರುತ್ತಾರೆ. ಪಿಕ್ಚರ್-ಶೇರಿಂಗ್ ವೆಬ್ಸೈಟ್ ನಡೆಸಿದ ಪ್ರಶ್ನೋತ್ತರ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸ್ಮಿತ್; ಭಾರತದ ಜಸ್ಪ್ರೀತ್ ಬುಮ್ರಾ, ಇಂಗ್ಲೆಂಡ್ನ ಜೇಮ್ಸ್ ಆಂಡರ್ಸನ್, ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಮತ್ತು ತಮ್ಮ ದೇಶದವರೇ ಅಗಿರುವ ಪ್ಯಾಟ್ ಕಮ್ಮಿನ್ಸ್ ಪ್ರಸಕ್ತ ವಿಶ್ವ ಕ್ರಿಕೆಟ್ನಲ್ಲಿ ಅತ್ಯುತ್ತಮ ಬೌಲರ್​ಗಳಾಗಿದ್ದಾರೆ ಎಂದು ಹೇಳಿದ್ದಾರೆ.

ಈ ನಾಲ್ವರು ವಿಶ್ವದ ಎಲ್ಲ ಉತ್ತಮ ಬ್ಯಾಟ್ಸ್​ಮನ್​ಗಳಿಗೂ ಕಂಟಕರಾಗಿದ್ದಾರೆ ಎಂದು ಸ್ಮಿತ್ ಹೇಳಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, ಅವರು ಹೆಸರಿಸಿರುವ ಎಲ್ಲ ನಾಲ್ವರು ವೇಗದ ಬೌಲರ್ಗಳಾಗಿದ್ದಾರೆ. ವಯಸ್ಸಾಗಲಾರಂಭಿಸುತ್ತಿದ್ದಂತೆ ವೇಗದ ಬೌಲರ್​ಗಳ ಕ್ಷಮತೆ ಮತ್ತು ಸಾಮರ್ಥ್ಯ ಕ್ಷೀಣಿಸುತ್ತದೆ. ಆದರೆ, ಜಿಮ್ಮಿಯ ಕೇಸ್ನಲ್ಲಿ ಅದು ಉಲ್ಟಾ ಆಗುತ್ತಿದೆ. ಕೊಹ್ಲಿ ಪಡೆ ವಿರುದ್ಧ ನಡೆದ ಮೊದಲ ಟೆಸ್ಟ್ನಲ್ಲಿ ಜಿಮ್ಮಿ ಭಾರತದ ಅನಿಲ್ ಕುಂಬ್ಳೆ ಅವರ 619 ವಿಕೆಟ್ಗಳ ದಾಖಲೆಯನ್ನು ಉತ್ತಮ ಪಡಿಸಿ, ಟೆಸ್ಟ್ ಕ್ರಿಕೆಟ್ನಲ್ಲಿ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದಿರುವ ಬೌಲರ್ ಎನಿಸಿದರು. ಕೇವಲ ಮುತ್ತಯ್ಯ ಮುರಳೀಧರನ್ (800) ಮತ್ತು ಶೇನ್ ವಾರ್ನ್ (708) ಜಿಮ್ಮಿಗಿಂತ ಜಾಸ್ತಿ ವಿಕೆಟ್ ಪಡೆದಿದ್ದಾರೆ

Jasprit Bumrah

ಜಸ್ಪ್ರೀತ್ ಬುಮ್ರಾ

ಕಮ್ಮಿನ್ಸ್ ಮತ್ತು ಸ್ಮಿತ್ ಒಂದೇ ತಂಡಕ್ಕೆ ಆಡುವುದರಿಂದ ನೆಟ್ಸ್ನಲ್ಲಿ ಈ ವೇಗಿ ಸ್ಮಿತ್ ಅವರಿಗೆ ತೊಂದರೆ ನೀಡಿರುವುದು ಖಚಿತಾಗುತ್ತದೆ. ಬುಮ್ರಾ ಮತ್ತು ರಬಾಡ ಬಗ್ಗೆ ಹೇಳುವುದಾದರೆ, ವಿಶ್ವದ ಶ್ರೇಷ್ಠ ಬ್ಯಾಟ್ಸ್​ಮನ್​ಗಳನ್ನು ತಲ್ಲಣಗೊಳಿಸುವ ಎಲ್ಲ ಅಸ್ತ್ರಗಳು ಅವರ ಬತ್ತಳಿಕೆಯಲ್ಲಿವೆ. ಹಾಗಾಗಿ, ಸ್ಮಿತ್ ಸದ್ಯದ ನಾಲ್ವರು ಶ್ರೇಷ್ಠ ಬೌಲರ್ಗಳಲ್ಲಿ ಇವರಿಬ್ಬರ ಹೆಸರನ್ನು ಸೇರಿಸಿದ್ದು ಯಾರಲ್ಲೂ ಆಶ್ಚರ್ಯ ಹುಟ್ಟಿಸಿಲ್ಲ.

ಮೊಣಕೈ ಗಾಯದಿಂದ ಬಳಲುತ್ತಿರುವ ಸ್ಮಿತ್ ಕಳೆದ ಕೆಲ ತಿಂಗಳುಗಳಿಂದ ಕ್ರಿಕೆಟ್​ಗೆ ವಿಮುಖರಾಗಿದ್ದಾರೆ. ಅರ್ಧದಷ್ಟು ಮಾತ್ರ ನಡೆದು ಇನ್ನರ್ಧ ಸೆಪ್ಟೆಂಬರ್ 19 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆಯಲಿರವ ಇಂಡಿಯನ್ ಪ್ರಿಮೀಯರ್​ ಲೀಗ್ ನಲ್ಲಿ (ಐ ಪಿ ಎಲ್) ಅವರು ಕೊನೆಯ ಬಾರಿಗೆ ಌಕ್ಷನ್ನಲ್ಲಿ ಕಾಣಿಸಿಕೊಂಡಿದ್ದರು. ಆದರೆ 31 ವರ್ಷ ವಯಸ್ಸಿನ ಸ್ಮಿತ್ ಡೆಲ್ಲಿ ಕ್ಯಾಪಿಟಲ್ಸ್ ಪರ ಕೇವಲ 6 ಪಂದ್ಯಗಳನ್ನು ಮಾತ್ರ ಆಡಿದರು. ಮೊಣಕೈ ನೋವು ಮತ್ತೆ ತೊಂದರೆ ನೀಡಲಾರಂಭಿಸಿದ ನಂತರ ಅವರು ಶಸ್ತ್ರಚಿಕಿತ್ಸೆಗೊಳಗಾದರು.

ಟಿ20 ವಿಶ್ವಕಪ್ ಕೇವಲ ಎರಡು ತಿಂಗಳು ಮಾತ್ರ ದೂರ ಇರುವುದರಿಂದ ಬೇಗ ಚೇತರಿಸಿಕೊಂಡು ಈ ಮಹತ್ತರ ಟೂರ್ನಿಯಲ್ಲಿ ಆಡಲಿ ಎಂದು ಅವರ ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ, ಅವರ ಚೇತರಿಕೆ ಬಗ್ಗೆ ಯಾವುದೇ ಮಾಹಿತಿ ಇಲ್ಲ, ಹಾಗಾಗಿ, ಸ್ಮಿತ್ ಟಿ20 ವಿಶ್ವಕಪ್​ನಲ್ಲಿ ಆಡುವ ಬಗ್ಗೆ ಸ್ಪಷ್ಟತೆಯಿಲ್ಲ.

ಇದನ್ನೂ ಓದಿ: ಸ್ಟೋಕ್ಸ್ ಅವರಂತೆ ಬೇರೆ ಆಟಗಾರರು ಸಹ ಬಯೊ-ಬಬಲ್ ಬದುಕಿನಿಂದ ಬೇಸತ್ತು ಕ್ರಿಕೆಟ್​ನಿಂದ ಬ್ರೇಕ್ ತೆಗೆದುಕೊಳ್ಳಬಹುದು: ವಿರಾಟ್ ಕೊಹ್ಲಿ