ಆಸ್ಟ್ರೇಲಿಯಾದಲ್ಲಿ ತನ್ನ ಚಾಣಾಕ್ಷ ಬೌಲಿಂಗ್ ಮೂಲಕ ವಿಕೆಟ್ಗಳ ಮೂಟೆ ಕಟ್ಟುತ್ತಿರುವ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಈ ವರ್ಷ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅಲ್ಲದೆ ಈ ವರ್ಷದ ಕೊನೆಯ ಪಂದ್ಯದಲ್ಲೂ ತಮ್ಮ ಮ್ಯಾಜಿಕ್ ತೋರಿದ ಬುಮ್ರಾ ಒಟ್ಟು 9 ವಿಕೆಟ್ ಪಡೆಯುವ ಮೂಲಕ ಈ ವರ್ಷವನ್ನು ಮುಗಿಸಿದ್ದಾರೆ. ಮೇಲೆ ಹೇಳಿದಂತೆ ಈ ಟೆಸ್ಟ್ ಮಾತ್ರವಲ್ಲದೆ ಈ ಇಡೀ ವರ್ಷ, ಬುಮ್ರಾ ಪ್ರತಿ ಪಂದ್ಯದಲ್ಲೂ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ . ಈ ಅದ್ಭುತ ಪ್ರದರ್ಶನದ ಫಲವಾಗಿ ಇದೀಗ ಬುಮ್ರಾ ಅವರನ್ನು ಐಸಿಸಿ ಅತಿದೊಡ್ಡ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ವರ್ಷದ ಅತ್ಯುತ್ತಮ ಕ್ರಿಕೆಟಿಗನಿಗೆ ನೀಡುವ ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿಗೆ ಬುಮ್ರಾ ಅವರನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಬುಮ್ರಾ ಪ್ರತಿ ಪಂದ್ಯದಲ್ಲೂ ತಮ್ಮ ಪ್ರದರ್ಶನವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಿದ್ದಾರೆ. ಪರ್ತ್, ಅಡಿಲೇಡ್ ಮತ್ತು ಬ್ರಿಸ್ಬೇನ್ ನಂತರ, ಇದೀಗ ಮೆಲ್ಬೋರ್ನ್‌ನಲ್ಲಿಯೂ ಬುಮ್ರಾ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದರು. ಅವರ ಪ್ರದರ್ಶನದಿಂದ ಟೀಂ ಇಂಡಿಯಾವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗದಿದ್ದರೂ, ಸ್ಟಾರ್ ಬೌಲರ್ ತಮ್ಮ ಅತ್ಯುತ್ತಮ ಪ್ರದರ್ಶನದಿಂದ ಇಡೀ ವಿಶ್ವ ಕ್ರಿಕೆಟ್ನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದರ ಜೊತೆಗೆ ಬುಮ್ರಾ ಅವರ ಸಾಧನೆಯನ್ನು ಪರಿಗಣಿಸಿರುವ ಐಸಿಸಿ ಪ್ರಮುಖ 2 ಪ್ರಶಸ್ತಿಗಳಿಗೆ ಬುಮ್ರಾರನ್ನು ನಾಮನಿರ್ದೇಶನ ಮಾಡಿದೆ. ಇದೀಗ ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಬುಮ್ರಾ ಇದರ ಜೊತೆಗೆ ವರ್ಷದ ಅತ್ಯುತ್ತಮ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೂ ನಾಮನಿರ್ದೇಶನಗೊಂಡಿದ್ದಾರೆ.
🏴 🇮🇳 🇦🇺 🏴
The best of the best will be vying for the coveted Sir Garfield Sobers Trophy for ICC Men’s Cricketer of the Year 🌟 #ICCAwardshttps://t.co/RJPl6McATL
— ICC (@ICC) December 30, 2024
ಈ ವರ್ಷ, ಬುಮ್ರಾ ಟೆಸ್ಟ್ ಮತ್ತು ಟಿ 20 ಮಾದರಿಯಲ್ಲಿ ಮಾತ್ರ ತಂಡವನ್ನು ಪ್ರತಿನಿಧಿಸಿದ್ದು, ತಮ್ಮ ಮಾರಕ ಬೌಲಿಂಗ್‌ನಿಂದ ಟೀಂ ಇಂಡಿಯಾಕ್ಕೆ ಅನೇಕ ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. 2024ರ ಟಿ20 ವಿಶ್ವಕಪ್‌ನಲ್ಲಿ ಗರಿಷ್ಠ 15 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡಿದ್ದ ಬುಮ್ರಾ ಪಂದ್ಯಾವಳಿಯ ಆಟಗಾರರಾಗಿಯೂ ಆಯ್ಕೆಯಾಗಿದ್ದರು. ಇದರ ಜೊತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಅಬ್ಬರಿಸಿರುವ ಬುಮ್ರಾ ಇಂಗ್ಲೆಂಡ್, ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಈಗ ಆಸ್ಟ್ರೇಲಿಯಾದಂತಹ ತಂಡಗಳ ವಿರುದ್ಧವೂ ಅಮೋಘ ಪ್ರದರ್ಶನ ನೀಡಿದ್ದಾರೆ. ಈ ವರ್ಷ 13 ಟೆಸ್ಟ್ ಪಂದ್ಯಗಳನ್ನಾಡಿರುವ ಬುಮ್ರಾ 71 ವಿಕೆಟ್ ಪಡೆದಿದ್ದಾರೆ. ಬುಮ್ರಾರನ್ನು ಹೊರತುಪಡಿಸಿ ಮತ್ತ್ಯಾವ ಬೌಲರ್ಗೂ ಈ ವರ್ಷ ಇಷ್ಟು ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ.
ತಮ್ಮ ಅದ್ಭುತ ಪ್ರದರ್ಶನದ ಮೂಲಕ ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಬುಮ್ರಾ ಈ ಮೂಲಕ ಈ ಪ್ರಶಸ್ತಿ ರೇಸ್ನಲ್ಲಿರುವ ಮೊದಲ ಭಾರತೀಯ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಆದರೆ, ಇವರೊಂದಿಗೆ ಸ್ಪರ್ಧಿಸುತ್ತಿರುವ ಆಟಗಾರರೂ ಕಡಿಮೆಯೇನಿಲ್ಲ. ಈ ವರ್ಷ 17 ಟೆಸ್ಟ್‌ಗಳಲ್ಲಿ 55 ಸರಾಸರಿಯಲ್ಲಿ ಗರಿಷ್ಠ 1556 ರನ್ ಗಳಿಸಿದ ಇಂಗ್ಲೆಂಡ್‌ನ ದಂತಕಥೆ ಬ್ಯಾಟ್ಸ್‌ಮನ್ ಜೋ ರೂಟ್ ಕೂಡ ಇದರಲ್ಲಿ ಸೇರಿದ್ದಾರೆ. ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಕೂಡ ಈ ರೇಸ್‌ನಲ್ಲಿದ್ದಾರೆ. ಹೆಡ್ ಈ ವರ್ಷ ಆಡಿರುವ 9 ಟೆಸ್ಟ್‌ಗಳಲ್ಲಿ 40 ಸರಾಸರಿಯಲ್ಲಿ 608 ರನ್ ಮತ್ತು 15 ಟಿ20 ಪಂದ್ಯಗಳಲ್ಲಿ 178 ಸ್ಟ್ರೈಕ್ ರೇಟ್‌ನಲ್ಲಿ 539 ರನ್ ಗಳಿಸಿದ್ದಾರೆ. ಇವರಲ್ಲದೆ, ಇಂಗ್ಲೆಂಡ್‌ನ ಯುವ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಸಹ ಸ್ಪರ್ಧಿಯಾಗಿದ್ದು, ಈ ವರ್ಷ ಅವರು ಆಡಿರುವ 12 ಟೆಸ್ಟ್‌ಗಳಲ್ಲಿ 55 ಸರಾಸರಿಯಲ್ಲಿ 1100 ರನ್ ಗಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:11 pm, Mon, 30 December 24