AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಕನಾಗಿರದಿದ್ದರೆ ರೋಹಿತ್​ಗೆ ಪ್ಲೇಯಿಂಗ್​ 11ನಲ್ಲಿ ಸ್ಥಾನ ಸಿಗುತ್ತಿರಲಿಲ್ಲ ಎಂದ ತಂಡದ ಮಾಜಿ ಕ್ರಿಕೆಟಿಗ

Rohit Sharma: ರೋಹಿತ್ ಶರ್ಮಾ ಅವರ ಕಳಪೆ ಪ್ರದರ್ಶನದಿಂದಾಗಿ ಅವರ ಭವಿಷ್ಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ನಿರಾಶಾದಾಯಕ ಪ್ರದರ್ಶನದ ನಂತರ, ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮತ್ತು ರವಿಶಾಸ್ತ್ರಿ ಅವರು ರೋಹಿತ್ ಅವರ ನಿವೃತ್ತಿಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರೋಹಿತ್ ಅವರ ಕಳಪೆ ಫಾರ್ಮ್ ಮತ್ತು ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿವೆ.

ನಾಯಕನಾಗಿರದಿದ್ದರೆ ರೋಹಿತ್​ಗೆ ಪ್ಲೇಯಿಂಗ್​ 11ನಲ್ಲಿ ಸ್ಥಾನ ಸಿಗುತ್ತಿರಲಿಲ್ಲ ಎಂದ ತಂಡದ ಮಾಜಿ ಕ್ರಿಕೆಟಿಗ
ರೋಹಿತ್ ಶರ್ಮಾ
ಪೃಥ್ವಿಶಂಕರ
|

Updated on: Dec 30, 2024 | 8:04 PM

Share

ಈ ವರ್ಷದ ಜೂನ್ ತಿಂಗಳಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾವನ್ನು ಚಾಂಪಿಯನ್‌ ಮಾಡಿದ್ದ ರೋಹಿತ್ ಶರ್ಮಾ ಯಾವುದೇ ತೊಂದರೆ ಇಲ್ಲದೆ ಇನ್ನು ಐದು ವರ್ಷ ತಂಡದಲ್ಲಿ ಇರುತ್ತಾರೆ ಹಾಗೂ ತಂಡವನ್ನು ಮುನ್ನಡೆಸುತ್ತಾರೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಇದೀಗ ಟೀಂ ಇಂಡಿಯಾವನ್ನು 17 ವರ್ಷಗಳ ಬಳಿಕ ಟಿ20 ವಿಶ್ವ ಚಾಂಪಿಯನ್ ಮಾಡಿದ್ದ ರೋಹಿತ್ ಅವರನ್ನು ತಂಡದಿಂದ ಕೈಬಿಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ರೋಹಿತ್ ಆಡಿರುವ ಮೂರು ಟೆಸ್ಟ್ ಪಂದ್ಯಗಳಲ್ಲಿ ನಾಯಕನಾಗಿ ಹಾಗೂ ಆಟಗಾರನಾಗಿ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಆದಷ್ಟು ಬೇಗ ರೋಹಿತ್ ನಿವೃತ್ತಿಯಾಗಲಿ ಎಂಬ ಕೂಗು ಎಲ್ಲೆಡೆ ಜೋರಾಗಿ ಕೇಳಲಾರಂಭಿಸಿದೆ. ಅಭಿಮಾನಿಗಳ ಜೊತೆಗೆ ಇದೀಗ ತಂಡದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ರೋಹಿತ್ ಅವರನ್ನು ತಂಡದಿಂದ ಹೊರಹಾಕಬೇಕು ಎಂಬರ್ಥದಲ್ಲಿ ಮಾತನಾಡಿದ್ದಾರೆ.

ರೋಹಿತ್ ಬಗ್ಗೆ ಪಠಾಣ್ ಹೇಳಿದ್ದೇನು?

ಮೆಲ್ಬೋರ್ನ್ ಟೆಸ್ಟ್​ನಲ್ಲಿ ತಂಡದ ಸೋಲಿನ ಬಳಿಕ ರೋಹಿತ್ ಅವರ ಪ್ರದರ್ಶನದ ಬಗ್ಗೆ ಮಾತನಾಡಿರುವ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್, ‘ರೋಹಿತ್ ತಂಡದ ನಾಯಕರಾಗಿರದಿದ್ದರೆ, ಅವರ ಪ್ರಸ್ತುತ ಫಾರ್ಮ್ ಅನ್ನು ಆಧರಿಸಿ ಅವರು ಪ್ಲೇಯಿಂಗ್ ಹನ್ನೊಂದರಲ್ಲಿ ಸ್ಥಾನ ಪಡೆಯುತ್ತಿರಲಿಲ್ಲ ಎಂದಿದ್ದಾರೆ. ಮುಂದುವರೆದು ಮಾತನಾಡಿರುವ ಅವರು, ‘ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸುಮಾರು 20 ಸಾವಿರ ರನ್ ಗಳಿಸಿರುವ ರೋಹಿತ್ ಇದೀಗ ಕಷ್ಟಪಡುತ್ತಿರುವ ರೀತಿಯನ್ನು ನೋಡುತ್ತಿದ್ದರೆ ಅವರ ಫಾರ್ಮ್ ಅವರಿಗೆ ಬೆಂಬಲ ನೀಡುತ್ತಿಲ್ಲ ಎಂದು ತೋರುತ್ತದೆ. ಆದರೆ ರೋಹಿತ್ ಅವರೇ ತಂಡದ ನಾಯಕನಾಗಿರುವ ಕಾರಣ ಅವರು ತಂಡದಲ್ಲಿ ಆಡುತ್ತಿದ್ದಾರೆ. ಒಂದು ವೇಳೆ ಅವರು ನಾಯಕನಾಗಿರದಿದ್ದರೆ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುತ್ತಿರಲಿಲ್ಲ. ರೋಹಿತ್ ತಂಡದಲ್ಲಿ ಇಲ್ಲದಿದ್ದರೆ ಕೆಎಲ್ ರಾಹುಲ್ ಓಪನರ್ ಆಗುತ್ತಿದ್ದರು. ಶುಭಮನ್ ಗಿಲ್ ಕೂಡ ತಂಡದಲ್ಲಿ ಇರುತ್ತಿದ್ದರು ಎಂದು ಪಠಾಣ್ ಹೇಳಿದ್ದಾರೆ.

ಮಂಕಾಗಿರುವ ರೋಹಿತ್ ಶರ್ಮಾ

ವಾಸ್ತವವಾಗಿ ರೋಹಿತ್ ಶರ್ಮಾ ಈ ಸರಣಿಯಲ್ಲಿ ಮಾತ್ರವಲ್ಲದೆ ದೀರ್ಘಕಾಲದಿಂದ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ. ಇದಕ್ಕೂ ಮೊದಲು ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ರೋಹಿತ್ ಕೇವಲ 42 ರನ್ ಕಲೆಹಾಕಿದ್ದರು. ಆ ಬಳಿಕ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳಲ್ಲಿ ರೋಹಿತ್ ಕೇವಲ 91 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದರು.

ಇದೀಗ ರೋಹಿತ್ ವಿರುದ್ಧ ಧ್ವನಿ ಎತ್ತಿದವರಲ್ಲಿ ಪಠಾಣ್ ಮಾತ್ರವಲ್ಲ, ರವಿಶಾಸ್ತ್ರಿ ಕೂಡ ರೋಹಿತ್ ನಿವೃತ್ತಿಯ ಬಗ್ಗೆ ಮಾತುಗಳನ್ನಾಡಿದ್ದು, ರೋಹಿತ್‌ ತಮ್ಮ ವೃತ್ತಿಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅಗ್ರ ಕ್ರಮಾಂಕದಲ್ಲಿ ಅವರ ಆಲ ಮೊದಲಿನಂತಿಲ್ಲ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ಸರಣಿಯ ಕೊನೆಯಲ್ಲಿ ರೋಹಿತ್ ಒಂದು ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ