AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup: ಟಿ20 ವಿಶ್ವಕಪ್​ನಿಂದ ಬುಮ್ರಾ ಔಟ್..! ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ ಬಿಸಿಸಿಐ

Jasprit Bumrah: ಬಿಸಿಸಿಐ ತನ್ನ ಹೇಳಿಕೆಯಲ್ಲಿ, “ಬಿಸಿಸಿಐ ವೈದ್ಯಕೀಯ ತಂಡವು ಸಮಾಲೋಚಿಸಿ ನಿರ್ಧಾರ ತೆಗೆದುಕೊಂಡಿದ್ದು, ಐಸಿಸಿ ಟಿ 20 ವಿಶ್ವಕಪ್​ನಿಂದ ಜಸ್ಪ್ರೀತ್ ಬುಮ್ರಾ ಅವರನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ಹೇಳಿಕೊಂಡಿದೆ.

T20 World Cup: ಟಿ20 ವಿಶ್ವಕಪ್​ನಿಂದ ಬುಮ್ರಾ ಔಟ್..! ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ ಬಿಸಿಸಿಐ
Jasprit Bumrah
TV9 Web
| Updated By: ಪೃಥ್ವಿಶಂಕರ|

Updated on:Oct 03, 2022 | 9:17 PM

Share

ಆಸ್ಟ್ರೇಲಿಯದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಭಾರೀ ಹಿನ್ನಡೆ ಅನುಭವಿಸಿದೆ. ಕಳೆದ ಕೆಲವು ದಿನಗಳಿಂದ ಹುಟ್ಟಿಕೊಂಡಿದ್ದ ಊಹಾಪೋಹಾಗಳಿಗೆ ಅಂತಿಮವಾಗಿ ತೆರೆಬಿದ್ದಿದೆ. ಟಿ20 ವಿಶ್ವಕಪ್​ನಿಂದ ಟೀಂ ಇಂಡಿಯಾದ ಸ್ಟಾರ್ ಬೌಲರ್ ಬುಮ್ರಾ (Jasprit Bumrah) ಹೊರಗುಳಿಯಲಿದ್ದಾರೆ ಎಂದು ಕೆಲವು ದಿನಗಳಿಂದ ಎಲ್ಲಾ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ಎಲ್ಲಾ ವರದಿಗಳಿಗೆ ಬಿಸಿಸಿಐ (BCCI) ಯಾವ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಇಂದು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಬಿಸಿಸಿಐ ಬುಮ್ರಾ ಟಿ20 ವಿಶ್ವಕಪ್​ನಿಂದ ಹೊರಬಿದ್ದಿರುವುದನ್ನು ಖಚಿತ ಪಡಿಸಿದೆ.

ಬಿಸಿಸಿಐ ತನ್ನ ಹೇಳಿಕೆಯಲ್ಲಿ, “ಬಿಸಿಸಿಐ ವೈದ್ಯಕೀಯ ತಂಡವು ಸಮಾಲೋಚಿಸಿ ನಿರ್ಧಾರ ತೆಗೆದುಕೊಂಡಿದ್ದು, ಐಸಿಸಿ ಟಿ 20 ವಿಶ್ವಕಪ್​ನಿಂದ ಜಸ್ಪ್ರೀತ್ ಬುಮ್ರಾ ಅವರನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ಹೇಳಿಕೊಂಡಿದೆ.

ಬುಮ್ರಾ ಬದಲಿಗೆ ಯಾರು?

ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ20ಐ ಸರಣಿಯಿಂದ ಬುಮ್ರಾ ಹೊರಗುಳಿದಿದ್ದರು. ಈ ಸರಣಿಯಲ್ಲಿ ಎರಡು ಪಂದ್ಯಗಳು ನಡೆದಿದ್ದು, ಎರಡೂ ಪಂದ್ಯಗಳಲ್ಲಿ ಬುಮ್ರಾ ಆಡಿರಲಿಲ್ಲ. ಈಗ ಅವರ ಬದಲಿಗೆ ತಂಡದಲ್ಲಿ ಯಾರು ಸ್ಥಾನ ಪಡೆಯುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಇದರಲ್ಲಿ ಮೊದಲ ಹೆಸರು ಮೊಹಮ್ಮದ್ ಶಮಿ. ಶಮಿ, ಬುಮ್ರಾರಂತೆ ಅನುಭವವನ್ನೂ ಹೊಂದಿದ್ದು, ವೇಗವಾಗಿ ಬೌಲಿಂಗ್ ಮಾಡುವ ಸಾಮಥ್ಯ್ರವನ್ನು ಹೊಂದಿದ್ದಾರೆ. ಜೊತೆಗೆ ಶಮಿ, ಈಗಾಗಲೇ ವಿಶ್ವಕಪ್​ಗೆ ಆಯ್ಕೆಯಾಗಿರುವ ತಂಡದಲ್ಲಿ ಸ್ಟ್ಯಾಂಡ್‌ಬೈ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ.

ಇದಕ್ಕೆ ಪೂರಕವೆಂಬಂತೆ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲೂ ಶಮಿ ಆಯ್ಕೆಯಾಗಿಲ್ಲ. ಹೀಗಾಗಿ ಶಮಿಯನ್ನು ನೆರವಾಗಿ ಟಿ20 ವಿಶ್ವಕಪ್​ನಲ್ಲಿ ಆಡಿಸುವ ಯೋಜನೆಯನ್ನು ಬಿಸಿಸಿಐ ಹಾಕಿಕೊಂಡಂತ್ತಿದೆ. ಇವರಲ್ಲದೆ ಮೊಹಮ್ಮದ್ ಸಿರಾಜ್ ಮತ್ತು ದೀಪಕ್ ಚಹಾರ್ ಅವರ ಹೆಸರೂ ಈ ಲಿಸ್ಟ್​ನಲ್ಲಿದೆ. ಚಾಹರ್, ಶಮಿಯೊಂದಿಗೆ ಸ್ಟ್ಯಾಂಡ್-ಬೈ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಆದರೆ ದೀಪಕ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿದ್ದು, ಸರಣಿ ಮುಗಿದ ಬಳಿಕ ಆಸ್ಟ್ರೇಲಿಯಾಕ್ಕೆ ಹಾರಬೇಕಿದೆ.

ಬುಮ್ರಾ ಅಲಭ್ಯತೆಯ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ, ಅವರ ಸ್ಥಾನಕ್ಕೆ ಯಾರು ಆಯ್ಕೆಯಾಗುತ್ತಾರೆ ಎಂಬುದನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಹೇಳಿಕೊಂಡಿದೆ.

ಭರವಸೆ ವ್ಯಕ್ತಪಡಿಸಿದ್ದ ರಾಹುಲ್-ಸೌರವ್

ಬುಮ್ರಾ ಗಾಯಗೊಂಡ ಸುದ್ದಿ ಹೊರಬಿದ್ದ ನಂತರ ಬುಮ್ರಾ ಟಿ20 ವಿಶ್ವಕಪ್ ಆಡುವುದಿಲ್ಲ ಎಂದು ವದಂತಿ ಹಬ್ಬಿತ್ತು. ಇದನ್ನು ಹಲವು ಮಾಧ್ಯಮಗಳು ಸಹ ವರದಿ ಮಾಡಿದ್ದವು. ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್, ಆದಾಗ್ಯೂ, ಬುಮ್ರಾ ವಿಶ್ವಕಪ್‌ನಲ್ಲಿ ಆಡಬಹುದು ಎಂದು ಭರವಸೆ ವ್ಯಕ್ತಪಡಿಸಿದರು. ವಿಶ್ವಕಪ್​ಗೆ ಇನ್ನು ಸಾಕಷ್ಟು ಸಮಯವಿದ್ದು, ಬುಮ್ರಾ ತಂಡದಲ್ಲಿ ಆಡುವ ವಿಶ್ವಾಸವಿದೆ ಎಂದು ಗಂಗೂಲಿ ಕೆಲವು ದಿನಗಳ ಹಿಂದೆ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಅದೇ ಸಮಯದಲ್ಲಿ, ರಾಹುಲ್ ದ್ರಾವಿಡ್ ಪತ್ರಿಕಾಗೋಷ್ಠಿಯಲ್ಲಿ ಬುಮ್ರಾ ಚೇತರಿಸಿಕೊಳ್ಳುವ ಭರವಸೆಯನ್ನು ವ್ಯಕ್ತಪಡಿಸಿದರು. ಈಗ ಬಿಸಿಸಿಐ ಹೇಳಿಕೆಯ ನಂತರ, ಈ ಇಬ್ಬರ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ಟೀಮ್ ಇಂಡಿಯಾ ಬುಮ್ರಾ ಇಲ್ಲದೆ ವಿಶ್ವಕಪ್​ನಲ್ಲಿ ಕಣಕ್ಕಿಳಿಯಬೇಕಾಗಿದೆ.

Published On - 8:44 pm, Mon, 3 October 22