ಟೀಮ್ ಇಂಡಿಯಾದ ಮಾಜಿ ಆಟಗಾರನ ನೆರವಿಗೆ ನಿಂತ ಬಿಸಿಸಿಐ
Anshuman Gaikwad: ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಅಂಶುಮಾನ್ ಗಾಯಕ್ವಾಡ್ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅವರ ಚಿಕಿತ್ಸೆಗೆ ಹೆಚ್ಚಿನ ಹಣದ ಅವಶ್ಯಕತೆಯಿದೆ. ಹೀಗಾಗಿ ಅವರ ನೆರವಿಗೆ ಬಿಸಿಸಿಐ ನಿಲ್ಲಬೇಕು. ಇಲ್ಲ, ನಮ್ಮ ಪಿಂಚಣಿ ಮೊತ್ತವನ್ನು ದೇಣಿಗೆ ನೀಡುವ ಮೂಲಕ ನಾವು ಕೊಡುಗೆ ನೀಡಲು ಸಿದ್ಧರಿದ್ದೇವೆ ಎಂದು ಕಪಿಲ್ ದೇವ್ ದಿನಗಳ ಹಿಂದೆಯಷ್ಟೇ ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಇದೀಗ ಬಿಸಿಸಿಐ ನೆರವಿನ ಹಸ್ತ ಚಾಚಿದ್ದಾರೆ.
ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಟೀಮ್ ಇಂಡಿಯಾದ ಮಾಜಿ ಆಟಗಾರ ಅಂಶುಮಾನ್ ಗಾಯಕ್ವಾಡ್ (Anshuman Gaekwad) ಅವರ ಚಿಕಿತ್ಸೆಗಾಗಿ 1 ಕೋಟಿ ರೂ. ಬಿಡುಗಡೆ ಮಾಡುವಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೂಚಿಸಿದ್ದಾರೆ. ಈ ಮೂಲಕ ಚಿಕಿತ್ಸೆಗಾಗಿ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದ ಭಾರತ ತಂಡದ ಮಾಜಿ ಆಟಗಾರನಿಗೆ ಬಿಸಿಸಿಐ ಸಹಾಯಹಸ್ತ ಚಾಚಿದೆ.
ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್, ಅಂಶುಮಾನ್ ಗಾಯಕ್ವಾಡ್ ಅವರ ಚಿಕಿತ್ಸೆಗೆ ನೆರವಾಗುವಂತೆ ಕಳೆದ ಕೆಲ ದಿನಗಳಿಂದ ಮನವಿ ಮಾಡುತ್ತಿದ್ದರು. ಇದಾಗ್ಯೂ ಬಿಸಿಸಿಐ ಕಡೆಯಿಂದ ಸಕರಾತ್ಮಕ ಪ್ರತಿಕ್ರಿಯೆ ಮೂಡಿಬಂದಿರಲಿಲ್ಲ. ಇದರಿಂದ ಬೇಸರಗೊಂಡಿರುವ ಕಪಿಲ್ ದೇವ್ ತಮ್ಮ ಪಿಂಚಣಿ ಮೊತ್ತವನ್ನು ಅಂಶುಮಾನ್ ಗಾಯಕ್ವಾಡ್ ಅವರಿಗೆ ಚಿಕಿತ್ಸೆಗೆ ನೀಡಲು ಸಿದ್ಧವಿರುವುದಾಗಿ ತಿಳಿಸಿದ್ದರು.
ಈ ಹೇಳಿಕೆಯು ಭಾರೀ ವೈರಲ್ ಆಗುತ್ತಿದ್ದಂತೆ ಬಿಸಿಸಿಐ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಇದೀಗ ಭಾರತ ತಂಡದ ಮಾಜಿ ಆಟಗಾರನ ಚಿಕಿತ್ಸೆಗಾಗಿ 1 ಕೋಟಿ ರೂ. ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಂಶುಮಾನ್ ಹಾಗೂ ನಾನು ಜೊತೆಯಾಗಿ ಆಡಿದ್ದೇವೆ. ಈಗ ಅವನನ್ನು ಈ ಪರಿಸ್ಥಿತಿಯಲ್ಲಿ ನೋಡಲು ಸಾಧ್ಯವಾಗುತ್ತಿಲ್ಲ. ಯಾರೂ ಸಹ ಇಂತಹ ತೊಂದರೆ ಅನುಭವಿಸಬಾರದು. ಅವರ ಚಿಕಿತ್ಸೆಗೆ ನೆರವಾಗುವಂತೆ ಬಿಸಿಸಿಐಗೆ ಮನವಿ ಮಾಡಿದ್ದೇನೆ. ಭಾರತೀಯ ಕ್ರಿಕೆಟ್ ಮಂಡಳಿ ಅವರ ಪರ ನಿಲ್ಲಬೇಕು ಎಂದು ಕಪಿಲ್ ದೇವ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಈ ಸಂದರ್ಶನದ ವಿಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ವಿಡಿಯೋ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಗಮನಕ್ಕೂ ಬಂದಿರುವ ಸಾಧ್ಯತೆಯಿದೆ. ಹೀಗಾಗಿಯೇ ಒಂದೇ ದಿನದಲ್ಲಿ ಚಿಕಿತ್ಸೆಗೆ ಬೇಕಾದ ನೆರವು ನೀಡುವಂತೆ ಖಡಕ್ ಸೂಚನೆ ನೀಡಿದ್ದಾರೆ. ಅದರಂತೆ ಅಂಶುಮಾನ್ ಗಾಯಕ್ವಾಡ್ ಅವರ ಚಿಕಿತ್ಸೆಗೆ 1 ಕೋಟಿ ರೂ. ಬಿಡುಗಡೆ ಮಾಡುವಂತೆ ತಿಳಿಸಲಾಗಿದೆ.
ಯಾರು ಈ ಅಂಶುಮಾನ್ ಗಾಯಕ್ವಾಡ್?
71 ವರ್ಷದ ಗಾಯಕ್ವಾಡ್ ಅವರು 80ರ ದಶಕದಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಭಾರತದ ಪರ 40 ಟೆಸ್ಟ್ ಪಂದ್ಯಗಳನ್ನಾಡಿದ್ದ ಅಂಶುಮಾನ್ 1 ದ್ವಿಶತಕ, 2 ಶತಕ ಹಾಗೂ 10 ಅರ್ಧಶತಕಗಳೊಂದಿಗೆ 1985 ರನ್ ಕಲೆಹಾಕಿದ್ದಾರೆ. ಹಾಗೆಯೇ ಏಕದಿನ 15 ಪಂದ್ಯಗಳನ್ನಾಡಿರುವ ಅಂಶುಮಾನ್ 1 ಅರ್ಧಶತಕದೊಂದಿಗೆ 269 ರನ್ ಗಳಿಸಿದ್ದಾರೆ.
ಇದಾಗ್ಯೂ ಅಂಶುಮಾನ್ ಗಾಯಕ್ವಾಡ್ ಅವರಿಗೆ ಹೆಸರು ತಂದುಕೊಟ್ಟಿದ್ದು ಕೋಚಿಂಗ್ ಹುದ್ದೆ ಎಂಬುದು ವಿಶೇಷ. 1997 ರಿಂದ 2000ರವರೆಗೆ ಭಾರತ ತಂಡದ ಮುಖ್ಯ ಕೋಚ್ ಆಗಿ ಕಾಣಿಸಿಕೊಂಡಿದ್ದ ಅಂಶುಮಾನ್ ಬಲಿಷ್ಠ ಟೀಮ್ ಇಂಡಿಯಾವನ್ನು ಕಟ್ಟಿದ್ದರು. ಇದೇ ಅವಧಿಯಲ್ಲಿ ಭಾರತ ತಂಡವು ಶಾರ್ಜಾದಲ್ಲಿ ನಡೆದ ಪ್ರಸಿದ್ಧ ಕೋಕಾ-ಕೋಲಾ ಕಪ್ ಮತ್ತು ಪಾಕಿಸ್ತಾನದ ವಿರುದ್ಧ ದೆಹಲಿ ಟೆಸ್ಟ್ ಅನ್ನು ಗೆದ್ದುಕೊಂಡಿತ್ತು.
ಇದನ್ನೂ ಓದಿ: James Anderson: ವಿಶ್ವ ದಾಖಲೆಗಳೊಂದಿಗೆ ವಿದಾಯ ಹೇಳಿದ ಜೇಮ್ಸ್ ಅ್ಯಂಡರ್ಸನ್
ಇದೀಗ ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿರುವ ಅವರು ಚಿಕಿತ್ಸೆ ಪಡೆಯುತ್ತಿದ್ದು, ಅವರ ಚಿಕಿತ್ಸೆಗಾಗಿ ಭಾರತೀಯ ಕ್ರಿಕೆಟ್ ಮಂಡಳಿ 1 ಕೋಟಿ ರೂ. ನೀಡುವುದಾಗಿ ಘೋಷಿಸಿದೆ.