ಮುಂದಿನ ಆವೃತ್ತಿಯಲ್ಲಿ ಹೊಸ ತಂಡದ ಪರ ಆಡಲಿರುವ ಆರ್‌ಸಿಬಿ ವಿಕೆಟ್ ಕೀಪರ್
Jitesh Sharma Switches Teams: 2025ರ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಜಿತೇಶ್ ಶರ್ಮಾ, ದೇಶೀಯ ಕ್ರಿಕೆಟ್‌ನಲ್ಲಿ ವಿದರ್ಭ ತಂಡವನ್ನು ತೊರೆದು ಬರೋಡಾ ತಂಡ ಸೇರಿದ್ದಾರೆ. ಕಳೆದ 18 ತಿಂಗಳಿಂದ ಪ್ರಥಮ ದರ್ಜೆ ಕ್ರಿಕೆಟ್ ಆಡದ ಜಿತೇಶ್, ಬರೋಡಾದಲ್ಲಿ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಹೊಸ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಅವರ ಐಪಿಎಲ್ ತಂಡದ ಸಹ ಆಟಗಾರ ಸ್ವಪ್ನಿಲ್ ಸಿಂಗ್ ಕೂಡ ತ್ರಿಪುರಾ ತಂಡ ಸೇರಿದ್ದಾರೆ ಎಂಬುದು ಗಮನಾರ್ಹ.

2025 ರ ಐಪಿಎಲ್‌ನಲ್ಲಿ (IPL 2025) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ (Jitesh Sharma), ಮುಂದಿನ ಆವೃತ್ತಿಯಲ್ಲಿ ಹೊಸ ತಂಡದ ಪರ ಕಣಕ್ಕಿಳಿಯುವುದು ಖಚಿತವಾಗಿದೆ. ಅಷ್ಟಕ್ಕೂ ಜಿತೇಶ್ ತನ್ನ ತಂಡವನ್ನು ಬದಲಿಸುತ್ತಿರುವುದು ಐಪಿಎಲ್‌ನಲ್ಲಿ ಅಲ್ಲ. ಬದಲಿಗೆ ದೇಶೀ ಕ್ರಿಕೆಟ್‌ನಲ್ಲಿ ಜಿತೇಶ್ ವಿದರ್ಭ ತಂಡವನ್ನು ತೊರೆದು ಬರೋಡಾ ಪರ ಕಣಕ್ಕಿಳಿಯುವುದು ಖಚಿತವಾಗಿದೆ. ವಾಸ್ತವವಾಗಿ ಕಳೆದ ಕೆಲವು ದಿನಗಳ ಹಿಂದೆ ಜಿತೇಶ್ ಶರ್ಮಾ ಹಾಗೂ ಕನ್ನಡಿಗ ಕರುಣ್ ನಾಯರ್, ವಿದರ್ಭ ತಂಡದಿಂದ ಎನ್ಒಸಿ ಪಡೆದಿದ್ದರು. ಅದರಂತೆ ಕನ್ನಡಿಗ ಕರುಣ್ ಮತ್ತೆ ತನ್ನ ತವರು ತಂಡದ ಪರ ಆಡುತ್ತಿದ್ದರೆ, ಜಿತೇಶ್ ಶರ್ಮಾ ಬರೋಡಾ ಪರ ಬ್ಯಾಟ್ ಬೀಸಲಿದ್ದಾರೆ.
ತಂಡ ಬದಲಾಯಿಸಿದ ಜಿತೇಶ್ ಶರ್ಮಾ
ಜಿತೇಶ್ ಶರ್ಮಾ 2025-26ರ ದೇಶೀಯ ಸೀಸನ್‌ನಲ್ಲಿ ಬರೋಡಾ ಪರ ಆಡಲಿದ್ದಾರೆ. ಕಳೆದ ಸೀಸನ್‌ನಲ್ಲಿ ವಿದರ್ಭ ನಾಯಕರಾಗಿ ಜಿತೇಶ್ ಶರ್ಮಾ ಒಂದೇ ಒಂದು ಪಂದ್ಯವನ್ನು ಆಡಿರಲಿಲ್ಲ, ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಕ್ಷಯ್ ವಾಡ್ಕರ್ ಅವರಿಗೆ ಆದ್ಯತೆ ನೀಡಲಾಯಿತು. ಆದಾಗ್ಯೂ, ಜಿತೇಶ್ ವಿದರ್ಭದ ವೈಟ್-ಬಾಲ್ ತಂಡದ ಭಾಗವಾಗಿದ್ದಲ್ಲದೆ ಕರುಣ್ ನಾಯರ್ ನಾಯಕತ್ವದಲ್ಲಿ ಆಡಿದ್ದರು. ಈಗ ಬರೋಡಾ ಪರ ಆಡಲಿರುವ ಜಿತೇಶ್ ಅವರ ವೃತ್ತಿಜೀವನಕ್ಕೆ, ವಿಶೇಷವಾಗಿ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಹೊಸ ದಿಕ್ಕನ್ನು ನೀಡಬಹುದು.
ಕೊನೆಯ ಎಸೆತದಲ್ಲಿ ಗೆಲುವಿನ ಸಿಕ್ಸ್ ಬಾರಿಸಿ ತಂಡವನ್ನು ಫೈನಲ್ಗೇರಿಸಿದ ಜಿತೇಶ್ ಶರ್ಮಾ
ಬಹಳ ದಿನಗಳಿಂದ ರೆಡ್-ಬಾಲ್ ಕ್ರಿಕೆಟ್ ಆಡಿಲ್ಲ
ಜಿತೇಶ್ ಶರ್ಮಾ ಅವರ ಪ್ರಥಮ ದರ್ಜೆ ವೃತ್ತಿಜೀವನವು 2015-16 ರ ಸೀಸನ್ನಿಂದ ಪ್ರಾರಂಭವಾಯಿತು. ಆದರೆ ಅವರು ಇಲ್ಲಿಯವರೆಗೆ ಕೇವಲ 10 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಅವರು 24.48 ರ ಸರಾಸರಿಯಲ್ಲಿ 661 ರನ್ ಗಳಿಸಿದ್ದಾರೆ, ಇದರಲ್ಲಿ 4 ಅರ್ಧಶತಕಗಳು ಸೇರಿವೆ. ಅದೇ ಸಮಯದಲ್ಲಿ, ಅವರು ಜನವರಿ 2024 ರಲ್ಲಿ ತಮ್ಮ ಕೊನೆಯ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದರು. ಅಂದರೆ, ಅವರು ಸುಮಾರು 18 ತಿಂಗಳ ಕಾಲ ಯಾವುದೇ ಪ್ರಥಮ ದರ್ಜೆ ಪಂದ್ಯವನ್ನು ಆಡಿಲ್ಲ. ಅವರನ್ನು ಹೊರತುಪಡಿಸಿ, ಜಿತೇಶ್ ಅವರ ಐಪಿಎಲ್ ತಂಡದ ಸಹ ಆಟಗಾರ ಸ್ವಪ್ನಿಲ್ ಸಿಂಗ್ ಕೂಡ ಮುಂಬರುವ ಸೀಸನ್ಗೂ ಮೊದಲು ತ್ರಿಪುರಾ ತಂಡವನ್ನು ಕೂಡಿಕೊಳ್ಳುತ್ತಿದ್ದಾರೆ. ಅವರು ಕೊನೆಯದಾಗಿ 2024-25 ರಲ್ಲಿ ಉತ್ತರಾಖಂಡ್ ಪರ ದೇಶೀಯ ಕ್ರಿಕೆಟ್ ಆಡಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
