9 ರನ್‌, 4 ವಿಕೆಟ್.. ಜೋಫ್ರಾ ಆರ್ಚರ್ ಮಾರಕ ದಾಳಿಗೆ ತತ್ತರಿಸಿದ ಎದುರಾಳಿ

Jofra Archer's Record Spell: ದಿ ಹಂಡ್ರೆಡ್ ಲೀಗ್‌ನ 16ನೇ ಪಂದ್ಯದಲ್ಲಿ ಸದರ್ನ್ ಬ್ರೇವ್ ಲಂಡನ್ ಸ್ಪಿರಿಟ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಜೋಫ್ರಾ ಆರ್ಚರ್ ತಮ್ಮ ದಿ ಹಂಡ್ರೆಡ್ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ (9 ರನ್‌ಗೆ 4 ವಿಕೆಟ್) ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಆರ್ಚರ್ ದಾಳಿಗೆ ಲಂಡನ್ ಸ್ಪಿರಿಟ್ ಕೇವಲ 105 ರನ್‌ಗಳಿಗೆ ಆಲೌಟ್ ಆಯಿತು, ಗುರಿ ಬೆನ್ನಟ್ಟಿದ ಸದರ್ನ್ ಬ್ರೇವ್ ಸುಲಭ ಗೆಲುವು ಸಾಧಿಸಿತು.

9 ರನ್‌, 4 ವಿಕೆಟ್.. ಜೋಫ್ರಾ ಆರ್ಚರ್ ಮಾರಕ ದಾಳಿಗೆ ತತ್ತರಿಸಿದ ಎದುರಾಳಿ
Jofra Archer

Updated on: Aug 02, 2026 | 4:49 PM

ದಿ ಹಂಡ್ರೆಡ್‌ (The Hundred) ಲೀಗ್​ನ 16ನೇ ಪಂದ್ಯದಲ್ಲಿ ಇಂದು ಲಂಡನ್ ಸ್ಪಿರಿಟ್ ಮತ್ತು ಸದರ್ನ್ ಬ್ರೇವ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಲಂಡನ್ ಸ್ಪಿರಿಟ್ ತಂಡವನ್ನು ಸದರ್ನ್ ಬ್ರೇವ್ 5 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು. ಸದರ್ನ್ ಬ್ರೇವ್ ತಂಡದ ಈ ಗೆಲುವಿನಲ್ಲಿ ಅನುಭವಿ ವೇಗದ ಬೌಲರ್ ಜೋಫ್ರಾ ಆರ್ಚರ್ (Jofra Archer) ಪ್ರಮುಖ ಪಾತ್ರ ವಹಿಸಿದರು. ಆರ್ಚರ್ ಈ ಪಂದ್ಯದಲ್ಲಿ ತಮ್ಮ ದಿ ಹಂಡ್ರೆಡ್ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಂಡನ್ ಸ್ಪಿರಿಟ್‌ ಕೇವಲ 105 ರನ್​ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಸದರ್ನ್ ಬ್ರೇವ್ ಏಕಪಕ್ಷೀಯ ಗೆಲುವು ದಾಖಲಿಸಿತು.

9 ರನ್‌ ನೀಡಿ 4 ವಿಕೆಟ್ ಕಬಳಿಸಿದ ಆರ್ಚರ್

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಂಡನ್ ಸ್ಪಿರಿಟ್ ತಂಡವು ಆರ್ಚರ್ ದಾಳಿಗೆ ತತ್ತರಿಸಿತು. ತಂಡದ ಕೊನೆಯ ಐದು ವಿಕೆಟ್‌ಗಳು ಕೇವಲ ಎರಡು ರನ್‌ಗಳಿಗೆ ಬಿದ್ದವು. ಇದರ ಪರಿಣಾಮವಾಗಿ 103 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಲಂಡನ್ ಸ್ಪಿರಿಟ್ ತಂಡವು 105 ರನ್‌ಗಳಿಗೆ ಆಲೌಟ್ ಆಯಿತು. ಜೋಫ್ರಾ ಆರ್ಚರ್ ಲಂಡನ್ ಸ್ಪಿರಿಟ್ ತಂಡದ ಕೊನೆಯ ಐದು ವಿಕೆಟ್‌ಗಳಲ್ಲಿ ಮೂರನ್ನು ಪಡೆದರು.

20 ಎಸೆತಗಳಲ್ಲಿ 11 ಡಾಟ್ ಬಾಲ್ಸ್

ಜೋಫ್ರಾ ಆರ್ಚರ್ ಈ ಪಂದ್ಯದಲ್ಲಿ ಎಸೆದ 20 ಎಸೆತಗಳಲ್ಲಿ 11 ಡಾಟ್ ಬಾಲ್‌ಗಳನ್ನು ಎಸೆದು ಕೇವಲ 9 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಬಳಿಸಿದರು. ದಿ ಹಂಡ್ರೆಡ್‌ನಲ್ಲಿ ಇದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಆರ್ಚರ್ ಅವರ ಮಾರಕ ದಾಳಿಗೆ ನಲುಗಿದ ಲಂಡನ್ ಸ್ಪಿರಿಟ್ ಪೂರ್ಣ 100 ಎಸೆತಗಳನ್ನು ಆಡಲಾಗದೆ 92 ಎಸೆತಗಳಲ್ಲಿ ಆಲೌಟ್ ಆಯಿತು. ತಂಡದ ಪರ ಅನುಭವಿ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ 56 ರನ್‌ಗಳ ಇನ್ನಿಂಗ್ಸ್ ಆಡಿದರು. ಆದರೆ ಅವರು ಕೂಡ ಆರ್ಚರ್‌ಗೆ ಬಲಿಯಾದರು.

ಸದರ್ನ್ ಬ್ರೇವ್​ಗೆ 5 ವಿಕೆಟ್‌ ಜಯ

100 ಎಸೆತಗಳಲ್ಲಿ 106 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಸದರ್ನ್ ಬ್ರೇವ್ಸ್ 97 ಎಸೆತಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ಜಯದ ದಡ ಮುಟ್ಟಿತು. ಸದರ್ನ್ ಬ್ರೇವ್ಸ್ ಪರ ಆರಂಭಿಕರಾಗಿ ಬ್ಯಾಟಿಂಗ್ ಮಾಡಿದ ಜೇಮೀ ಸ್ಮಿತ್ 36 ರನ್ ಗಳಿಸಿದರೆ, ಡೇವಿಡ್ ಮಿಲ್ಲರ್ 39 ರನ್ ಗಳಿಸಿ ಅಜೇಯರಾಗಿ ಉಳಿದರು. ಹೀಗಾಗಿ ಸದರ್ನ್ ಬ್ರೇವ್ಸ್ ಇನ್ನು ಮೂರು ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದುಕೊಂಡಿತು. ಜೋಫ್ರಾ ಆರ್ಚರ್​ಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:48 pm, Sun, 2 August 26

Loading...
Unable to load recommendations.
Follow Us