ಕಮಿನ್ಸ್ ಕ್ಯಾಪ್ಟನ್ಸಿ ಕಿತ್ತರೆ, ನಾನು ನಿವೃತ್ತಿ ನೀಡ್ತೇನೆ: ಹೇಝಲ್​​ವುಡ್ ಎಚ್ಚರಿಕೆ!

ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಮತ್ತೊಮ್ಮೆ ಹಳೆಯ ವಿವಾದವೊಂದು ಭುಗಿಲೆದ್ದಿದೆ. 2018ರ ಕುಖ್ಯಾತ 'ಸ್ಯಾಂಡ್‌ಪೇಪರ್‌ಗೇಟ್' ಪ್ರಕರಣದ ಕರಿನೆರಳು ಇದೀಗ ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್ ಮೇಲೆ ಬಿದ್ದಿದ್ದು, ಅವರ ನಾಯಕತ್ವಕ್ಕೆ ಕುತ್ತು ಬರುವ ವದಂತಿಗಳು ಹಬ್ಬಿವೆ. ಈ ಬೆಳವಣಿಗೆಯ ಬೆನ್ನಲ್ಲೇ, ಕಮಿನ್ಸ್ ಬೆಂಬಲಕ್ಕೆ ನಿಂತಿರುವ ಹಿರಿಯ ವೇಗಿ ಜೋಶ್ ಹೇಝಲ್‌ವುಡ್ ನೇರವಾಗಿ ನಿವೃತ್ತಿಯ ಎಚ್ಚರಿಕೆ ನೀಡುವ ಮೂಲಕ ಸಂಚಲನ ಮೂಡಿಸಿದ್ದಾರೆ.

ಕಮಿನ್ಸ್ ಕ್ಯಾಪ್ಟನ್ಸಿ ಕಿತ್ತರೆ, ನಾನು ನಿವೃತ್ತಿ ನೀಡ್ತೇನೆ: ಹೇಝಲ್​​ವುಡ್ ಎಚ್ಚರಿಕೆ!
Pat Cummins - Josh Hazelwood
Image Credit source: GettyImages

Updated on: Nov 21, 2026 | 8:37 AM

2018ರ ‘ಸ್ಯಾಂಡ್‌ಪೇಪರ್‌ಗೇಟ್’ ವಿವಾದದ ಕಿಚ್ಚು ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಇಬ್ಭಾಗ ಮಾಡುವ ಹಂತಕ್ಕೆ ತಲುಪಿದೆ. ನಾಯಕ ಪ್ಯಾಟ್ ಕಮಿನ್ಸ್ ತಲೆದಂಡಕ್ಕೆ ಒತ್ತಡ ಹೆಚ್ಚಾಗುತ್ತಿರುವ ಬೆನ್ನಲ್ಲೇ, ವೇಗಿ ಜೋಶ್ ಹೇಝಲ್‌ವುಡ್ ನೀಡಿರುವ ಒಂದು ಹೇಳಿಕೆ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಹೇಜಲ್‌ವುಡ್ ಹೇಳಿದ್ದೇನು?

ಕೋಡ್ ಸ್ಪೋರ್ಟ್ಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಹೇಝಲ್‌ವುಡ್, ಡಿಸೆಂಬರ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಪ್ಯಾಟ್ ಕಮಿನ್ಸ್ ಬದಲು ಬೇರೊಬ್ಬ ನಾಯಕನ ಅಡಿಯಲ್ಲಿ ಆಡುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದಿದ್ದಾರೆ.

Loading...

“ನಾವು ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಕಣಕ್ಕಿಳಿದಾಗ ಪ್ಯಾಟ್ ಕಮಿನ್ಸ್ ನಾಯಕನಾಗಿರದೆ ಬೇರೊಬ್ಬರು ನಾಯಕರಾಗಿದ್ದರೆ ಪರಿಸ್ಥಿತಿ ಹೇಗಿರುತ್ತದೆ ಎಂದು ನನಗೆ ನಿಜಕ್ಕೂ ತಿಳಿಯುತ್ತಿಲ್ಲ,” ಎಂದು ಹೇಝಲ್‌ವುಡ್ ಹೇಳಿದ್ದಾರೆ.

ಕಮಿನ್ಸ್ ಅವರನ್ನು ಕೆಳಗಿಳಿಸಿದರೆ ಪ್ರತಿಭಟನಾರ್ಥವಾಗಿ ತಂಡದಿಂದ ಹೊರಗುಳಿಯುತ್ತೀರಾ ಎಂಬ ಪ್ರಶ್ನೆಗೆ, “ಅಂತಹ ಪರಿಸ್ಥಿತಿ ಎದುರಾದರೆ ಖಂಡಿತವಾಗಿಯೂ ಆ ಬಗ್ಗೆ ಯೋಚಿಸಬೇಕಾಗುತ್ತದೆ,” ಎಂದು ಹೇಝಲ್​ವುಡ್ ಉತ್ತರಿಸಿದ್ದಾರೆ.

“ಕಳೆದ ಐದಾರು ವರ್ಷಗಳಲ್ಲಿ ಕಮಿನ್ಸ್ ಆಸ್ಟ್ರೇಲಿಯಾ ಡ್ರೆಸ್ಸಿಂಗ್ ರೂಮ್ ಸಂಸ್ಕೃತಿಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದಾರೆ ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಒಂದು ವೇಳೆ ಅವರು ತಂಡದ ನಾಯಕನಾಗಿ ಮುಂದುವರೆಯದೇ ಇದ್ದರೆ, ನಾನು ಸಹ ನಿವೃತ್ತಿಯತ್ತ ಮುಖ ಮಾಡಬೇಕಾಗುತ್ತದೆ” ಎಂದು ಹೇಝಲ್‌ವುಡ್ ಕ್ರಿಕೆಟ್ ಆಸ್ಟ್ರೇಲಿಯಾಗೆ ಎಚ್ಚರಿಕೆ ರವಾನಿಸಿದ್ದಾರೆ.

8 ವರ್ಷಗಳ ಹಳೆಯ ವಿವಾದ ಮತ್ತೆ ಮುನ್ನೆಲೆಗೆ!

2018ರಲ್ಲಿ ಸೌತ್ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಾಮರೋನ್ ಬ್ಯಾನ್‌ಕ್ರಾಫ್ಟ್ ಸ್ಯಾಂಡ್‌ಪೇಪರ್ ಬಳಸಿ ಚೆಂಡು ವಿರೂಪಗೊಳಿಸಿ ನಿಷೇಧಕ್ಕೊಳಗಾಗಿದ್ದರು. ಆದರೆ, ಈ ಘಟನೆ ನಡೆದ 8 ವರ್ಷಗಳ ಬಳಿಕ ವಿವಾದಕ್ಕೆ ಮತ್ತೆ ಜೀವ ಬಂದಿದೆ.

ಉಸ್ಮಾನ್ ಖ್ವಾಜಾ ಪುಸ್ತಕ: ಇತ್ತೀಚೆಗೆ ಬಿಡುಗಡೆಯಾದ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಅವರ ಆತ್ಮಚರಿತ್ರೆ ‘ಸಬ್ರ್’ (Sabr) ನಲ್ಲಿ, ಚೆಂಡು ವಿರೂಪಗೊಳಿಸುವ ಸಂಚಿನ ಬಗ್ಗೆ ತಂಡದ ಎಲ್ಲಾ ಆಟಗಾರರಿಗೂ ಮೊದಲೇ ತಿಳಿದಿತ್ತು ಎಂದು ಉಲ್ಲೇಖಿಸಲಾಗಿದೆ.

ಬ್ಯಾನ್‌ಕ್ರಾಫ್ಟ್ ಲೇಖನ: ಖ್ವಾಜಾ ಅವರ ಹೇಳಿಕೆಗೆ ಪೂರಕವಾಗಿ, 2018ರಲ್ಲಿ ಸ್ಯಾಂಡ್‌ಪೇಪರ್‌ನೊಂದಿಗೆ ಸಿಕ್ಕಿಬಿದ್ದಿದ್ದ ಕ್ಯಾಮರೋನ್ ಬ್ಯಾನ್‌ಕ್ರಾಫ್ಟ್ ಅವರು ‘ದಿ ವೆಸ್ಟ್ ಆಸ್ಟ್ರೇಲಿಯನ್’ ಪತ್ರಿಕೆಯಲ್ಲಿ 4,000 ಪದಗಳ ಸುದೀರ್ಘ ಲೇಖನ ಬರೆದು, ಬೌಲರ್‌ಗಳಿಗೂ ಈ ವಿಷಯ ತಿಳಿದಿತ್ತು ಎಂಬರ್ಥದಲ್ಲಿ ಬರೆದಿದ್ದಾರೆ.

ಈ ಎರಡು ಬೆಳವಣಿಗೆಗಳ ನಂತರ, ಅಂದು ತಂಡದ ಉಪನಾಯಕರಾಗಿದ್ದ ಮತ್ತು ಪ್ರಮುಖ ಬೌಲರ್ ಆಗಿದ್ದ ಪ್ಯಾಟ್ ಕಮಿನ್ಸ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಬೇಕು ಎಂಬ ಒತ್ತಾಯಗಳು ಆಸ್ಟ್ರೇಲಿಯಾ ಕ್ರಿಕೆಟ್ ವಲಯದಲ್ಲಿ ಕೇಳಿಬಂದಿದ್ದವು.

ಹೇಝಲ್‌ವುಡ್ ಸ್ಪಷ್ಟನೆ:

ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಜೋಶ್ ಹೇಝಲ್‌ವುಡ್, “ಇದು ಕೇವಲ ಒಬ್ಬರ ಮೇಲೆ ನಡೆಯುತ್ತಿರುವ ಅನ್ಯಾಯದ ದಾಳಿ. 2018ರಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳ ನಡುವೆ ಹೆಚ್ಚಿನ ಸಂವಹನವಿರಲಿಲ್ಲ. ನನಗಾಗಲಿ, ಮಿಚೆಲ್ ಸ್ಟಾರ್ಕ್ ಅಥವಾ ನಾಥನ್ ಲಿಯಾನ್‌ಗಾಗಲಿ ಚೆಂಡಿಗೆ ಸ್ಯಾಂಡ್‌ಪೇಪರ್ ಬಳಸುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.

ಇದಾಗ್ಯೂ, ಪ್ಯಾಟ್ ಕಮಿನ್ಸ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಬೇಕೆಂಬ ಒತ್ತಡ ಹೊರಗಿನಿಂದ ಹೆಚ್ಚಾಗುತ್ತಿದೆ. ಒಂದು ವೇಳೆ ಕ್ರಿಕೆಟ್ ಆಸ್ಟ್ರೇಲಿಯಾ ಅಂತಹ ನಿರ್ಧಾರಕ್ಕೆ ಮುಂದಾದರೆ ತಾವು ನಿವೃತ್ತಿಯಾಗುವುದಾಗಿ ಹೇಝಲ್‌ವುಡ್ ಎಚ್ಚರಿಕೆ ರವಾನಿಸಿದ್ದಾರೆ.

ಇದನ್ನೂ ಓದಿ: 10 ಪಂದ್ಯಗಳಲ್ಲಿ 3 ಶತಕಗಳು, ಬರೋಬ್ಬರಿ 1,071 ರನ್​ಗಳು!

ಒಟ್ಟಾರೆಯಾಗಿ, 8 ವರ್ಷಗಳ ಹಳೆಯ ವಿವಾದವೊಂದು ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ. ಇದರ ಬೆನ್ನಲ್ಲೇ ಜೋಶ್ ಹೇಝಲ್‌ವುಡ್ ನಿವೃತ್ತಿಯ ಎಚ್ಚರಿಕೆಯ ಸಂದೇಶ ರವಾನಿಸಿರುವುದು ಕ್ರಿಕೆಟ್ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮುಂಬರುವ ನ್ಯೂಝಿಲೆಂಡ್ ಸರಣಿಗೂ ಮುನ್ನ ಎದ್ದಿರುವ ಈ ವಿವಾದಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಯಾವ ರೀತಿ ತೆರೆ ಎಳೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us