Kane Williamson: ಟಿ20 ವಿಶ್ವಕಪ್‌ನಲ್ಲಿ ಅಭಿಯಾನ ಆರಂಭಿಸುವ ಮುನ್ನವೇ ನ್ಯೂಜಿಲೆಂಡ್ಗೆ ಬಿಗ್ ಶಾಕ್
New Zealand Cricket Team: ಟಿ20 ವಿಶ್ವಕಪ್ ಆರಂಭವಾಗುವ ಹೊತ್ತಿಗೆ ನ್ಯೂಜಿಲೆಂಡ್ ತಂಡಕ್ಕೆ ದೊಡ್ಡ ಆಘಾತ ಉಂಟಾಗಿದೆ. ತಂಡದ ನಾಯಕ ಮತ್ತು ಪ್ರಮುಖ ಬ್ಯಾಟರ್ ಕೇನ್ ವಿಲಿಯಮ್ಸನ್ ವಿಶ್ವಕಪ್‌ನ ಮೊದಲ ಕೆಲವು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ ಎಂದು ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ (ICC T20 World Cup) ಆಡಿರುವ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಸೋಲು ಕಂಡಿರುವ ನ್ಯೂಜಿಲೆಂಡ್ ತಂಡ (New Zealand Cricket Team) ಆಘಾತಕ್ಕೊಳಗಾಗಿದೆ. ಇದರ ಬೆನ್ನಲ್ಲೇ ಕಿವೀಸ್ ಪಡೆಗೆ ಮತ್ತೊಂದು ಶಾಕ್ ಬಂದೊದಗಿದೆ. ಮೊಣಕೈ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ನಾಯಕ ಕೇನ್ ವಿಲಿಯಮ್ಸನ್ (Kane Williamson) ಐಸಿಸಿ ಟಿ20 ವಿಶ್ವಕಪ್ ಸೂಪರ್-12 ಹಂತದ ಮೊದಲ ಕೆಲವು ಪಂದ್ಯಗಳಲ್ಲಿ ಆಡುವುದು ಅನುಮಾನ ಎಂದು ನ್ಯೂಜಿಲೆಂಡ್ ತಂಡದ ಮುಖ್ಯ ಕೋಚ್ ಗ್ಯಾರಿ ಸ್ಟೆಡ್ (Gary Stead) ಹೇಳಿದ್ದಾರೆ. ಇತ್ತೀಚೆಗಷ್ಟೆ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಟೂರ್ನಿಯ ಸನ್‌ರೈಸರ್ಸ್ ಹೈದರಾಬಾದ್ (SRH) ಪರ ಕೊನೆಯ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಆಡಿರಲಿಲ್ಲ. ಅಲ್ಲದೆ ಟಿ20 ವಿಶ್ವಕಪ್‌ನ ಎರಡೂ ಅಭ್ಯಾಸ ಪಂದ್ಯದಲ್ಲಿ (T20 World Cup Warm-up Match) ವಿಲಿಯಮ್ಸನ್ ಕಣಕ್ಕೆ ಇಳಿದಿರಲಿಲ್ಲ.
ತಂಡದ ಮ್ಯಾನೇಜ್‌ಮೆಂಟ್ ಕೇನ್ ವಿಲಿಯಮ್ಸನ್ ಅವರ ಮೊಣಕೈ ಗಾಯದ ಬಗ್ಗೆ ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಕೋಚ್ ಹೇಳಿದ್ದಾರೆ. ಟಿ20 ವಿಶ್ವಕಪ್‌ನ ಸಂದರ್ಭದಲ್ಲಿ ಒತ್ತಡವಾಗದ ರೀತಿಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ತಂಡ ಸಿದ್ಧವಾಗಿದೆ ಎಂದು ಕೂಡ ಕೋಚ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
‘ಕೇನ್ ವಿಲಿಯಮ್ಸನ್ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಹಾದಿಯಲ್ಲಿ ವೈದ್ಯಕೀಯ ಸಿಬಂದಿ ಕಾರ್ಯ ನಿರ್ವ ಹಿಸುತ್ತಿದೆ. ಆದ್ದರಿಂದ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಆಡಿರಲಿಲ್ಲ. ಅವರ ಅನುಪಸ್ಥಿತಿಗಿಂತ ನಮಗೆ ನಾಯಕನ ಗಾಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗಿದೆ. ಇದರ ಹೊರತಾಗಿಯೂ ತಂಡದ ಇನ್ನುಳಿದ ಆಟಗಾರರೊಂದಿಗೆ ಉತ್ತಮ ಸಂಯೋಜನೆಯೊಂದಿಗೆ ಹೋರಾಡುವ ಬಗ್ಗೆ ನಮಗೆ ವಿಶ್ವಾಸವಿದೆ. ಕೇನ್ ಆರಂಭದ ಕೆಲವು ಪಂದ್ಯಗಳಲ್ಲಿ ಆಡುವುದು ಅನುಮಾನ’ ಎಂದು ಗ್ಯಾರಿ ಸ್ಟೆಡ್ ಹೇಳಿದರು.
ಇನ್ನು ಕಣಕ್ಕಿಳಿಯುವ ಆಟಗಾರರ ಬಗ್ಗೆ ಮಾಹಿತಿ ನೀಡಿದ ಗ್ಯಾರಿ, ‘ನಾವು ಟೂರ್ನಿಯಲ್ಲಿ ಮೂವರು ಸೀಮರ್‌ಗಳು ಹಾಗೂ ಇಬ್ಬರು ಸ್ಪಿನ್ನರ್‌ಗಳ ಮೂಲಕ ದಾಳಿ ಮಾಡಲು ಎದುರು ನೋಡುತ್ತಿದ್ದೇವೆ. ಈಗ ತಂಡದಲ್ಲಿರುವ ಆಟಗಾರರೊಂದಿಗೆ ಯಾವುದೇ ಪರಿಸ್ಥಿತಿಗಳಿಗೆ ಉತ್ತಮ ಸಂಯೋಜನೆಯನ್ನು ರೂಪಿಸಬಹುದಾಗಿದೆ. ಶಾರ್ಜಾ ವಿಕೆಟ್‌ನಲ್ಲಿ ನಾವು ಏನು ಮಾಡಬಹುದು ಎಂದು ಬಗ್ಗೆ ಯೋಚಿಸುತ್ತಿದ್ದೇವೆ ಹಾಗೂ ಪಾಕಿಸ್ತಾನ ವಿರುದ್ಧ ನಮ್ಮ ಮೊದಲನೇ ಹಣಾಹಣಿಯಲ್ಲಿ ಏನಾದರೂ ವಿಭಿನ್ನ ಸಂಗತಿಗಳನ್ನು ಪ್ರಯೋಗ ಮಾಡಬಹುದೇ ಎಂಬುದನ್ನು ನೋಡುತ್ತೇವೆ’ ಎಂದು ತಿಳಿಸಿದ್ದಾರೆ.
ಸೂಪರ್ 12 ಹಂತದಲ್ಲಿ ನ್ಯೂಜಲೆಂಡ್ ತಂಡ 2ನೇ ಗುಂಪಿನಲ್ಲಿದೆ. ಈ ಗುಂಪಿನಲ್ಲಿ ಭಾರತ ಸೇರಿದಂತೆ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡಗಳು ಕೂಡ ಇದೆ. ನ್ಯೂಜಿಲೆಂಡ್ ಈ ಬಾರಿಯ ವಿಶ್ವಕಪ್‌ನಲ್ಲಿ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಲಿದೆ. ಬಳಿಕ ಅಕ್ಟೋಬರ್ 31ರಂದು ಭಾರತದ ವಿರುದ್ಧ ಎರಡನೇ ಪಂದ್ಯವನ್ನು ಆಡಲಿದೆ.
Oman vs Scotland: ಸ್ಕಾಟ್ಲೆಂಡ್ ಮಿಂಚಿನ ಪ್ರದರ್ಶನ: ಹ್ಯಾಟ್ರಿಕ್ ಗೆಲುವಿನೊಂದಿಗೆ ಸೂಪರ್ 12ಗೆ ಲಗ್ಗೆ
(Kane Williamson could miss a few matches in the T20 World Cup New Zealand head coach Gary Stead)