Karun Nair: ಮೂರು ಪಂದ್ಯಗಳಲ್ಲಿ ದ್ವಿಶತಕ, ಶತಕ, ಅರ್ಧಶತಕ… ಆದರೂ ಇಲ್ಲ ಚಾನ್ಸ್
Karun Nair: ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಕರುಣ್ ನಾಯರ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ ಎಂಬುದು ನಿಜ. ಆದರೆ ಅದೇ ಸರಣಿಯ ಕೊನೆಯ ಮ್ಯಾಚ್ನಲ್ಲಿ ಅವರು ಅರ್ಧಶತಕ ಬಾರಿಸಿದ್ದರು. ಅಷ್ಟೇ ಅಲ್ಲದೆ ಆ ಬಳಿಕ ಅವರು ಎಲ್ಲಾ ಪಂದ್ಯಗಳಲ್ಲೂ 50+ ಸ್ಕೋರ್ಗಳಿಸಿದ್ದಾರೆ ಎಂಬುದು ಇಲ್ಲಿ ಉಲ್ಲೇಖಾರ್ಹ.

ಕರುಣ್ ನಾಯರ್ ನಿಜಕ್ಕೂ ಫಾರ್ಮ್ನಲ್ಲಿ ಇಲ್ವಾ? ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗಬೇಕಿದ್ದರೆ ಅವರ ಅಂಶಿ ಅಂಶಗಳತ್ತ ಕಣ್ಣಾಯಿಸಬೇಕು. ಏಕೆಂದರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕರುಣ್ ವಿಫಲರಾಗಿದ್ದಾರೆ ಎಂದು ಅವರನ್ನು ಭಾರತ ಟೆಸ್ಟ್ ತಂಡದಿಂದ ಹೊರಗಿಡಲಾಗಿದೆ. ಆದರೆ ವೈಫಲ್ಯತೆ ನಡುವೆಯೇ ಅವರು ಫಾರ್ಮ್ ಕಂಡುಕೊಂಡಿದ್ದರು ಎಂಬುದೇ ಸತ್ಯ.
ಇಂಗ್ಲೆಂಡ್ ವಿರುದ್ಧದ ಮೊದಲ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಕರುಣ್ ನಾಯರ್ 6 ಇನಿಂಗ್ಸ್ಗಳಲ್ಲಿ ಕೇವಲ 131 ರನ್ ಮಾತ್ರ ಕಲೆಹಾಕಿದ್ದರು. ಅಂದರೆ ಕೇವಲ 21.83 ಸರಾಸರಿಯಲ್ಲಿ ರನ್ಗಳಿಸಿದ್ದರಿಂದ ಕರುಣ್ ನಾಯರ್ ಅವರನ್ನು ನಾಲ್ಕನೇ ಟೆಸ್ಟ್ ಪಂದ್ಯದಿಂದ ಕೈ ಬಿಡಲಾಗಿತ್ತು.
ಇದಾಗ್ಯೂ ಐದನೇ ಟೆಸ್ಟ್ ಪಂದ್ಯದಲ್ಲಿ ಮತ್ತೆ ಕಣಕ್ಕಿಳಿಸಲಾಗಿತ್ತು. ಲಂಡನ್ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕರುಣ್ 57 ರನ್ ಬಾರಿಸಿದ್ದರು. ವಿಶೇಷ ಎಂದರೆ ಈ ಇನಿಂಗ್ಸ್ನಲ್ಲಿ ಕರುಣ್ ನಾಯರ್ ಅವರನ್ನು ಹೊರತುಪಡಿಸಿ ಭಾರತದ ಯಾವುದೇ ಬ್ಯಾಟರ್ ಅರ್ಧಶತಕ ಬಾರಿಸಿರಲಿಲ್ಲ.
ಅಂದರೆ ಭಾರತದ ಪರ ಕೊನೆಯ ಬಾರಿ ಆಡಿದಾಗ ಕರುಣ್ ನಾಯರ್ ಬ್ಯಾಟ್ನಿಂದ ಅರ್ಧಶತಕ ಮೂಡಿಬಂದಿತ್ತು. ಇದಾಗ್ಯೂ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗಿಡಲಾಯಿತು. ಆ ಬಳಿಕ ಕರುಣ್ ನಾಯರ್ ರಣಜಿ ಟೂರ್ನಿಯತ್ತ ಮುಖ ಮಾಡಿದ್ದರು.
ಪ್ರಸ್ತುತ ನಡೆಯತ್ತಿರುವ ರಣಜಿ ಟೂರ್ನಿಯಲ್ಲಿ ಕರುಣ್ ನಾಯರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಆಡಿದ ಮೂರು ಪಂದ್ಯಗಳಲ್ಲಿ ದ್ವಿಶತಕ, ಶತಕ ಹಾಗೂ ಅರ್ಧಶತಕ ಬಾರಿಸಿ ಮಿಂಚಿದ್ದಾರೆ.
- ರಾಜ್ಕೋಟ್ನಲ್ಲಿ ನಡೆದ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಪರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕರುಣ್ ನಾಯರ್ 73 ರನ್ ಬಾರಿಸಿದ್ದರು.
- ಶಿವಮೊಗ್ಗದಲ್ಲಿ ನಡೆದ ಗೋವಾ ವಿರುದ್ಧದ ಪಂದ್ಯದಲ್ಲಿ ಕರುಣ್ ನಾಯರ್ ಬ್ಯಾಟ್ನಿಂದ ಮೂಡಿಬಂದ ಸ್ಕೋರ್ ಬರೋಬ್ಬರಿ 174 ರನ್ಗಳು.
- ತಿರುವನಂತಪುರದಲ್ಲಿ ನಡೆದ ಕೇರಳ ವಿರುದ್ಧದ ಪಂದ್ಯದಲ್ಲಿ ಕರುಣ್ ನಾಯರ್ 233 ರನ್ಗಳ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.
ಈ ಮೂಲಕ ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯ 3 ಪಂದ್ಯಗಳ 4 ಇನಿಂಗ್ಸ್ಗಳಿಂದ ಬರೋಬ್ಬರಿ 488 ರನ್ ಕಲೆಹಾಕಿದ್ದಾರೆ. ಅಂದರೆ ಕರುಣ್ ನಾಯರ್, ಟೀಮ್ ಇಂಡಿಯಾ ಪರ ಅರ್ಧಶತಕ ಸಿಡಿಸಿದ ಬಳಿಕ, ದ್ವಿಶತಕ, ಶತಕ ಹಾಗೂ ಅರ್ಧಶತಕ ಬಾರಿಸಿ ಮಿಂಚಿದ್ದಾರೆ.
ಇದನ್ನೂ ಓದಿ: ಭಾರತ ಟೆಸ್ಟ್ ತಂಡದಿಂದ ಇಬ್ಬರು ಕನ್ನಡಿಗರು ಔಟ್… ಮತ್ತಿಬ್ಬರು ಆಯ್ಕೆ
ಇದಾಗ್ಯೂ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಕರುಣ್ ನಾಯರ್ ಅವರನ್ನು ಆಯ್ಕೆ ಮಾಡಿಲ್ಲ. ಇದಕ್ಕೆ ಕಾರಣವೇನು? ಎಂದು ಕೇಳಿದ್ರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿನ ವೈಫಲ್ಯ ಎಂಬ ಉತ್ತರ ಬರುತ್ತದೆ. ಆದರೆ ಇಂಗ್ಲೆಂಡ್ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ 57 ರನ್ ಬಾರಿಸಿದ ಬಳಿಕ ಕರುಣ್ ನಾಯರ್ 73, 174 ಹಾಗೂ 233 ರನ್ಗಳ ಇನಿಂಗ್ಸ್ ಅನ್ನು ಸಹ ಆಡಿದ್ದಾರೆ. ಈ ಭರ್ಜರಿ ಇನಿಂಗ್ಸ್ಗಳ ಹೊರತಾಗಿಯೂ ಅವರನ್ನು ಭಾರತ ಟೆಸ್ಟ್ ತಂಡದಿಂದ ಹೊರಗಿಟ್ಟಿರುವುದು ಅಚ್ಚರಿಯೇ ಸರಿ.
