
ಭಾರತ ಹಾಗೂ ನ್ಯೂಝಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ಮುಕ್ತಾಯಗೊಂಡ ಬೆನ್ನಲ್ಲೇ, ಕ್ರಿಕೆಟ್ ಮೈದಾನದಲ್ಲಿ ನಡೆದ ಅಪರೂಪದ ಹಾಗೂ ಹೃದಯಸ್ಪರ್ಶಿ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಪಂದ್ಯದ ನಂತರ ತಮಗೆ ಸಿಕ್ಕ ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಬಹುಮಾನವನ್ನು ಭಾರತದ ಸ್ಟಾರ್ ಆಟಗಾರ ಕೆ.ಎಲ್. ರಾಹುಲ್ ಅವರು ಮೈದಾನದ ಅಧಿಕಾರಿಯೊಬ್ಬರಿಗೆ ಉಡುಗೊರೆಯಾಗಿ ನೀಡುವ ಮೂಲಕ ಮತ್ತೊಮ್ಮೆ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
ವೆಲ್ಲಿಂಗ್ಟನ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಅವರು ತಮ್ಮ ಅದ್ಭುತ ಪ್ರದರ್ಶನಕ್ಕಾಗಿ ವಿಶೇಷ ‘ಇಂಪ್ಯಾಕ್ಟ್ ಅವಾರ್ಡ್’ ಮುಡಿಗೇರಿಸಿಕೊಂಡಿದ್ದರು. ಈ ಪ್ರಶಸ್ತಿಯ ಭಾಗವಾಗಿ ಅವರಿಗೆ ನಗದು ಚೆಕ್ ಹಾಗೂ ಹೊಚ್ಚಹೊಸ ನೋವಾ ಪ್ಲಸ್ ಸ್ಮಾರ್ಟ್‌ಫೋನ್ ಅನ್ನು ಬಹುಮಾನವಾಗಿ ನೀಡಲಾಗಿತ್ತು. ವೇದಿಕೆಯ ಮೇಲೆ ಪ್ರಶಸ್ತಿ ಸ್ವೀಕರಿಸಿದ ರಾಹುಲ್ ಅವರ ಚಿತ್ರಗಳು ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು.
ಪ್ರಶಸ್ತಿ ಪ್ರದಾನ ಸಮಾರಂಭ ಮುಗಿದ ತಕ್ಷಣ ಕೆ.ಎಲ್. ರಾಹುಲ್ ಅವರು ಎಲ್ಲರೂ ಬೆರಗಾಗುವಂತಹ ನಿರ್ಧಾರವೊಂದನ್ನು ತಗೆದುಕೊಂಡರು. ತಮಗೆ ಸಿಕ್ಕ ಬೆಲೆಬಾಳುವ ಸ್ಮಾರ್ಟ್‌ಫೋನ್ ಅನ್ನು ತಮ್ಮ ಬಳಿ ಇಟ್ಟುಕೊಳ್ಳುವ ಬದಲು, ಆ ಪಂದ್ಯದ ಯಶಸ್ವಿ ಆಯೋಜನೆಗಾಗಿ ಮೈದಾನದಲ್ಲಿ ಹಗಲಿರುಳು ಶ್ರಮಿಸಿದ ಅಲ್ಲಿನ ಅಧಿಕಾರಿಯೊಬ್ಬರಿಗೆ ನೇರವಾಗಿ ಉಡುಗೊರೆಯಾಗಿ ನೀಡಿದರು. ರಾಹುಲ್ ಅವರಿಂದ ಈ ನಿರೀಕ್ಷಿಸದ ಉಡುಗೊರೆ ಪಡೆದ ಆ ಅಧಿಕಾರಿಯ ಮುಖದಲ್ಲಿ ಆನಂದ ಮೂಡಿತು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೆ.ಎಲ್. ರಾಹುಲ್ ಅವರು ತಮ್ಮ ಪ್ರಶಸ್ತಿಗಳನ್ನು ಅಭಿಮಾನಿಗಳಿಗೆ ಅಥವಾ ಮೈದಾನದ ಸಿಬ್ಬಂದಿಗೆ ನೀಡುತ್ತಿರುವುದು ಇದೇ ಮೊದಲೇನಲ್ಲ.
ಇದನ್ನೂ ಓದಿ: 184 ರನ್‌ಗೆ 7 ವಿಕೆಟ್: 242 ರನ್ ಚಚ್ಚಿ ಹೊಸ ಇತಿಹಾಸ ಬರೆದ ತೌಹಿದ್ ಹೃದೋಯ್!
ಪ್ರಸ್ತುತ, ತಮಗೆ ಲಭಿಸಿದ ಸ್ಮಾರ್ಟ್‌ಫೋನ್ ಅನ್ನು ಮೈದಾನದ ಅಧಿಕಾರಿಗೆ ಉಡುಗೊರೆಯಾಗಿ ನೀಡಿದ ಈ ಅಪರೂಪದ ಘಟನೆ ಮುನ್ನೆಲೆಗೆ ಬರುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಕೆ.ಎಲ್. ರಾಹುಲ್ ಅವರ ಉದಾರ ಗುಣಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ನೆಟ್ಟಿಗರು ಹಾಗೂ ಕ್ರಿಕೆಟ್ ಪ್ರೇಮಿಗಳು ರಾಹುಲ್ ಅವರ ಈ ನಡೆಗೆ ಮನಸೋತು, ಅವರನ್ನು “ರಿಯಲ್ ಹೀರೋ” ಎಂದು ಕೊಂಡಾಡುತ್ತಿದ್ದಾರೆ. ಮೈದಾನದ ಒಳಗೆ ಬ್ಯಾಟಿಂಗ್ ಮೂಲಕ ಮಿಂಚುವ ರಾಹುಲ್, ಮೈದಾನದ ಹೊರಗೂ ತಮ್ಮ ದೊಡ್ಡ ಗುಣದ ಮೂಲಕ ತಾವೊಬ್ಬ ಶ್ರೇಷ್ಠ ವ್ಯಕ್ತಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.