
13 ವರ್ಷಗಳ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಣಕ್ಕಿಳಿದಿದ್ದ ಕೊಚ್ಚಿ ಟಸ್ಕರ್ಸ್ ಕೇರಳ ತಂಡವು ಮತ್ತೆ ಸುದ್ದಿಯಲ್ಲಿದೆ. ಈ ಬಾರಿ ಸುದ್ದಿಯಲ್ಲಿರುವುದು ಬಿಸಿಸಿಐ ಜೊತೆಗಿನ ಕೇಸ್ ವಿಷಯದಿಂದಾಗಿ. ಅಂದರೆ 2011 ರಲ್ಲಿ ಐಪಿಎಲ್ನಲ್ಲಿ ಕಣಕ್ಕಿಳಿದಿದ್ದ ಕೊಚ್ಚಿ ಟಸ್ಕರ್ಸ್ ಕೇರಳ ತಂಡವನ್ನು 2012 ರಲ್ಲಿ ಬ್ಯಾನ್ ಮಾಡಲಾಗಿತ್ತು.
ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿಯು ಮೊದಲ ಸೀಸನ್ನಲ್ಲೇ ಫ್ರ್ಯಾಂಚೈಸ್ ಶುಲ್ಕದ ಭಾಗವಾಗಿರುವ ಶೇಕಡಾ 10 ರಷ್ಟು ಬ್ಯಾಂಕ್ ಗ್ಯಾರಂಟಿಯನ್ನು ಪಾವತಿಸಲು ವಿಫಲವಾಗಿತ್ತು. ಹೀಗಾಗಿ ರೊಂಡಾ ಸ್ಪೋರ್ಟ್ಸ್ ವರ್ಲ್ಡ್ (RSW) – ಕೊಚ್ಚಿ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ (KCPL) ಒಡೆತನದಲ್ಲಿದ್ದ ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿಯನ್ನು ಐಪಿಎಲ್ನಿಂದ ಕೈ ಬಿಡಲಾಯಿತು.
ಬಿಸಿಸಿಐಯ ಈ ನಿರ್ಧಾರದ ವಿರುದ್ಧ ಕೊಚ್ಚಿ ಫ್ರಾಂಚೈಸಿ 2012 ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಈ ಕೇಸ್ ಸಂಬಂಧ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನಂತೆ ಬಿಸಿಸಿಐ, ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿ ಮಾಲೀಕರಿಗೆ 538 ಕೋಟಿ ರೂ. ಪರಿಹಾರ ಮೊತ್ತವಾಗಿ ಪಾವತಿಸಬೇಕಿದೆ.
ಈ ಪರಿಹಾರದ ಸುದ್ದಿಯೊಂದಿಗೆ ಕೊಚ್ಚಿ ಟಸ್ಕರ್ಸ್ ಕೇರಳ ತಂಡದ ವಿಷಯಗಳು ಮತ್ತೆ ಮುನ್ನಲೆಗೆ ಬಂದಿವೆ. ಅದರಲ್ಲೂ ಗೂಗಲ್ನಲ್ಲಿ ಈ ತಂಡದಲ್ಲಿದ್ದ ಆಟಗಾರರು ಯಾರೆಲ್ಲಾ ಎಂಬುದರ ಹುಡುಕಾಟ ಕೂಡ ಶುರುವಾಗಿದೆ. ಕೇವಲ ಒಂದು ಸೀಸನ್ನಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಈ ತಂಡದಲ್ಲಿ ಸ್ಟಾರ್ ಆಟಗಾರರೇ ದಂಡೇ ಕಾಣಿಸಿಕೊಂಡಿದ್ದರು.
25 ಸದಸ್ಯರ ಈ ತಂಡದ ನಾಯಕನಾಗಿ ಕಾಣಿಸಿಕೊಂಡಿದ್ದು ಶ್ರೀಲಂಕಾದ ಮಹೇಲ ಜಯವರ್ಧನೆ. ಇನ್ನು ಈ ತಂಡದಲ್ಲಿದ್ದ ವಿದೇಶಿ ಆಟಗಾರರೆಂದರೆ, ಬ್ರೆಂಡನ್ ಮೆಕಲಂ, ಸ್ಟೀವ್ ಸ್ಮಿತ್, ಒವೈಸ್ ಶಾ, ಮುತ್ತಯ್ಯ ಮುರಳೀಧರನ್, ತಿಸಾರ ಪೆರೇರಾ, ಸ್ಟೀವ್ ಓಕೀಫ್, ಬ್ರಾಡ್ ಹಾಡ್ಜ್ ಹಾಗೂ ಮಹೇಲ ಜಯವರ್ಧನೆ.
ಇವರೊಂದಿಗೆ ಭಾರತದ ಸ್ಟಾರ್ ಆಟಗಾರರಾದ ರವೀಂದ್ರ ಜಡೇಜಾ, ಶ್ರೀಶಾಂತ್, ಆರ್ಪಿ ಸಿಂಗ್, ವಿವಿಎಸ್ ಲಕ್ಷ್ಮಣ್ ಹಾಗೂ ವಿನಯ್ ಕುಮಾರ್ ಕೂಡ ಕೊಚ್ಚಿ ಟಸ್ಕರ್ಸ್ ತಂಡದಲ್ಲಿದ್ದರು.
ಆದರೆ ಬಿಸಿಸಿಐ ಹಾಗೂ ಫ್ರಾಂಚೈಸಿ ಮಾಲೀಕರ ನಡುವೆ ಜಟಾಪಟಿಯಿಂದಾಗಿ ಈ ತಂಡವನ್ನು 2012 ರಿಂದ ಕೈ ಬಿಡಲಾಯಿತು. ಅಲ್ಲದೆ 2012 ಮತ್ತು 2013 ರಲ್ಲಿ 9 ತಂಡಗಳೊಂದಿಗೆ ಐಪಿಎಲ್ ಆಯೋಜಿಸಲಾಗಿತ್ತು. 2014 ರ ವೇಳೆ ಪುಣೆ ವಾರಿಯರ್ಸ್ ತಂಡವನ್ನು ಕೈ ಬಿಡುವ ಮೂಲಕ ತಂಡಗಳ ಸಂಖ್ಯೆಯನ್ನು 8 ಕ್ಕೆ ಇಳಿಸಲಾಯಿತು.
ಅಂದರೆ 2011 ರ ಬಳಿಕ ಕೊಚ್ಚಿ ಟಸ್ಕರ್ಸ್ ತಂಡ ಐಪಿಎಲ್ನಿಂದ ಮರೆಯಾದರೆ, 2013 ರ ಬಳಿಕ ಪುಣೆ ವಾರಿಯರ್ಸ್ ತಂಡವನ್ನು ಕೈ ಬಿಡಲಾಯಿತು. ಸಹಾರಾ ಗ್ರೂಪ್ ಸ್ಪೋರ್ಟ್ಸ್ ಲಿಮಿಟೆಡ್ ಒಡೆತನದಲ್ಲಿದ್ದ ಪುಣೆ ವಾರಿಯರ್ಸ್ ಫ್ರಾಂಚೈಸಿಯು 2013 ರಲ್ಲಿ ಹಣಕಾಸಿನ ಸಮಸ್ಯೆಗಳನ್ನು ಎದುರಿಸಿದ್ದರಿಂದ ಈ ಫ್ರಾಂಚೈಸಿಯನ್ನು ರದ್ದುಗೊಳಿಸಲು ಬಿಸಿಸಿಐ ನಿರ್ಧರಿಸಿತು.
ಅದರಂತೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಕೊಚ್ಚಿ ಟಸ್ಕರ್ಸ್ ಕೇರಳ ಹಾಗೂ ಪುಣೆ ವಾರಿಯರ್ಸ್ ಇಂಡಿಯಾ ತಂಡಗಳ ಯುಗಾಂತ್ಯವಾಯಿತು. ಈ ಯುಗಾಂತ್ಯದ ಬಳಿಕ ಇದೀಗ ಕೊಚ್ಚಿ ಟಸ್ಕರ್ಸ್ ಕೇರಳ ತಂಡವು ಮತ್ತೆ ಸುದ್ದಿಯಲ್ಲಿದೆ. ಈ ಸುದ್ದಿಯೊಂದಿಗೆ ಕೆಟಿಕೆ ತಂಡದಲ್ಲಿದ್ದ ಆಟಗಾರರು ಯಾರೆಲ್ಲಾ ಎಂಬ ಹುಡುಕಾಟ ಕೂಡ ಶುರುವಾಗಿರುವುದು ವಿಶೇಷ.
ಇದನ್ನೂ ಓದಿ: ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ತಂಡಕ್ಕೆ ಟಿಮ್ ಡೇವಿಡ್ ಎಂಟ್ರಿ..!