ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ (India vs England) ನಡುವಣ 5ನೇ ಟೆಸ್ಟ್ ಪಂದ್ಯವು ಇದೀಗ ರೋಚಕ ಕಾದಾಟಕ್ಕೆ ಸಾಕ್ಷಿಯಾಗುತ್ತಿದೆ. ಮೊದಲ ಎರಡು ದಿನಗಳಲ್ಲಿ ಸರಾಗವಾಗಿ ಸಾಗಿದ್ದ ಪಂದ್ಯವು ಇದೀಗ ಆಟಗಾರರ ನಡುವಿನ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿದೆ. ಪಂದ್ಯದ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜಾನಿ ಬೈರ್ಸ್ಟೋವ್ (Jonny Bairstow) ಭಾರತೀಯ ಬೌಲರ್ಗಳನ್ನು ಕೆಣಕುವ ಪ್ರಯತ್ನ ಮಾಡಿದ್ದರು. ಇದನ್ನು ಗಮನಿಸಿದ ವಿರಾಟ್ ಕೊಹ್ಲಿ (Virat Kohli) ವಾಗ್ವಾದಕ್ಕೆ ಇಳಿದರು. ಇತ್ತ ಕೊಹ್ಲಿಯ ಆಗಮನದೊಂದಿಗೆ ಬೈರ್ಸ್ಟೋವ್ ತಣ್ಣಗಾದಂತೆ ಕಂಡು ಬಂದರು.
ಇದಾಗ್ಯೂ ಕೊಹ್ಲಿಯ ಕೋಪ ಕೊನೆಗೊಂಡಿರಲಿಲ್ಲ. ನೇರವಾಗಿ ಇಂಗ್ಲೆಂಡ್ ಆಟಗಾರನ ಬಳಿ ಬಂದು ಎಚ್ಚರಿಕೆ ನೀಡಿದರು. ಈ ಮಾತಿನ ಚಕಮಕಿ ನಡುವೆ ಬೈರ್ಸ್ಟೋವ್ ಆಯ್ತು ಎಂಬ ಉತ್ತರ ನೀಡುತ್ತಿದ್ದಂತೆ, ಅತ್ತ ಕಡೆಯಿಂದ ಕೊಹ್ಲಿಯು ಬಾಯಿ ಮುಚ್ಕೊಂಡು ಆಡುವಂತೆ ಸನ್ನೆ ಮಾಡಿ ಸೂಚಿಸಿದರು. ಇದೀಗ ವಿರಾಟ್ ಕೊಹ್ಲಿಯ ಈ ವಾರ್ನಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Virat vs Bairstow!!!!pic.twitter.com/0iUNnfeBtr
— Johns. (@CricCrazyJohns) July 3, 2022
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ರಿಷಭ್ ಪಂತ್ (146) ಹಾಗೂ ರವೀಂದ್ರ ಜಡೇಜಾ (104) ಅವರ ಶತಕದ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ 416 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಬ್ಯಾಟ್ ಬೀಸಿರುವ ಇಂಗ್ಲೆಂಡ್ 2ನೇ ದಿನದಾಟದ ಅಂತ್ಯಕ್ಕೆ 84 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಮೂರನೇ ದಿನದಾಟದಲ್ಲಿ ಬೆನ್ ಸ್ಟೋಕ್ಸ್ ವಿಕೆಟ್ ಕಳೆದುಕೊಂಡಿರುವ ಇಂಗ್ಲೆಂಡ್ ತಂಡವು 43 ಓವರ್ ವೇಳೆಗೆ 6 ವಿಕೆಟ್ ನಷ್ಟಕ್ಕೆ 185 ರನ್ ಕಲೆಹಾಕಿದೆ.
ಟೀಮ್ ಇಂಡಿಯಾ ಪರ ನಾಯಕ ಜಸ್ಪ್ರೀತ್ ಬುಮ್ರಾ 3 ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಹಾಗೂ ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್ ಪಡೆದಿದ್ದಾರೆ.
ಉಭಯ ತಂಡಗಳ ಪ್ಲೇಯಿಂಗ್ 11 ಹೀಗಿದೆ:
ಭಾರತ ಪ್ಲೇಯಿಂಗ್ 11: ಶುಭಮನ್ ಗಿಲ್ , ಚೇತೇಶ್ವರ ಪೂಜಾರ , ಹನುಮ ವಿಹಾರಿ , ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್ , ರಿಷಭ್ ಪಂತ್ ( ವಿಕೆಟ್ ಕೀಪರ್ ) , ರವೀಂದ್ರ ಜಡೇಜಾ , ಶಾರ್ದೂಲ್ ಠಾಕೂರ್ , ಮೊಹಮ್ಮದ್ ಶಮಿ , ಮೊಹಮ್ಮದ್ ಸಿರಾಜ್ , ಜಸ್ಪ್ರೀತ್ ಬುಮ್ರಾ (ನಾಯಕ)
ಇಂಗ್ಲೆಂಡ್ ಪ್ಲೇಯಿಂಗ್ 11: ಅಲೆಕ್ಸ್ ಲೀಸ್ , ಝಾಕ್ ಕ್ರಾಲಿ , ಒಲ್ಲಿ ಪೋಪ್ , ಜೋ ರೂಟ್ , ಜಾನಿ ಬೈರ್‌ಸ್ಟೋ , ಬೆನ್ ಸ್ಟೋಕ್ಸ್ (ನಾಯಕ) ಸ್ಯಾಮ್ ಬಿಲ್ಲಿಂಗ್ಸ್ , ಮ್ಯಾಟಿ ಪಾಟ್ಸ್ , ಸ್ಟುವರ್ಟ್ ಬ್ರಾಡ್ , ಜ್ಯಾಕ್ ಲೀಚ್ , ಜೇಮ್ಸ್ ಆಂಡರ್ಸನ್
Published On - 4:43 pm, Sun, 3 July 22